ಥಾಯ್ಲೆಂಡ್‌ ಓಪನ್‌ ಬಾಕ್ಸಿಂಗ್‌:ಆಶಿಶ್‌ ಕುಮಾರ್‌ಗೆ ಚಿನ್ನ

0
12

ಥಾಯ್ಲೆಂಡ್‌ ಓಪನ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಭಾರತದ ಬಾಕ್ಸರ್‌ ಆಶಿಶ್‌ಕುಮಾರ್‌ ಗೆದ್ದ ಒಂದು ಚಿನ್ನ ಸೇರಿದಂತೆ ಒಟ್ಟು ಎಂಟು ಪದಕಗಳು ಭಾರತದ ಮಡಿಲು ಸೇರಿದವು.

ನವದೆಹಲಿ (ಪಿಟಿಐ): ಭಾರತದ ಬಾಕ್ಸರ್‌ಗಳು ಥಾಯ್ಲೆಂಡ್‌ ಓಪನ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಉತ್ತಮ ಬೆಳೆಯನ್ನೇ ತೆಗೆದಿದ್ದಾರೆ.  ಬ್ಯಾಂಕಾಕ್‌ನಲ್ಲಿ ನಡೆದ ಟೂರ್ನಿಯಲ್ಲಿ ಆಶಿಶ್‌ಕುಮಾರ್‌ ಗೆದ್ದ ಒಂದು ಚಿನ್ನ ಸೇರಿದಂತೆ ಒಟ್ಟು ಎಂಟು ಪದಕಗಳು ಭಾರತದ ಮಡಿಲು ಸೇರಿದವು. ಜುಲೈ 27 ರ ಶನಿವಾರ ಟೂರ್ನಿಯ ಕೊನೆಯ ದಿನವಾಗಿತ್ತು.

37 ದೇಶಗಳ ಬಾಕ್ಸರ್‌ಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ಭಾರತದ ಬಾಕ್ಸರ್‌ಗಳು ಪಾರಮ್ಯ ಮೆರೆದರು. ನಾಲ್ಕು ಬೆಳ್ಳಿ, ಮೂರು ಕಂಚಿನ ಪದಕಗಳು ಒಲಿದವು. 

75 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಆಶಿಶ್‌ಕುಮಾರ್‌, ಫೈನಲ್‌ ಪಂದ್ಯದಲ್ಲಿ ಕೊರಿಯಾದ ಕಿಮ್‌ ಜಿಂಜಾಯಿ ಅವರನ್ನು 5–0ಯಿಂದ ಮಣಿಸಿದರು. ಇದು ಅವರು ಗೆದ್ದ ಮೊದಲ ಅಂತರರಾಷ್ಟ್ರೀಯ ಚಿನ್ನ.

ನಿಖತ್‌ ಜರೀನ್‌ (51 ಕೆಜಿ), ದೀಪಕ್‌ (49 ಕೆಜಿ), ಮೊಹಮ್ಮದ್‌ ಹುಸಾಮುದ್ದೀನ್‌ (56 ಕೆಜಿ) ಹಾಗೂ ಬ್ರಿಜೇಶ್‌ ಯಾದವ್‌ (81 ಕೆಜಿ) ಫೈನಲ್‌ ಪಂದ್ಯಗಳಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತರಾದರು.

ಅಂತಿಮ ಪಂದ್ಯದಲ್ಲಿ ಚೀನಾದ ಚಾಂಗ್‌ ಯುವಾನ್‌ರನ್ನು ಎದುರಿಸಿದ್ದ ನಿಖತ್‌ 0–5ರ ಸೋಲು ಕಂಡರು. ಹುಸಾಮುದ್ದೀನ್‌ ಅವರು ಥಾಯ್ಲೆಂಡ್‌ನ ಚಚಾಯಿ ಡೇಚಾ ಬುಟ್‌ದಿ ಎದುರು 0–5ರಿಂದ ಶರಣಾದರೆ, ದೀಪಕ್‌ ಅವರು ಉಜ್ಬೆಕಿಸ್ತಾನದ ಮಿರ್ಜಾಕ್‌ಮೆದೊವ್‌ ನಾದಿರ್‌ಜೊನ್‌ ಎದುರು ಮುಗ್ಗರಿಸಿದರು. ಬ್ರಿಜೇಶ್‌ ಯಾದವ್‌ ಪ್ರಬಲ ಹೋರಾಟ ನೀಡಿದರೂ ಥಾಯ್ಲೆಂಡ್‌ನ ಅನವತ್‌ ತಾಂಗ್‌ಕ್ರೊಟೊಕ್‌ ಸವಾಲು ಮೀರಲಾಗಲಿಲ್ಲ.

ಇದಕ್ಕೂ ಮೊದಲು ಮಂಜು ರಾಣಿ (48 ಕೆಜಿ), ಆಶಿಶ್‌ (69 ಕೆಜಿ) ಹಾಗೂ ಭಾಗ್ಯವತಿ ಕಚಾರಿ (75 ಕೆಜಿ) ಕಂಚು ಗೆದ್ದುಕೊಂಡಿದ್ದರು.