ದಾಂಡೇಲಿ: ನವೆಂಬರ್ ನಲ್ಲಿ ದೇಶದ ಮೊದಲ ಕೆನೋಪಿ ವಾಕ್ ಪ್ರವಾಸಿಗರಿಗೆ ಮುಕ್ತ

0
716

ಭಾರತದ ಮೊದಲ ಕೆನೋಪಿ ವಾಕ್ ಇದೇ ನವೆಂಬರ್ ಮಧ್ಯಭಾಗದ ವೇಳೆಗೆ ಪ್ರವಾಸಿಗರಿಗೆ ಮುಕ್ತವಾಗಲಿದೆ.ಈ ಫೆಬ್ರವರಿಯಲ್ಲಿ ಉದ್ಘಟನೆಯಾಗಿದ್ದ ಕೆನೋಪಿ ವಾಕ್ ಸೌಲಭ್ಯವನ್ನು ಮಳೆಗಾಲದ ಕಾರಣಕ್ಕೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿತ್ತು.

ಕರ್ನಾಟಕ ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆಗಳು ಜಂಟಿಯಾಗಿ ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳಲ್ಲಿ 30 ಮೀಟರ್ ಎತ್ತರದ 240 ಮೀಟರ್ ಕೆನೋಪಿ ವಾಕ್ (ಮೇಲಾವರಣ ರಸ್ತೆ)ಯನ್ನು ನಿರ್ಮಾಣ ಮಾಡಿದೆ.84 ಲಕ್ಷ ರು. ವೆಚ್ಚದಲ್ಲಿ ತಯಾರಾಗಿರುವ ಈ ಕೆನೋಪಿ ವಾಕ್ ಉತ್ತರ ಕನ್ನಡ ಜಿಲ್ಲೆ ಕ್ಯಾಸೆಲ್ ರಾಕ್ ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿದೆ.

 
ಮೂರು ವರ್ಷಗಳ ಹಿಂದೆ ಸಿದ್ದವಾದ ಈ ಯೋಜನೆ ಪರಿಸರ ಸಂರಕ್ಷಕರ ಆರೋಪಗಳಿಂದಾಗಿ ವಿಳಂಬವಾಗಿತ್ತು.ಬಳಿಕ ಕೇಂದ್ರ ಸರ್ಕಾರ ಈ ಅಕ್ಷೇಪಣೆಗಳನ್ನು ತೆರವು ಮಾಡಿದ್ದು 2018 ರ ಫೆಬ್ರುವರಿ 18 ರಂದು ಅಂದಿನ ಕೈಗಾರಿಕೆ ಮಂತ್ರಿ ಆರ್. ವಿ. ದೇಶಪಾಂಡೆ ಈ ಕೆನೋಪಿ ವಾಕ್ ಅನ್ನು ಔಪಚಾರಿಕವಾಗಿ ಉದ್ಘಾಟಿಸಿದ್ದರು. ಸಧ್ಯ ಇದು ವಿಶ್ವದ ಕೆಲವೇ ದೇಶಗಳಲ್ಲಿದೆ.
 
ಏಪ್ರಿಲ್ ನಲ್ಲಿ ಅರಣ್ಯ ಇಲಾಖೆ ಹಾಗೂ ಜಂಗಲ್ ಲಾಡ್ಜ್ ಗಳು ಮತ್ತು ರೆಸಾರ್ಟ್ಸ್ (ಜೆಎಲ್ಆರ್) ಗಳ ನಡುವಿನ ಒಪ್ಪಂದಕ್ಕೆ ಸಹಿ ಹಾಕಿದ್ದಾದರೂ ಮಳೆಗಾಲದ ಕಾರಣ ಕ್ಯಾಸಲ್ ರಾಕ್ ಸೇರಿದಂತೆ ಎಲ್ಲಾ ಸಂರಕ್ಷಿತ ಪ್ರದೇಶಗಳಲ್ಲಿ ಪ್ರವಾಸಿಗರ ಆಗಮನವನ್ನು ನಿಷೇಧಿಸಲಾಯಿತು.
 
ಕೆನೋಪಿ ವಾಕ್ ಆನಂದ ಅನುಭವಿಸಲಿಕ್ಕಾಗಿ ಏಜನ್ಸಿಗಳು ಟಿಕೆಟ್ ಶುಲ್ಕವನ್ನು ನಿಗದಿ ಮಾಡಿದೆ. ಅದರಂತೆ ವಯಸ್ಕರಿಗೆ 500 ರು. ಹಾಗೂ  12 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ 300 ರೂ ನಿಗದಿಯಾಗಿದೆ.ಸಧ್ಯ ಮಾನ್ಸೂನ್ ಮಳೆಗಾಲ ಮುಗಿದಿದ್ದು ಇಲಾಖೆ ಮತ್ತು ಆಪರೇಟಿಂಗ್ ಏಜೆನ್ಸಿಗಳು ಪ್ರವಾಸಿಗರಿಗೆ ಕೆನೋಪಿ ವಾಕ್ ಸೌಲಭ್ಯ ತೆರೆಯಲು ಸಜ್ಜಾಗುತ್ತಿವೆ. ರಸ್ತೆ ಮತ್ತು ಕುಡಿಯುವ ನೀರಿನ ಮೂಲಭೂತ ವ್ಯವಸ್ಥೆಗಳನ್ನು ಇಲಾಖೆ ನಿರ್ವಹಿಸಲಿದೆ.15 ದಿನಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.