‘ಡಿಜಿಟಲ್‌ ಆರ್ಥಿಕತೆಯತ್ತ ಭಾರತ’

0
21

‘ದೇಶವು ನಿಧಾನವಾಗಿ ಡಿಜಿಟಲ್‌ ಆರ್ಥಿಕತೆಯತ್ತ ದೃಢ ಹೆಜ್ಜೆ ಇಡುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ, ನಗದು ವಹಿವಾಟಿಗೆ ಹೋಲಿಸಿದರೆ ನಗದುರಹಿತ (ಡಿಜಿಟಲ್‌) ವಿಧಾನ ಮತ್ತು ಬ್ಯಾಂಕ್‌ಗಳ ಮೂಲಕ ನಡೆಯುವ ವಹಿವಾಟಿನ ಪ್ರಮಾಣವು ಗಮನಾರ್ಹವಾಗಿ ಏರುಗತಿಯಲ್ಲಿ ಇರುವ ವಾಸ್ತವ ಸಂಗತಿಯನ್ನು ಕೆಲವರು ಒಪ್ಪಿಕೊಳ್ಳಲು ಸಿದ್ಧರಿಲ್ಲ. ನಗದನ್ನು ಅತಿಯಾಗಿ ಅವಲಂಬಿಸಿದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಬೆಲೆ ತೆರಬೇಕಾಗಿ ಬರುವುದಷ್ಟೇ ಅಲ್ಲ, ನಗದಿನ ಶಾಪಕ್ಕೂ ಗುರಿಯಾಗಬೇಕಾಗುತ್ತದೆ. ಅದು ಸಮಾಜ ಮತ್ತು ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ.

‘ಭಾರತೀಯರು ಹಣ ವೆಚ್ಚ ಮಾಡುವ ವಿಧಾನದಲ್ಲಿ ಭಾರಿ ಬದಲಾವಣೆ ಆಗುತ್ತಿರುವುದು ಸ್ಪಷ್ಟವಾಗಿದೆ. ಆ ಪರಿವರ್ತನೆ ಒಂದೇ ದಿಕ್ಕಿನಲ್ಲಿ (ಡಿಜಿಟಲ್‌) ಸಾಗುತ್ತಿದೆ. ಇದು ಹಠಾತ್ತಾಗಿ ಘಟಿಸುತ್ತಿಲ್ಲ. ಅವರೆಲ್ಲರ ವಹಿವಾಟು ಕಡಿಮೆ ನಗದು ಬಳಕೆಯ ಆರ್ಥಿಕತೆಯತ್ತ ಸಾಗಿರುವುದು ಸ್ಪಷ್ಟಗೊಳ್ಳುತ್ತದೆ. ಬ್ಯಾಂಕ್‌ಗಳು ದೇಶಿ ಆರ್ಥಿಕತೆಯ ಜೀವನಾಡಿಗಳಾಗಿವೆ. ಮುಂಬರುವ ದಿನಗಳಲ್ಲಿ ಅವುಗಳ ಮಹತ್ವ ಇನ್ನಷ್ಟು ಹೆಚ್ಚಲಿದೆ’ ಎಂದರು.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಪ್ರಧಾನ ಕಚೇರಿಯ ಹೊಸ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಗರಿಷ್ಠ ಮುಖಬೆಲೆಯ ನೋಟು ರದ್ದತಿಗೆ ಒಂದು ವರ್ಷ ಪೂರ್ಣಗೊ‌ಳ್ಳುವ ದಿನ ಹತ್ತಿರ ಬಂದಿರುವಾಗ ಜೇಟ್ಲಿ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.