ತೀವ್ರಗೊಂಡ ‘ತಿತ್ಲಿ’ ಚಂಡಮಾರುತ: ಒಡಿಶಾ, ಆಂಧ್ರ ಕರಾವಳಿಯಲ್ಲಿ ಮಳೆ

0
952

ತಿತ್ಲಿ ಚಂಡಮಾರುತ ಮತ್ತಷ್ಟು ತೀವ್ರಗೊಂಡಿದ್ದು, ಒಡಿಶಾ-ಆಂಧ್ರ ಪ್ರದೇಶ ಕರಾವಳಿಯತ್ತ ಸಾಗುತ್ತಿದೆ. ಗಂಟೆಗೆ 10 ಕಿ.ಮೀ ವೇಗದಲ್ಲಿ ಮುಂದುವರಿಯುತ್ತಿರುವ ಚಂಡಮಾರುತ ಅಕ್ಟೋಬರ್ 11 ರ ಗುರುವಾರ ಬೆಳಗಿನ ಹೊತ್ತಿಗೆ ಒಡಿಶಾ ಮತ್ತು ಆಂಧ್ರ ಕರಾವಳಿಗೆ 145 ಕಿ.ಮೀ ವೇಗದಲ್ಲಿ ಅಪ್ಪಳಿಸುವ ಸಾಧ್ಯತೆಯಿದೆ.

ಹೊಸದಿಲ್ಲಿ: ತಿತ್ಲಿ ಚಂಡಮಾರುತ ಮತ್ತಷ್ಟು ತೀವ್ರಗೊಂಡಿದ್ದು, ಒಡಿಶಾ-ಆಂಧ್ರ ಪ್ರದೇಶ ಕರಾವಳಿಯತ್ತ ಸಾಗುತ್ತಿದೆ. ಗಂಟೆಗೆ 10 ಕಿ.ಮೀ ವೇಗದಲ್ಲಿ ಮುಂದುವರಿಯುತ್ತಿರುವ ಚಂಡಮಾರುತ ಅಕ್ಟೋಬರ್ 11 ರ ಗುರುವಾರ ಬೆಳಗಿನ ಹೊತ್ತಿಗೆ ಒಡಿಶಾ ಮತ್ತು ಆಂಧ್ರ ಕರಾವಳಿಗೆ 145 ಕಿ.ಮೀ ವೇಗದಲ್ಲಿ ಅಪ್ಪಳಿಸುವ ಸಾಧ್ಯತೆಯಿದೆ. 
ಮುಂದಿನ 18 ಗಂಟೆಗಳಲ್ಲಿ ಅದು ಮತ್ತಷ್ಟು ಬಲಗೊಂಡು ಎರಡೂ ರಾಜ್ಯಗಳ ವಾಯುವ್ಯ ಭಾಗವನ್ನು ದಾಟಿ ಹೋಗಲಿದೆ. 

ನಂತರ ದುರ್ಬಲಗೊಂಡು ಪಶ್ಚಿಮ ಬಂಗಾಳದ ಗಂಗಾ ಬಯಲಿನತ್ತ ಸಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಯಾವುದೇ ಪ್ರಾಣಹಾನಿ ಆಗದಂತೆ ನೋಡಿಕೊಳ್ಳಲು ಒಡಿಶಾ ಸರಕಾರ ಮುಂದಾಗಿದ್ದು, ಕರಾವಳಿಯ ಎಲ್ಲ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಿದೆ. 

ತಗ್ಗು ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ. 

ಒಡಿಶಾದ ಗಜಪತಿ, ಗಂಜಾಂ, ಪುರಿ, ಜಗತ್‌ಸಿಂಗ್‌ಪುರ ಜಿಲ್ಲೆಗಳಲ್ಲಿ ಅಕ್ಟೋಬರ್ 10 ರ ಬುಧವಾರವೇ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದೆ. 

ಸಂಭಾವ್ಯ ಪ್ರವಾಹ ಪರಿಸ್ಥಿತಿ ಎದುರಿಸಲು 300 ಮೋಟರ್‌ ಬೋಟುಗಳನ್ನು ಸಜ್ಜಾಗಿ ಇರಿಸಲಾಗಿದೆ. ನಾನಾ ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಕೋಪ ಪ್ರತಿಸ್ಪಂದನಾ ಪಡೆ (ಎನ್‌ಡಿಆರ್‌ಎಫ್‌) ಮತ್ತು ಒಡಿಶಾ ವಿಕೋಪ ತುರ್ತು ಕಾರ್ಯಪಡೆ, ಅಗ್ನಿಶಾಮಕ ದಳಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ.