ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತ-ಸಿಂಗಾಪುರ ನೌಕಾಪಡೆಗಳ ಜಂಟಿ ಕವಾಯತು

0
23

ದಕ್ಷಿಣ ಚೀನಾ ಸಮುದ್ರದಲ್ಲಿ ನಡೆಯುವ ವಾರ್ಷಿಕ ದ್ವಿಪಕ್ಷೀಯ ನೌಕಾ ಕವಾಯತುಗಳಲ್ಲಿ ಭಾರತ ಮತ್ತು ಸಿಂಗಾಪುರದ ನೌಕಾಪಡೆಗಳು ಪಾಲ್ಗೊಂಡಿವೆ.

ಹೊಸದಿಲ್ಲಿ: ದಕ್ಷಿಣ ಚೀನಾ ಸಮುದ್ರದಲ್ಲಿ ನಡೆಯುವ ವಾರ್ಷಿಕ ದ್ವಿಪಕ್ಷೀಯ ನೌಕಾ ಕವಾಯತುಗಳಲ್ಲಿ ಭಾರತ ಮತ್ತು ಸಿಂಗಾಪುರದ ನೌಕಾಪಡೆಗಳು ಪಾಲ್ಗೊಂಡಿವೆ. 

ಮೇ 19 ರ ಭಾನುವಾರ ಆರಂಭವಾದ ಯುದ್ಧ ನೌಕೆಗಳ ಕವಾಯತು ಮೇ 22 ರ ಬುಧವಾರದ ವರೆಗೆ ನಡೆಯಲಿವೆ. ಆಗಸ ಅಥವಾ ನೆಲದ ಮೇಲಿನ ಗುರಿಗಳನ್ನು ಉಡಾಯಿಸುವುದು, ಅತ್ಯಾಧುನಿಕ ವೈಮಾನಿಕ ಕಣ್ಗಾವಲು (ಟ್ರ್ಯಾಕಿಂಗ್), ಸಂಯೋಜಿತ ಗುರಿ ಛೇದನಾ ಕವಾಯತು ಮತ್ತು ವ್ಯೂಹಾತ್ಮಕ ಕವಾಯತುಗಳನ್ನು ಈ ಸಂದರ್ಭ ನಡೆಸಲಾಗುತ್ತಿದೆ ಎಂದು ಭಾರತೀಯ ನೌಕಾಪಡೆ ದಿಲ್ಲಿಯಲ್ಲಿ ತಿಳಿಸಿದೆ. 

ಭಾರತೀಯ ನೌಕಾಪಡೆಯ ಐಎನ್‌ಎಸ್‌ ಕೋಲ್ಕತ ಮತ್ತು ಐಎನ್‌ಎಸ್‌ ಶಕ್ತಿ ನೌಕೆಗಳು ಈ ಕವಾಯತಿನಲ್ಲಿ ಭಾಗವಹಿಸಿವೆ. ದೀರ್ಘವ್ಯಾಪ್ತಿಯ ಸಾಗರ ಗಸ್ತು ವಿಮಾನ ಪೊಸಿಡೋನ್-81 ಕೂಡ ಇದರಲ್ಲಿ ಭಾಗಿಯಾಗಿದೆ. ಸಿಂಗಾಪುರ ನೌಕಾಪಡೆಯ ಆರ್‌ಎಸ್‌ಎನ್‌ ಸ್ಟೆಡ್‌ಫಾಸ್ಟ್ ಮತ್ತು ವೇಲಿಯಂಟ್, ಸಾಗರ ಗಸ್ತು ವಿಮಾನ ಫೋಕ್ಕರ್‌-50 ಮತ್ತು ಎಫ್‌-16 ಯುದ್ಧ ವಿಮಾನಗಳು ಕವಾಯತಿನಲ್ಲಿ ಭಾಗಿಯಾಗಿವೆ. 

ಭಾರತ ಮತ್ತು ಸಿಂಗಾಪುರ ಬಲಿಷ್ಠವಾದ ಮಿಲಿಟರಿ ಒಪ್ಪಂದಗಳನ್ನು ಹೊಂದಿವೆ. ದಕ್ಷಿಣ ಚೀನಾ ಸಮುದ್ರದ ಮೇಲೆ ಕಡಲ ತೀರದ ಹಲವು ದೇಶಗಳು ಹಕ್ಕು ಸ್ಥಾಪಿಸುತ್ತಿದ್ದರೂ ಚೀನಾ ನೌಕಾಪಡೆ ಮೇಲುಗೈ ಸಾಧಿಸಲು ಹವಣಿಸುತ್ತಿದೆ.