ಠೇವಣಿ ಇಟ್ಟಿರುವ ರೈತರ ಬೆಳೆ ಸಾಲವೂ ಮನ್ನಾ : ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿಕೆ

0
499

ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿರುವ ರೈತರ ಬೆಳೆ ಸಾಲವೂ ಮನ್ನಾ ಆಗಲಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದರು.

ಬೆಂಗಳೂರು: ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿರುವ ರೈತರ ಬೆಳೆ ಸಾಲವೂ ಮನ್ನಾ ಆಗಲಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದರು.

ಸೆಪ್ಟೆಂಬರ್ 24 ರ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರು ಸಹಕಾರಿ ಸಂಘಗಳು, ಬ್ಯಾಂಕ್‌ಗಳು ಹಾಗೂ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿದ್ದರೆ ಆ ಮೊತ್ತವನ್ನು ಹೊರಬಾಕಿಯಲ್ಲಿ ಕಳೆಯಲಾಗುತ್ತದೆ ಎಂದು ಈ ಹಿಂದೆ ಆದೇಶ ಹೊರಡಿಸಲಾಗಿತ್ತು. ಇದೇ ಸೆಪ್ಟೆಂಬರ್ 22ರಂದು ಆದೇಶದಲ್ಲಿ ಮಾರ್ಪಾಡು ಮಾಡಲಾಗಿದೆ’ ಎಂದರು.

ಸಾಲ ಮನ್ನಾ ಮೊತ್ತವನ್ನು ರೈತರ ಉಳಿತಾಯ ಖಾತೆಗೆ ಡಿಬಿಟಿ ಮೂಲಕ ಜಮಾ ಮಾಡಲಾಗುತ್ತದೆ ಎಂಬ ಷರತ್ತನ್ನೂ ಸಡಿಲಿಸಲಾಗಿದೆ. ರೈತರ ಉಳಿತಾಯ ಖಾತೆಗೆ ಸಾಲ ಮನ್ನಾ ಮೊತ್ತವನ್ನು ಜಮಾ ಮಾಡಲಾಗುತ್ತದೆ, ಡಿಸಿಸಿ ಬ್ಯಾಂಕ್‌ಗಳು ಈ ಮೊತ್ತವನ್ನು ಸಂಘ/ಬ್ಯಾಂಕಿನಲ್ಲಿರುವ ರೈತರ ಸಾಲದ ಖಾತೆಗೆ ಕೂಡಲೇ ವರ್ಗಾಯಿಸಲಿವೆ’ ಎಂದರು.

 ‘ಸಾಲ ಮನ್ನಾದ ಕ್ಲೈಮ್‌ ಮೊತ್ತವನ್ನು ಅಕ್ಟೋಬರ್‌ 5ರೊಳಗೆ ತಿಳಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ಬಳಿಕ ಅದನ್ನು ಹಣಕಾಸು ಇಲಾಖೆಗೆ ಕಳುಹಿಸಿ ಅನುಮೋದನೆ ಪಡೆಯಲಾಗುತ್ತದೆ. ಅಕ್ಟೋಬರ್‌ 15ರೊಳಗೆ ರೈತರಿಗೆ ಋಣಮುಕ್ತ ಪ್ರಮಾಣಪತ್ರ ನೀಡಲಾಗುತ್ತದೆ. ಬೆಳೆ ಸಾಲ 2019ರ ಜುಲೈವರೆಗೆ ಹಂತ ಹಂತವಾಗಿ ಮನ್ನಾ ಆಗಲಿದೆ’ ಎಂದು ಅವರು ಹೇಳಿದರು.
ಕುಟುಂಬದಲ್ಲಿ ಸಾಲ ಪಡೆದಿರುವ ಎಲ್ಲ ಸದಸ್ಯರ ಅಸಲಿನ ಮೊತ್ತ ಈ ವರ್ಷದ ಜುಲೈ 10ಕ್ಕೆ 1 ಲಕ್ಷಕ್ಕಿಂತ ಕಡಿಮೆ ಇದ್ದಲ್ಲಿ ಎಲ್ಲ ಸದಸ್ಯರಿಗೂ ಸಾಲ ಮನ್ನಾದ ಲಾಭ ಸಿಗಲಿದೆ. ಒಂದು ವೇಳೆ, 1 ಲಕ್ಷಕ್ಕಿಂತ ಹೆಚ್ಚು ಇದ್ದರೆ ಹೆಚ್ಚಿನ ಮೊತ್ತವನ್ನು ಮರುಪಾವತಿ ಪಡೆದು ಮೊದಲು ಕುಟುಂಬ ಮುಖ್ಯಸ್ಥನ, ನಂತರ ಹೆಂಡತಿ ಮಕ್ಕಳ ಸಾಲವನ್ನಾ 1 ಲಕ್ಷದೊಳಗೆ ಸೀಮಿತಗೊಳಿಸಿ ಮನ್ನಾ ಮಾಡಲಾಗುತ್ತದೆ’ ಎಂದು 
ಹೇಳಿದರು.
ವೇತನದಾರರು, ಪಿಂಚಣಿದಾರರು ಹಾಗೂ ಆದಾಯ ತೆರಿಗೆ ಪಾವತಿದಾರರಿಂದ ಸ್ವಯಂ ಘೋಷಣಾ ಪತ್ರ ಪಡೆದು ಯೋಜನೆ ಜಾರಿಗೊಳಿಸುತ್ತೇವೆ : ಬಂಡೆಪ್ಪ ಕಾಶೆಂಪೂರ ಸಹಕಾರ ಸಚಿವ