ದಿವಾಳಿ ಕಾಯ್ದೆ: 2.8 ಲಕ್ಷ ಕೋಟಿ ರೂ. ಸಾಲ ವಸೂಲಿ

0
23

ಕೇಂದ್ರ ಸರಕಾರ ಜಾರಿಗೊಳಿಸಿದ ಋುಣಬಾಧ್ಯತೆ ಮತ್ತು ದಿವಾಳಿತನ ಪ್ರಕ್ರಿಯೆ ನೀತಿಯಿಂದ(ಐಬಿಸಿ) ಉತ್ತಮ ಫಲ ದೊರೆಯುತ್ತಿದೆ. ಎರಡು ಬೃಹತ್‌ ಕಂಪನಿಗಳಿಂದ 2.8 ಲಕ್ಷ ಕೋಟಿ ರೂ. ಸಾಲ ವಸೂಲಿಯಾಗಿದೆ ಎಂದು ಕಾರ್ಪೊರೇಟ್‌ ಸಚಿವಾಲಯ ಹೇಳಿದೆ.

ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೊಳಿಸಿದ ಋುಣಬಾಧ್ಯತೆ ಮತ್ತು ದಿವಾಳಿತನ ಪ್ರಕ್ರಿಯೆ ನೀತಿಯಿಂದ(ಐಬಿಸಿ) ಉತ್ತಮ ಫಲ ದೊರೆಯುತ್ತಿದೆ. ಎರಡು ಬೃಹತ್‌ ಕಂಪನಿಗಳಿಂದ 2.8 ಲಕ್ಷ ಕೋಟಿ ರೂ. ಸಾಲ ವಸೂಲಿಯಾಗಿದೆ ಎಂದು ಕಾರ್ಪೊರೇಟ್‌ ಸಚಿವಾಲಯ ಹೇಳಿದೆ.

ಭೂಷಣ್‌ ಸ್ಟೀಲ್‌ ಆ್ಯಂಡ್‌ ಪವರ್‌ ಮತ್ತು ಎಸ್ಸಾರ್‌ ಸ್ಟೀಲ್‌ ಎನ್ನುವ ಎರಡು ಬೃಹತ್‌ ಕಂಪನಿಗಳನ್ನು ದಿವಾಳಿ ಪ್ರಕ್ರಿಯೆಗೆ ಒಳಪಡಿಸಿದ್ದು 1.8 ಲಕ್ಷ ಕೋಟಿ ರೂ. ಸಾಲ ವಸೂಲಿ ಮಾಡಲಾಗಿದೆ. ಇದರ ಜೊತೆಗೆ 1 ಲಕ್ಷ ಕೋಟಿ ರೂ. ಮೌಲ್ಯದ ಸಣ್ಣ ಮತ್ತು ಮಧ್ಯಮ ಗಾತ್ರದ ಸಾಲ ಖಾತೆಗಳನ್ನು ಇತ್ಯರ್ಥ ಮಾಡಲಾಗಿದೆ. 100 ಪ್ರಕರಣಗಳನ್ನು ಐಬಿಸಿ ಅನುಸಾರ ಇತ್ಯರ್ಥ ಮಾಡಲಾಗಿದೆ.

”ದಿವಾಳಿ ಪ್ರಕ್ರಿಯೆ ಕಾನೂನು ಉತ್ತಮ ಫಲಿತಾಂಶ ನೀಡಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳ ವಸೂಲಾಗದ ಸಾಲದ ಹೊರೆಯನ್ನು ತಗ್ಗಿಸುವಲ್ಲಿ ಐಬಿಸಿ ಪ್ರಭಾವ ಬೀರಲಿದೆ,” ಎಂದು ಕಾರ್ಪೋರೇಟ್‌ ಸಚಿವಾಲಯದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. 

10 ಲಕ್ಷ ಕೋಟಿ ರೂ. ಎನ್‌ಪಿಎಯಲ್ಲಿ 2.8 ಲಕ್ಷ ಕೋಟಿ ರೂ. ವಸೂಲಾಗಿರುವುದು ಕಡಿಮೆ ಸಾಧನೆಯಲ್ಲ. ಇದು ಸಣ್ಣ ಮೊತ್ತವಲ್ಲ,” ಎಂದು ಅಧಿಕಾರಿಗಳು ಹೇಳಿದ್ದಾರೆ. 

ಎಸ್ಸಾರ್‌ ಸ್ಟೀಲ್‌, ಜೇಪಿ ಇನ್ಫ್ರಾ ಟೆಕ್‌ ಸೇರಿ 9 ಕಂಪನಿಗಳ ದಿವಾಳಿ ಪ್ರಕರಣಗಳನ್ನು ಮಾರ್ಚ್‌ ಒಳಗೆ ಇತ್ಯರ್ಥಪಡಿಸಬೇಕು ಎಂದು ಸರಕಾರವು ಬ್ಯಾಂಕ್‌ಗಳು ಹಾಗೂ ದಿವಾಳಿ ಪ್ರಕ್ರಿಯೆ ನಿರ್ವಹಿಸುವವರಿಗೆ ಗಡುವು ವಿಧಿಸಿತ್ತು. ಮುಖ್ಯವಾಗಿ ಎಸ್ಸಾರ್‌ ಸ್ಟೀಲ್‌ ಹಾಗೂ ಜೇಪಿ ಇನ್ಫ್ರಾ ಟೆಕ್‌ ಪ್ರಕರಣಕ್ಕೆ ವಿಶೇಷ ಒತ್ತು ನೀಡಲಾಗಿತ್ತು. ಡಜನುಗಟ್ಟಲೆ ಕಂಪನಿಗಳು ದಿವಾಳಿ ಪ್ರಕ್ರಿಯೆ ಎದುರಿಸುತ್ತಿವೆ. 

ಏನಿದು ದಿವಾಳಿ ಪ್ರಕ್ರಿಯೆ? 

ದೇಶದ ಬ್ಯಾಂಕಿಂಗ್‌ ವಲಯವನ್ನು ಕಾಡುತ್ತಿರುವ ವಸೂಲಾಗದ ಸಾಲದ ಬಿಕ್ಕಟ್ಟಿನ ಪರಿಹಾರಕ್ಕಾಗಿ ಕೇಂದ್ರ ಸರಕಾರವು 2016ರ ಡಿಸೆಂಬರ್‌ನಲ್ಲಿ ಜಾರಿಗೊಳಿಸಿದ ಮಹತ್ವದ ಆರ್ಥಿಕ ನೀತಿಯೇ ಹೊಸ ದಿವಾಳಿ ಪ್ರಕ್ರಿಯೆ ಕಾಯಿದೆ(ಐಬಿಸಿ). ಇದಾಗಿ ಎರಡೇ ವರ್ಷಗಳಲ್ಲಿ ಕಂಪನಿಗಳು 3 ಲಕ್ಷ ಕೋಟಿ ರೂ. ಸುಸ್ತಿ ಸಾಲವನ್ನು ಬ್ಯಾಂಕ್‌ಗಳಿಗೆ ಮರು ಪಾವತಿ ಮಾಡಿದ್ದು, ದಿವಾಳಿಯಾಗುವುದರಿಂದ ಕಂಪನಿಗಳು ತಪ್ಪಿಸಿಕೊಂಡಿವೆ. ಐಬಿಸಿ ಪ್ರಕಾರ 180 ದಿನಗಳಲ್ಲಿ ದಿವಾಳಿತನ ಪ್ರಕ್ರಿಯೆ ಪೂರ್ಣವಾಗಬೇಕು. ನಂತರ 90 ದಿನ ವಿಸ್ತರಿಸಬಹುದು. ಒಟ್ಟು 270 ದಿನಗಳಲ್ಲಿ ಪೂರ್ಣಗೊಳಿಸುವುದು ಕಡ್ಡಾಯ.