ಟೆಸ್ಟ್ ಕ್ರಿಕೆಟ್‌ಗೆ “ಮೊಹಮ್ಮದ್ ಆಮೀರ್” ನಿವೃತ್ತಿ ಘೋಷಣೆ

0
15

ಪಾಕಿಸ್ತಾನ ಕ್ರಿಕೆಟ್ ತಂಡದ ಎಡಗೈ ಅನುಭವಿ ವೇಗದ ಬೌಲರ್ ಮೊಹಮ್ಮದ್ ಆಮೀರ್, ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಹೊಸದಿಲ್ಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ಎಡಗೈ ಅನುಭವಿ ವೇಗದ ಬೌಲರ್ ಮೊಹಮ್ಮದ್ ಆಮೀರ್, ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.  ಅಲ್ಲದೆ ಏಕದಿನ ಹಾಗೂ ಟ್ವೆಂಟಿ-20 ಸೇರಿದ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. 

 2009ನೇ ಇಸವಿಯಲ್ಲಿ ತಮ್ಮ 17ನೇ ಹರೆಯದಲ್ಲಿ ಆಮೀರ್, ಶ್ರೀಲಂಕಾ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದರು. ಸದ್ಯ 27ರ ಹರೆಯದ ಆಮೀರ್ ಇದುವರೆಗೆ 36 ಟೆಸ್ಟ್ ಪಂದ್ಯಗಳಲ್ಲಿ 119 ವಿಕೆಟುಗಳನ್ನು ಕಬಳಿಸಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಮೀರ್, ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿರುವುದು ನನಗೆ ಸಂದಿರುವ ದೊಡ್ಡ ಗೌರವವಾಗಿದೆ. ಹಾಗಿದ್ದರೂ ಬಿಳಿ ಚೆಂಡಿನ ಮೇಲೆ ಹೆಚ್ಚು ಗಮನ ಕೇಂದ್ರಿಕರಿಸುವ ನಿಟ್ಟಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿಯನ್ನು ಸಲ್ಲಿಸುತ್ತಿದ್ದೇನೆ ಎಂದರು. 

ಪಾಕಿಸ್ತಾನ ಪ್ರತಿನಿಧಿಸುವುದೇ ನನ್ನ ಧ್ಯೇಯವಾಗಿದ್ದು, ಮುಂದಿನ ವರ್ಷ ನಡೆಯಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನತ್ತ ಹೆಚ್ಚಿನ ಗಮನ ಹರಿಸಿದ್ದೇನೆ ಎಂದಿದ್ದಾರೆ. 

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾಗಲಿರುವಂತೆಯೇ ಯುವ ವೇಗಿಗಳಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಆಮೀರ್ ತಮ್ಮ ಹಾದಿಯನ್ನು ಬಿಟ್ಟುಕೊಡಲು ನಿರ್ಧರಿಸಿದ್ದಾರೆ. ಆಮೀರ್ 2019 ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ತಮ್ಮ ಕೊನೆಯ ಟೆಸ್ಟ್ ಪಂದ್ಯದಲ್ಲಿ ನಾಲ್ಕು ವಿಕೆಟುಗಳನ್ನು ಕಬಳಿಸಿದ್ದರು. ಹಾಗೆಯೇ 2017ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಜೀವನಶ್ರೇಷ್ಠ (6/44) ಬೌಲಿಂಗ್ ಸಾಧನೆ ಮಾಡಿದ್ದರು.