ಟೈರು, ವಾಹನ ಬಿಡಿ ಭಾಗ, ಟಿವಿ, ಕಂಪ್ಯೂಟರ್ ಸಹಿತ 39 ವಸ್ತುಗಳ ಜಿಎಸ್‌ಟಿ ಕಡಿತ

0
653

ವಿತ್ತ ಸಚಿವ ಅರುಣ್ ಜೇಟ್ಲಿ ಅಧ್ಯಕ್ಷತೆಯಲ್ಲಿ ಜಿಎಸ್‌ಟಿ ಮಂಡಳಿಯ 31ನೇ ಸಭೆ ಇಂದು(ಡಿಸೆಂಬರ್ 22) ದಿಲ್ಲಿಯಲ್ಲಿ ನಡೆದಿದ್ದು, ಹಲವು ವಸ್ತುಗಳ ತೆರಿಗೆ ಇಳಿಸಲು ನಿರ್ಧರಿಸಲಾಗಿದೆ.

ಹೊಸದಿಲ್ಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಅಧ್ಯಕ್ಷತೆಯಲ್ಲಿ ಜಿಎಸ್‌ಟಿ ಮಂಡಳಿಯ 31ನೇ ಸಭೆ ಇಂದು(ಡಿಸೆಂಬರ್ 22) ದಿಲ್ಲಿಯಲ್ಲಿ ನಡೆದಿದ್ದು, ಹಲವು ವಸ್ತುಗಳ ತೆರಿಗೆ ಇಳಿಸಲು ನಿರ್ಧರಿಸಲಾಗಿದೆ.  

ಆರು ವಸ್ತುಗಳನ್ನು ಶೇ 28ರ ತೆರಿಗೆ ವ್ಯಾಪ್ತಿಯಿಂದ ಶೇ 18ರ ತೆರಿಗೆ ವ್ಯಾಪ್ತಿಗೆ ತರಲಾಗಿದೆ. 33 ವಸ್ತುಗಳನ್ನು ಶೇ 18ರ ವ್ಯಾಪ್ತಿಯಿಂದ ಶೇ 12 ಮತ್ತು ಶೇ 5ರ ತೆರಿಗೆ ದರಗಳ ವ್ಯಾಪ್ತಿಗೆ ಬದಲಿಸಲಾಗಿದೆ. 

ಮೋಟಾರು ವಾಹನಗಳ ಬಿಡಿಭಾಗಗಳು, ಟಿವಿ, ಕಂಪ್ಯೂಟರ್‌ಗಳು, ಟೈರುಗಳು ಮತ್ತು ಸಿಮೆಂಟ್‌ಗಳ ತೆರಿಗೆ ಇಳಿಕೆಯಾಗಿದೆ. ಕೇಂದ್ರ ಸರಕಾರ ಇದುವರೆಗೆ ಬಿಂಬಿಸಿದ ಮೊತ್ತಕ್ಕಿಂತ ಕಡಿಮೆ ತೆರಿಗೆ ಸಂಗ್ರಹವಾಗಿರುವುದೂ ಗಮನಾರ್ಹ. 

ಇ-ವೇ ಬಿಲ್‌ ಪದ್ಧತಿಯಿಂದ ಕಂದಾಯ ಸಂಗ್ರಹಣೆ ಮೇಲೆ ಧನಾತ್ಮಕ ಪರಿಣಾಮ ಬೀರಿರುವುದನ್ನು ಜಿಎಸ್‌ಟಿ ಮಂಡಳಿ  ಗಮನಿಸಿದೆ. ಈಗ ಕೇವಲ ಮಾದಕ ದ್ರವ್ಯದಂತಹ ವಸ್ತುಗಳು ಮಾತ್ರ ಶೇ 28ರ ತೆರಿಗೆ ಸ್ಲಾಬ್‌ನಲ್ಲಿ ಉಳಿದಿವೆ. ರಾಜ್ಯಗಳಿಗೆ ಆಗುವ ಆದಾಯ ಕೊರತೆ ಕುರಿತು ಸಚಿವ ತಂಡವೊಂದು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದೆ. 

ಜಿಎಸ್‌ಟಿ ದರಗಳ ಕಡಿತದ ಇಂದಿನ ತೀರ್ಮಾನದಿಂದ ಆರ್ಥಿಕತೆಯ ಮೇಲೆ 6,000 ಕೋಟಿ ರೂ.ಗಳ ಹೊರೆ ಬೀಳಲಿದೆ. 

‘ಎಲ್ಲ ವಸ್ತುಗಳನ್ನೂ ಶೇ 18 ತೆರಿಗೆ ವ್ಯಾಪ್ತಿಗೆ ತರಬೇಕೆಂಬುದು ಕಾಂಗ್ರೆಸ್‌ ಬೇಡಿಕೆಯಾಗಿತ್ತು. ಆದರೆ ಸರಕಾರ ಲಕ್ಸುರಿ ವಸ್ತುಗಳ ಬೆಲೆಗಳನ್ನು ಇಳಿಸಲು ಒಪ್ಪಿದೆ’ ಎಂದು ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ತಿಳಿಸಿದರು. 

ಗ್ರಾಹಕ ತೃಪ್ತಿ ಹೆಚ್ಚಿಸಲು ಬಹುತೇಕ ಎಲ್ಲ ವಸ್ತುಗಳ ತೆರಿಗೆಗಳನ್ನು ಶೇ 28ರಿಂದ 18ಕ್ಕೆ ಇಳಿಸುವ ಉದ್ದೇಶವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದರು. ಶೇ 99 ವಸ್ತುಗಳನ್ನೂ ಶೇ 18ರ ತೆರಿಗೆ ವ್ಯಾಪ್ತಿಗೆ ತರುವುದು ಸರಕಾರದ ಮುಂದಿನ ಗುರಿಯಾಗಿದೆ ಎಂದು ಅವರು ಹೇಳಿದ್ದರು.