ಡಿಎಸ್ ಮ್ಯಾಕ್ಸ್ ಸಾಹಿತ್ಯ ಪ್ರಶಸ್ತಿ ಹಾಗೂ ಬಿ.ವಿ.ಕಾರಂತ ಫೆಲೋಶಿಪ್‌

0
26

ಈ ಕೆಳಗೆ ಡಿಎಸ್‌ ಮ್ಯಾಕ್ಸ್‌ ಸಾಹಿತ್ಯ ಪ್ರಶಸ್ತಿ ಮತ್ತು ಎಸ್‌. ರಘುನಂದನಗೆ ಬಿ.ವಿ.ಕಾರಂತ ಫೆಲೋಶಿಪ್‌ ಕುರಿತು ವಿವರಣೆ ನೀಡಲಾಗಿದೆ.

ಡಿಎಸ್ ಮ್ಯಾಕ್ಸ್ ಸಾಹಿತ್ಯ ಪ್ರಶಸ್ತಿ

ಬೆಂಗಳೂರು: ಶಾ.ಮಂ. ಕೃಷ್ಣರಾಯ ಸೇರಿದಂತೆ ಏಳು ಸಾಹಿತಿಗಳು ‘ಡಿಎಸ್‌ ಮ್ಯಾಕ್ಸ್‌ ಸಾಹಿತ್ಯ ಶ್ರೀ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಡಿಎಸ್‌ ಮ್ಯಾಕ್ಸ್‌ ಪ್ರಾಪರ್ಟೀಸ್‌ ಸಂಸ್ಥೆ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡುತ್ತದೆ. ಈ ಬಾರಿ ಡಾ. ಡಿ.ಟಿ. ಬಸವರಾಜ್‌, ಡಾ. ಬಿದರಿ ಚಂದ್ರಭಾಗಾ, ಡಾ. ಎಸ್. ಪ್ರಸಾದಸ್ವಾಮಿ, ಡಾ. ಎಚ್. ಶಶಿಕಲಾ, ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್, ಗಿರಿಜಾ ಎಸ್. ದೇಶಪಾಂಡೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ಸಂಸ್ಥೆಯ ಕಚೇರಿ ಆವರಣದಲ್ಲಿ ನ.1ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ತಲಾ 15 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಪಿ. ದಯಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಎಸ್‌. ರಘುನಂದನಗೆ ಬಿ.ವಿ.ಕಾರಂತ ಫೆಲೋಶಿಪ್

ಬೆಂಗಳೂರು: ನೀನಾಸಂ ರಂಗ ಶಿಕ್ಷಣ ಕೇಂದ್ರವು ಪ್ರಸಕ್ತ ಸಾಲಿನಿಂದ ‘ಬಿ.ವಿ. ಕಾರಂತ ಫೆಲೋಶಿಪ್‌’ ಯೋಜನೆ ಆರಂಭಿಸುತ್ತಿದ್ದು, ಕನ್ನಡದ ಹಿರಿಯ ರಂಗನಿರ್ದೇಶಕ ಮತ್ತು ಲೇಖಕ ಎಸ್. ರಘುನಂದನ ಅವರಿಗೆ ಮೊದಲ ವರ್ಷದ ಫೆಲೋಶಿಪ್‌ ನೀಡಲಾಗುತ್ತಿದೆ’ ಎಂದು ನೀನಾಸಂ ಪ್ರತಿಷ್ಠಾನದ ಕೆ.ವಿ. ಅಕ್ಷರ ತಿಳಿಸಿದ್ದಾರೆ.

‘ಪ್ರತಿವರ್ಷ ಕರ್ನಾಟಕ ಮತ್ತು ಹೊರನಾಡಿನ ಕೆಲವು ಗಣ್ಯ ರಂಗಕರ್ಮಿಗಳು ಮತ್ತು ವಿದ್ವಾಂಸರಿಗೆ 20  ಸಾವಿರದಿಂದ 1  ಲಕ್ಷದವರೆಗಿನ ಫೆಲೋಶಿಪ್ ಕೊಟ್ಟು, ಒಂದು ವಾರದಿಂದ ಒಂದು ತಿಂಗಳ ಅವಧಿಗೆ ನೀನಾಸಂಗೆ ಅವರು ಬಂದು ಸಂಶೋಧನೆ, ಅಧ್ಯಾಪನ, ಅಭ್ಯಾಸ ನಡೆಸುವಂತೆ ಯೋಜಿಸುವುದು ಈ ಫೆಲೋಶಿಪ್‌ನ ಉದ್ದೇಶವಾಗಿದೆ’ ಎಂದು ಅವರು ಹೇಳಿದ್ದಾರೆ.

‘ಬಿ.ವಿ. ಕಾರಂತ ಅವರ ಸಂಗ್ರಹದಲ್ಲಿದ್ದ ಸುಮಾರು 10 ಸಾವಿರ ಪುಸ್ತಕಗಳನ್ನು ಕಳೆದ ವರ್ಷ ಪಡೆದ ನೀನಾಸಂ ತನ್ನ ಗ್ರಂಥಾಲಯವನ್ನು ವಿಸ್ತರಿಸಿಕೊಂಡಿದೆ. ಈ ಸಂಗ್ರಹವನ್ನು ಇರಿಸಲು ಹೊಸ ಕಟ್ಟಡನಿರ್ಮಿಸಿ, ಅದನ್ನು ಬಿ.ವಿ. ಕಾರಂತ ರಂಗಸಂಕೀರ್ಣವೆಂದು ಹೆಸರಿಸಲಾಗಿದೆ. ಸುಮಾರು 26 ಸಾವಿರ ಪುಸ್ತಕ, ಒಂದು ಸಾವಿರ ಆಡಿಯೊ–ವಿಡಿಯೊ ಸಂಗ್ರಹಗಳಿರುವ ಈ ಗ್ರಂಥಾಲಯ ವಿದ್ಯಾರ್ಥಿಗಳಿಗೂ ಸಂಶೋಧಕರಿಗೂ ಈಗ ತೆರೆದುಕೊಂಡಿದೆ’ ಎಂದೂ ಹೇಳಿದ್ದಾರೆ.

ನೀನಾಸಂ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು, ಶಿಕ್ಷಕರು, ಸ್ಥಳೀಯ ಆಸಕ್ತರಷ್ಟೇ ಅಲ್ಲದೆ, ಹೊರಗಿನ ಸಂಶೋಧಕರೂ ಈ ಗ್ರಂಥಾಲಯದ ಪ್ರಯೋಜನ ಪಡೆಯುವಂತಾಗಲಿ ಎಂಬ ಆಶಯದಿಂದ ಫೆಲೋಶಿಪ್ ಯೋಜನೆ ಆರಂಭಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.