ಡೀಸೆಲ್‌ನಿಂದ ಎಲೆಕ್ಟ್ರಿಕ್‌ಗೆ ಪರಿವರ್ತನೆಯಾದ ವಿಶ್ವದ ಮೊದಲ ರೈಲಿಗೆ ಚಾಲನೆ

0
867

ಡೀಸೆಲ್‌ ಎಂಜಿನ್‌ನಿಂದ ಎಲೆಕ್ಟ್ರಿಕ್‌ಗೆ ಪರಿವರ್ತನೆಯಾದ ವಿಶ್ವದ ಮೊಟ್ಟ ಮೊದಲ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಕ್ಷೇತ್ರ ವಾರಾಣಸಿಯಲ್ಲಿ ಫೆಬ್ರುವರಿ 19 ರ ಮಂಗಳವಾರ ಚಾಲನೆ ನೀಡಿದ್ದಾರೆ.

ವಾರಾಣಸಿ: ಡೀಸೆಲ್‌ ಎಂಜಿನ್‌ನಿಂದ ಎಲೆಕ್ಟ್ರಿಕ್‌ಗೆ ಪರಿವರ್ತನೆಯಾದ ವಿಶ್ವದ ಮೊಟ್ಟ ಮೊದಲ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಕ್ಷೇತ್ರ ವಾರಾಣಸಿಯಲ್ಲಿ ಫೆಬ್ರುವರಿ 19 ರ  ಮಂಗಳವಾರ ಚಾಲನೆ ನೀಡಿದ್ದಾರೆ. 

ಇದುವರೆಗೆ ಡೀಸೆಲ್‌ ಎಂಜಿನ್‌ನಲ್ಲಿ ಸಂಚರಿಸುತ್ತಿದ್ದ ರೈಲನ್ನು ವಿದ್ಯುತ್‌ ಚಾಲಿತ ಲೋಕೊಮೋಟಿವ್‌(ಎಂಜಿನ್‌) ಆಗಿ ಪರಿವರ್ತನೆಗೊಳಿಸಲಾಗಿದೆ. ಇದು ಇಡೀ ವಿಶ್ವಕ್ಕೇ ಭಾರತದ ಸಂಶೋಧನೆಯ ಕೊಡುಗೆಯಾಗಿದೆ. 

2,600 ಅಶ್ವಶಕ್ತಿ(ಎಚ್‌ಪಿ) ಸಾಮರ್ಥ್ಯ‌ದ ಎರಡು ಡೀಸೆಲ್‌ ಎಂಜಿನ್‌ಗಳನ್ನು 10,000 ಎಚ್‌ಪಿ ಸಾಮರ್ಥ್ಯ‌ದ ಎರಡು ಎಲೆಕ್ಟ್ರಿಕ್‌ ಎಂಜಿನ್‌ಗಳಾಗಿ ಪರಿವರ್ತನೆ ಮಾಡಲಾಗಿದೆ. 

ಸಂಪೂರ್ಣ ಮೇಕ್‌ ಇನ್‌ ಇಂಡಿಯಾದನ್ವಯ ಭಾರತದ ಆರ್‌ಆ್ಯಂಡ್‌ ಡಿಯ ಎಂಜಿನಿಯರ್‌ಗಳು ದಾಖಲೆಯ ಕಡಿಮೆ ಅವಧಿಯಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಚಿತ್ತರಂಜನ್‌ ಲೊಕೊಮೋಟಿವ್‌ ವರ್ಕ್ಸ್‌(ಸಿಎಲ್‌ಡಬ್ಲ್ಯು) ಮತ್ತು ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌ನ ಎಂಜಿನಿಯರ್‌ಗಳ ನೆರವಿನಿಂದ ಯೋಜನೆ ತ್ವರಿತವಾಗಿ ಪೂರ್ಣಗೊಂಡಿದೆ. ಎಂಜಿನ್‌ ಎಲೆಕ್ಟ್ರಿಕ್‌ ಆಗಿ ಪರಿವರ್ತನೆಯಾದ ಕಾರಣ, ಪರಿಸರ ಮಾಲಿನ್ಯ ಗಣನೀಯವಾಗಿ ತಗ್ಗಿದಂತಾಗಿದೆ. 

ಡೀ-ಕಾರ್ಬನೈಜೇಷನ್‌ ಮತ್ತು ಶೇ.100ರಷ್ಟು ವಿದ್ಯುತ್‌ ಎಂಜಿನ್‌ಗಳನ್ನು ಬಳಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದ್ದು, ಇದರನ್ವಯ ಯೋಜನೆಯು 2017ರ ಡಿಸೆಂಬರ್‌ನಲ್ಲಿ ಆರಂಭ. 

ಪರಿಸರಸ್ನೇಹಿ, ಜೊತೆಗೆ ವೆಚ್ಚ ಉಳಿತಾಯ 
ಡೀಸೆಲ್‌ ಎಂಜಿನ್‌ ಅನ್ನು ಎಲೆಕ್ಟ್ರಿಕ್‌ ಎಂಜಿನ್‌ ಆಗಿ ಪರಿವರ್ತಿಸುವುದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದರಿಂದ ರೈಲ್ವೆ ಇಲಾಖೆಗೆ ವೆಚ್ಚ ಉಳಿತಾಯವೂ ಆಗುತ್ತದೆ. ಜೊತೆಗೆ ಪರಿಸರಸ್ನೇಹಿಯೂ ಹೌದು. ಅಲ್ಲದೇ, ಸರಕು ರೈಲುಗಳ ಸರಾಸರಿ ವೇಗವೂ ವೃದ್ಧಿಯಾಗಲಿದೆ.