ತ್ರಿವರ್ಣ ನಾಡಧ್ವಜಕ್ಕೆ ಒಪ್ಪಿಗೆ

0
25

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ನೇತೃತ್ವದ ತಜ್ಞರ ಸಮಿತಿ ವಿನ್ಯಾಸಗೊಳಿಸಿರುವ ತ್ರಿವರ್ಣ ಕನ್ನಡ ಧ್ವಜಕ್ಕೆ ಸಾಹಿತಿಗಳು, ಕಲಾವಿದರು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಗುರುವಾರ ಒಪ್ಪಿಗೆ ನೀಡಿದ್ದಾರೆ. ಧ್ವಜಕ್ಕೆ ಅನುಮತಿ ಕೋರಿ ಕೇಂದ್ರಕ್ಕೆ ಶೀಘ್ರವೇ ಪ್ರಸ್ತಾವನೆ ಸಲ್ಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ನೇತೃತ್ವದ ತಜ್ಞರ ಸಮಿತಿ ವಿನ್ಯಾಸಗೊಳಿಸಿರುವ ತ್ರಿವರ್ಣ ಕನ್ನಡ ಧ್ವಜಕ್ಕೆ ಸಾಹಿತಿಗಳು, ಕಲಾವಿದರು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಗುರುವಾರ ಒಪ್ಪಿಗೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಸಾಹಿತಿಗಳು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ರಾಜ್ಯಕ್ಕೆ ಪ್ರತ್ಯೇಕ ನಾಡ ಹೊಂದುವ ನಿರ್ಣಯಕ್ಕೆ ಎಲ್ಲರಿಂದಲೂ ಬೆಂಬಲ ದೊರೆಯಿತು.

ಚಕ್ರವರ್ತಿ ಮೋಹನ್‌ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯು ಹಳದಿ, ಬಿಳಿ ಮತ್ತು ಕೆಂಪು ಬಣ್ಣದ ಜೊತೆಗೆ ರಾಜ್ಯದ ಲಾಂಛನ ಇರುವ ಧ್ವಜ ಸಿದ್ಧಪಡಿಸಿದೆ. ಲಾಂಛನದಲ್ಲಿರುವ ‘ಸತ್ಯಮೇವ ಜಯತೆ’ ಎಂಬ ಸಾಲು ಧ್ವಜದಲ್ಲಿ ಇರುವುದಿಲ್ಲ. ಒಂದು ಕಡೆ ಮುದ್ರಿಸಿದರೆ, ಇನ್ನೊಂದು ಕಡೆ ಉಲ್ಟಾ ಕಾಣಲಿದೆ ಎಂಬ ಕಾರಣಕ್ಕೆ ಕೈಬಿಡಲಾಗಿದೆ ಎಂದು ಸಭೆಯ ಬಳಿಕ ಸಿದ್ದರಾಮಯ್ಯ ತಿಳಿಸಿದರು.

ಕಾನೂನಿನ ಅಂಶಗಳ ಬಗ್ಗೆಯೂ ತಜ್ಞರ ಸಮಿತಿ ಅಧ್ಯಯನ ನಡೆಸಿದ್ದು, ಪ್ರತ್ಯೇಕ ಧ್ವಜ ಹೊಂದಲು ಸಂವಿಧಾನದಲ್ಲಿ ಯಾವುದೇ ತೊಡಕಿಲ್ಲ ಎಂದು ವರದಿ ನೀಡಿದೆ ಎಂದು  ವಿವರಿಸಿದರು.

‘ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿದಾಗ ಸಾಹಿತಿಗಳು ಮತ್ತು ಕನ್ನಡಪರ ಹೋರಾಟಗಾರರ ಅಭಿಪ್ರಾಯ ಪಡೆದುಕೊಳ್ಳಬೇಕು ಎಂಬ ಸಲಹೆಯನ್ನು ನಾನೇ ನೀಡಿದ್ದೆ. ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಜವಾಬ್ದಾರಿಯನ್ನು ಸಂಪುಟ ಸಭೆ ನನಗೆ ನೀಡಿತ್ತು. ಐತಿಹಾಸಿಕ ನಿರ್ಧಾರ ಕೈಗೊಳ್ಳುವಾಗ ಒಡಕಿನ ಧ್ವನಿ ಇರಬಾರದು ಎಂಬ ಕಾರಣಕ್ಕೆ ಸಭೆ ನಡೆಸಿದ್ದೇನೆ. ಕೆಲವರಿಗಿದ್ದ ಗೊಂದಲ ನಿವಾರಿಸಿದ್ದೇನೆ’ ಎಂದು ಅವರು ಹೇಳಿದರು.

‘ನಾಡಧ್ವಜವನ್ನು ನಾವೇ ಘೋಷಣೆ ಮಾಡುವಂತಿಲ್ಲ. ಕೇಂದ್ರದ ಒಪ್ಪಿಗೆ ಬೇಕು. ಹೀಗಾಗಿ ಶೀಘ್ರವೇ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುತ್ತೇವೆ. ರಾಷ್ಟ್ರ ಧ್ವಜಕ್ಕಿರುವ ಗೌರವಕ್ಕೆ ನಾಡಧ್ವಜದಿಂದ ಚ್ಯುತಿ ಬರುವುದಿಲ್ಲ. ರಾಷ್ಟ್ರಧ್ವಜದ ಕೆಳಗೆ ರಾಜ್ಯ ಧ್ವಜ ಹಾರಾಡಲಿದೆ ಎಂಬ ಸಂಗತಿಯನ್ನು ನಾವು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುತ್ತೇವೆ. ಒಪ್ಪಿಗೆ ಸೂಚಿಸುವಂತೆ ಒತ್ತಡವನ್ನೂ ಹೇರುತ್ತೇವೆ’ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ, ಸಾಹಿತಿಗಳಾದ ಕೆ. ಮರುಳಸಿದ್ಧಪ್ಪ, ಹಿರಿಯ ಕವಿ ಸಿದ್ಧಲಿಂಗಯ್ಯ, ಚಂದ್ರಶೇಖರ ಪಾಟೀಲ, ಕಾಳೇಗೌಡ ನಾಗವಾರ, ಬಿ.ಟಿ. ಲಲಿತಾ ನಾಯಕ್, ಹಂಪ ನಾಗರಾಜಯ್ಯ, ಕಮಲಾ ಹಂಪನಾ, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ, ರಕ್ಷಣಾ ವೇದಿಕೆಯ ಮತ್ತೊಂದು ಬಣದ ಪ್ರವೀಣ್‌ಕುಮಾರ್ ಶೆಟ್ಟಿ, ಶಿವರಾಮೇಗೌಡ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಹಾಗೂ ಇತರರು ಸಭೆಯಲ್ಲಿ ಭಾಗವಹಿಸಿದ್ದರು.