ಥೆರೇಸಾ ರಾಜೀನಾಮೆ: ಬ್ರೆಕ್ಸಿಟ್​ ಗೊಂದಲ, ಸಂಪುಟದಲ್ಲೇ ಅಪಸ್ವರ

0
10

ಬ್ರೆಕ್ಸಿಟ್ ಮಸೂದೆಗೆ ಸೂಚಿಸಲಾದ ಪರಿಷ್ಕೃತ ಪ್ರಸ್ತಾವ ಕುರಿತು ಬ್ರಿಟನ್ ಸಂಪುಟದಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಪ್ರಧಾನಿ ಥೆರೇಸಾ ಮೇ ಪದತ್ಯಾಗ ಮಾಡುವುದಾಗಿ ಘೋಷಿಸಿದ್ದಾರೆ.

ಲಂಡನ್: ಬ್ರೆಕ್ಸಿಟ್ ಮಸೂದೆಗೆ ಸೂಚಿಸಲಾದ ಪರಿಷ್ಕೃತ ಪ್ರಸ್ತಾವ ಕುರಿತು ಬ್ರಿಟನ್ ಸಂಪುಟದಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಪ್ರಧಾನಿ ಥೆರೇಸಾ ಮೇ ಪದತ್ಯಾಗ ಮಾಡುವುದಾಗಿ ಘೋಷಿಸಿದ್ದಾರೆ.

ಪ್ರಧಾನಿ ಮತ್ತು ಟೋರಿ ನಾಯಕತ್ವಕ್ಕೆ (ಕನ್ಸರ್ವೆಟಿವ್ ಪಕ್ಷದ ನಾಯಕ) ಜೂನ್ 7ರಂದು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಪ್ರಧಾನಿಯ ಅಧಿಕೃತ ನಿವಾಸದಲ್ಲಿ ಮಾತನಾಡಿದ ಅವರು, ‘ಬ್ರೆಕ್ಸಿಟ್ ಮಸೂದೆಗೆ ಮಂಡಿಸಿದ ಹೊಸ ಪ್ರಸ್ತಾವಕ್ಕೆ ಸಚಿವ ಸಂಪುಟದಲ್ಲೆ ವಿಶ್ವಾಸ ವ್ಯಕ್ತವಾಗಲಿಲ್ಲ. ಹೀಗಾಗಿ ದೇಶದ ಹಿತಾಸಕ್ತಿ ದೃಷ್ಟಿಯಿಂದ ಪದತ್ಯಾಗ ಮಾಡಲು ಬಯಸುವೆ’ ಎಂದು ಭಾವುಕರಾಗಿ ಹೇಳಿದ್ದಾರೆ.

ಹೊಸ ನಾಯಕನ ಆಯ್ಕೆ: ಆಡಳಿತಾರೂಢ ಕನ್ಸರ್ವೆಟಿವ್ ಪಕ್ಷದ ಸಂಸದೀಯ ನಾಯಕನ ಆಯ್ಕೆ ಜುಲೈ ಎರಡನೇ ವಾರದ ನಂತರ ನಡೆಯುವ ಸಾಧ್ಯತೆ ಇದ್ದು, ಥೆರೇಸಾ ಮೇ ಉಸ್ತುವಾರಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬ್ರೆಕ್ಸಿಟ್​ನಲ್ಲಿ ಬದಲಾವಣೆ ಇಲ್ಲ

ಬ್ರಿಟನ್ ಪ್ರಧಾನಿ ರಾಜೀನಾಮೆಯಿಂದ ಬ್ರೆಕ್ಸಿಟ್​ನಲ್ಲಿ ಯಾವುದೇ ಬದಲಾವಣೆ ಆಗದು ಎಂದು ಐರೋಪ್ಯ ಒಕ್ಕೂಟ ಸ್ಪಷ್ಟಪಡಿಸಿದೆ. ಥೆರೇಸಾ ಮೇ ನಿರ್ಧಾರ ವೈಯಕ್ತಿಕವಾಗಿ ಬೇಸರ ತಂದಿದೆ. ಆದರೆ, ಐರೋಪ್ಯ ಒಕ್ಕೂಟದಿಂದ ಬ್ರಿಟನ್ ನಿರ್ಗಮನದ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಒಕ್ಕೂಟದ ಆಯೋಗದ ಅಧ್ಯಕ್ಷ ಜೀನ್ ಕ್ಲೌಡ್ ಜಂಕರ್ ಅಭಿಪ್ರಾಯಪಟ್ಟಿದ್ದಾರೆಂದು ಐರೋಪ್ಯ ಒಕ್ಕೂಟ ವಕ್ತಾರರು ಹೇಳಿದ್ದಾರೆ.

ಏನಿದು ಬ್ರೆಕ್ಸಿಟ್?

28 ದೇಶಗಳು ಸೇರಿ ರಚಿಸಿಕೊಂಡಿರುವ ರಾಜಕೀಯ ಮತ್ತು ಆರ್ಥಿಕ ಸಂಘಟನೆಯೇ ಐರೋಪ್ಯ ಒಕ್ಕೂಟ. ಇದಕ್ಕೆ ಬ್ರಿಟನ್ 1973ರಲ್ಲಿ ಸೇರ್ಪಡೆಯಾಯಿತು. ಈ ಸೇರ್ಪಡೆಗೆ 1975ರಲ್ಲಿ ನಡೆದ ಜನಮತ ಗಣನೆ ಅಂಗೀಕಾರ ನೀಡಿತು. 1980 ಮತ್ತು 90ರ ದಶಕದಿಂದಲೇ ಐರೋಪ್ಯ ಒಕ್ಕೂಟದಿಂದ ಹೊರಬರಬೇಕು ಎಂಬ ಕೂಗು ಎಡ ಚಿಂತನೆಯ ಪಕ್ಷಗಳಿಂದ ಕೇಳಿಬರ ತೊಡಗಿದವು. ಬ್ರೆಕ್ಸಿಟ್ (ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವುದು) ಹೆಸರಿನ ಆಂದೋಲನಗಳು ನಡೆದವು. 2015ರ ಚುನಾವಣೆಯಲ್ಲಿ ಈ ಆಗ್ರಹವನ್ನು ಡೇವಿಡ್ ಕ್ಯಾಮರನ್ ಕನ್ಸರ್ವೆಟಿವ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೂ ಸೇರಿಸಿದರು. ಆಶ್ವಾಸನೆಯಂತೆ 2016ರ ನವೆಂಬರ್ 23ರಂದು ಜನಮತ ಗಣನೆ ನಡೆದು ಶೇ. 52 ಮಂದಿ ಬ್ರೆಕ್ಸಿಟ್ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಇದರಿಂದ ಬ್ರೆಕ್ಸಿಟ್​ಗೆ ವಿರುದ್ಧ ನಿಲುವು ಹೊಂದಿದ್ದ ಪ್ರಧಾನಿ ಡೇವಿಡ್ ಕ್ಯಾಮರಾನ್​ಗೆ ಮುಖಭಂಗವಾಗಿ ರಾಜೀನಾಮೆ ನೀಡಿದರು. ನಂತರ ಥೆರೇಸಾ ಮೇ ಪ್ರಧಾನಿಯಾದರು. 2017ರ ಮಾರ್ಚ್ 29ರಂದು ಬ್ರಿಟನ್ ಸರ್ಕಾರ ಸಂವಿಧಾನದ 50ನೇ ವಿಧಿಯನ್ನು (ಐರೋಪ್ಯ ಒಕ್ಕೂಟದ ಒಪ್ಪಂದ) ಕೈಬಿಡುವ ಪ್ರಸ್ತಾವನೆ ಮಾಡಿದೆ. ಇದರ ಅನ್ವಯ 2019ರ ಮಾರ್ಚ್ 29ರಂದು ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬೇಕಿತ್ತು. ಆದರೆ, ಈ ಅವಧಿಯೊಳಗೆ ಮೂರು ಸಾರಿ ಮಸೂದೆ ಮಂಡಿಸಿದರೂ ಬ್ರಿಟನ್ ಸಂಸತ್​ನಲ್ಲಿ ಒಪ್ಪಿಗೆ ದೊರೆತಿಲ್ಲ.