ತಮಿಳುನಾಡಿನ ಜವಳಿ ವಲಯ ತತ್ತರಿಸಿದೆ. 2016ರಿಂದೀಚೆಗೆ ಇಲ್ಲಿ 200ಕ್ಕೂ ಹೆಚ್ಚು ಜವಳಿ ಕಾರ್ಖಾನೆಗಳಿಗೆ ಬೀಗ ಹಾಕಲಾಗಿದೆ. ಬಾಂಗ್ಲಾದೇಶ, ವಿಯೆಟ್ನಾಂ ಹಾಗೂ ಶ್ರೀಲಂಕಾದಿಂದ ಆಮದಾಗುತ್ತಿರುವ ಕಡಿಮೆಬೆಲೆಯ ನೂಲು ಮತ್ತು ಉಡುಪು ಹಾಗೂ ದುಬಾರಿ ಬೆಲೆಯ ಕಚ್ಚಾವಸ್ತು ಇದಕ್ಕೆ ಕಾರಣವಾಗಿದೆ.
ಚೆನ್ನೈ: ತಮಿಳುನಾಡಿನ ಜವಳಿ ವಲಯ ತತ್ತರಿಸಿದೆ. 2016ರಿಂದೀಚೆಗೆ ಇಲ್ಲಿ 200ಕ್ಕೂ ಹೆಚ್ಚು ಜವಳಿ ಕಾರ್ಖಾನೆಗಳಿಗೆ ಬೀಗ ಹಾಕಲಾಗಿದೆ. ಬಾಂಗ್ಲಾದೇಶ, ವಿಯೆಟ್ನಾಂ ಹಾಗೂ ಶ್ರೀಲಂಕಾದಿಂದ ಆಮದಾಗುತ್ತಿರುವ ಕಡಿಮೆಬೆಲೆಯ ನೂಲು ಮತ್ತು ಉಡುಪು ಹಾಗೂ ದುಬಾರಿ ಬೆಲೆಯ ಕಚ್ಚಾವಸ್ತು ಇದಕ್ಕೆ ಕಾರಣ.
ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳು ಇದನ್ನು ಪುಷ್ಠೀಕರಿಸಿವೆ. 2019ರ ಎರಡನೇ ತ್ರೈಮಾಸಿಕದಲ್ಲಿ ಹತ್ತಿ ಉತ್ಪನ್ನಗಳ ರಫ್ತಿನಲ್ಲಿ ಶೇ 34.6ರಷ್ಟು ಕುಸಿತ ಕಂಡುಬಂದಿದೆ.
ಅಂತರರಾಷ್ಟ್ರೀಯ ಹಾಗೂ ಸ್ಥಳೀಯ ಮಾರುಕಟ್ಟೆಯಲ್ಲಿ ಕೊಳ್ಳುವವರು ಇಲ್ಲದ ಕಾರಣ ತಿರುಪ್ಪೂರು ಹಾಗೂ ಕೊಯಮತ್ತೂರಿನ ಜವಳಿ ಕಾರ್ಖಾನೆಗಳಲ್ಲಿ ಹೇರಳವಾದ ದಾಸ್ತಾನು ಇದೆ. ಹೀಗಾಗಿ ಈ ಕಂಪನಿಗಳೂ ಮುಂದಿನ ದಿನಗಳಲ್ಲಿ ಬಾಗಿಲು ಹಾಕುವ ಹಂತದಲ್ಲಿವೆ. ಕಾರ್ಖಾನೆಗಳನ್ನು ಮುಚ್ಚುವುದರಿಂದ ಸುಮಾರು 1 ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವಭೀತಿಯಲ್ಲಿದ್ದಾರೆ.
ಮೂರು ತಿಂಗಳ ಹಿಂದೆ ಬಹುತೇಕ ಜವಳಿ ಕಾರ್ಖಾನೆಗಳು ಉತ್ಪಾದನೆ ಪ್ರಮಾಣವನ್ನು ಶೇ 30ರಷ್ಟು ಕಡಿತಗೊಳಿಸಿವೆ. ನೂಲಿಗೆ ಬೇಡಿಕೆ ಕುಸಿದಿರುವುದಿಂದ ಇನ್ನಷ್ಟು ಕಾರ್ಖಾನೆಗಳು ಮುಂದಿನ ಕೆಲವೇ ತಿಂಗಳಲ್ಲಿ ಬಂದ್ ಆಗಲಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಉದ್ದಿಮೆಯ ಬಹುಪಾಲು ಕಂಪನಿಗಳು ಮುಂದಿನ ವರ್ಷ ಈ ವಲಯದಲ್ಲಿ ಇರುವುದಿಲ್ಲ’ ಎಂದು ಓಪನ್ ಎಂಡ್ ಜವಳಿ ಕಾರ್ಖಾನೆ ಸಂಘಟನೆ ಮುಖ್ಯಸ್ಥ (ಒಎಸ್ಎಂಎ) ಎಂ.ಜಯಪಾಲ್ ಹೇಳುತ್ತಾರೆ.
ಕಳೆದ ಒಂದು ದಶಕದ ಅವಧಿಯಲ್ಲಿ ಚೀನಾ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಹಲವು ಕಾರ್ಖಾನೆಗಳು ಆರಂಭವಾಗಿದ್ದವು. ಆದರೆ ವಿಯೆಟ್ನಾಂ, ಬಾಂಗ್ಲಾದೇಶ ಕಡಿಮೆ ಬೆಲೆಯಲ್ಲಿ ಜವಳಿ ಉತ್ಪನ್ನಗಳನ್ನು ಚೀನಾಕ್ಕೆ ಕಳುಹಿಸುತ್ತಿವುದರಿಂದ ಇಲ್ಲಿನ ಕಾರ್ಖಾನೆಗಳು ಸಂಕಷ್ಟಕ್ಕೆ ಸಿಲುಕಿವೆ.