ಟೀಮ್ ಇಂಡಿಯಾಗೆ “ಐಸಿಸಿ ಟೆಸ್ಟ್ ಚಾಂಪಿಯನ್​ಷಿಪ್ ಗದೆ”ಯ ಹ್ಯಾಟ್ರಿಕ್ ಗೌರವ

0
373

ಭಾರತ ತಂಡ ಸತತ 3ನೇ ವರ್ಷ ಐಸಿಸಿ ಟೆಸ್ಟ್ ಚಾಂಪಿಯನ್​ಷಿಪ್ ಗದೆಯನ್ನು ಜಯಿಸಿದ್ದು, 6.93 ಕೋಟಿ ರೂ. (1 ದಶಲಕ್ಷ ಡಾಲರ್) ಬಹುಮಾನವನ್ನೂ ಪಡೆದಿದೆ. ಏಪ್ರಿಲ್ 1ರ ಕಟ್-ಆಫ್ ದಿನಾಂಕದವರೆಗೆ ಐಸಿಸಿ ಟೆಸ್ಟ್ ರ‍್ಯಾಂಕ್‌ ನಲ್ಲಿ ನಂ. 1 ಪಟ್ಟ ಕಾಯ್ದುಕೊಂಡ ಸಾಧನೆಯೊಂದಿಗೆ ಭಾರತ ಈ ಗೌರವ ಪಡೆದಿದೆ.

ದುಬೈ: ಭಾರತ ತಂಡ ಸತತ 3ನೇ ವರ್ಷ ಐಸಿಸಿ ಟೆಸ್ಟ್ ಚಾಂಪಿಯನ್​ಷಿಪ್ ಗದೆಯನ್ನು ಜಯಿಸಿದ್ದು, 6.93 ಕೋಟಿ ರೂ. (1 ದಶಲಕ್ಷ ಡಾಲರ್) ಬಹುಮಾನವನ್ನೂ ಪಡೆದಿದೆ. ಏಪ್ರಿಲ್ 1ರ ಕಟ್-ಆಫ್ ದಿನಾಂಕದವರೆಗೆ ಐಸಿಸಿ ಟೆಸ್ಟ್ನ ರ‍್ಯಾಂಕ್‌ ನಲ್ಲಿ ನಂ. 1 ಪಟ್ಟ ಕಾಯ್ದುಕೊಂಡ ಸಾಧನೆಯೊಂದಿಗೆ ಭಾರತ ಈ ಗೌರವ ಪಡೆದಿದೆ.

2018-19ರ ಸಾಲಿನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನ ಸಾಧನೆ ಮಾಡಿದ್ದ ಭಾರತ ತಂಡ, ಒಟ್ಟಾರೆ 5ನೇ ಬಾರಿ ಈ ಗೌರವ ಪಡೆದಿದೆ. ‘ಇದು ಹೆಮ್ಮೆಯ ಸಾಧನೆ. ನಮ್ಮ ತಂಡ ಎಲ್ಲ ಪ್ರಕಾರದಲ್ಲೂ ಉತ್ತಮ ನಿರ್ವಹಣೆ ತೋರುತ್ತಿದೆ. ಆದರೂ ಟೆಸ್ಟ್ ರ್ಯಾಂಕಿಂಗ್​ನ ಅಗ್ರಸ್ಥಾನ ವಿಶೇಷ ಖುಷಿ ತಂದುಕೊಡುತ್ತದೆ. ಟೆಸ್ಟ್ ಕ್ರಿಕೆಟ್​ನ ಪ್ರಾಮುಖ್ಯತೆ ನಮಗೆಲ್ಲರಿಗೂ ಗೊತ್ತಿದೆ. ಅತ್ಯುತ್ತಮ ನಿರ್ವಹಣೆ ತೋರಿದರಷ್ಟೇ ಇದರಲ್ಲಿ ಯಶ ಕಾಣಲು ಸಾಧ್ಯ’ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತ ತಂಡ ಏಪ್ರಿಲ್ 1ರವರೆಗೆ ಅಗ್ರಸ್ಥಾನ ಕಾಯ್ದುಕೊಳ್ಳುವುದು, ಜನವರಿಯಲ್ಲಿ ಆಸೀಸ್ ನೆಲದಲ್ಲಿ ಸರಣಿ ಗೆದ್ದಾಗಲೇ ಖಚಿತಗೊಂಡಿತ್ತು. ಸದ್ಯ 116 ಅಂಕ ಹೊಂದಿರುವ ಭಾರತ, ದ್ವಿತೀಯ ಸ್ಥಾನಿ ನ್ಯೂಜಿಲೆಂಡ್​ಗಿಂತ (108) 8 ಅಂಕ ಮುನ್ನಡೆಯಲ್ಲಿದೆ.

ಕಿವೀಸ್​ಗೆ ದ್ವಿತೀಯ ಸ್ಥಾನ: ನ್ಯೂಜಿಲೆಂಡ್ ತಂಡ 2ನೇ ಸ್ಥಾನ ಗಳಿಸಿದ್ದು, 3.47 ಕೋಟಿ ರೂ. (5 ಲಕ್ಷ ಡಾಲರ್) ಬಹುಮಾನ ಪಡೆದಿದೆ. ಇತ್ತೀಚೆಗೆ ಟೆಸ್ಟ್ ಕ್ರಿಕೆಟ್​ನಲ್ಲಿ ದಿಢೀರ್ ಪ್ರಗತಿ ಕಾಣುತ್ತಿರುವ ಕಿವೀಸ್ ತಂಡದ ನಾಯಕ ಕೇನ್ ವಿಲಿಯಮ್ಸನ್, ಮೊದಲ ಬಾರಿ ಸಿಕ್ಕ ಗೌರವಕ್ಕೆ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಕಳೆದೆರಡು ವರ್ಷ 2ನೇ ಸ್ಥಾನ ಪಡೆದಿದ್ದ ದಕ್ಷಿಣ ಆಫ್ರಿಕಾ ಈ ಬಾರಿ 3ನೇ ಸ್ಥಾನಕ್ಕೆ ಕುಸಿದಿದ್ದು, 1.39 ಕೋಟಿ ರೂ. (2 ಲಕ್ಷ ಡಾಲರ್) ಗಳಿಸಿದೆ. ತಲಾ 104 ಅಂಕ ಹೊಂದಿದ್ದರೂ, ದಶಾಂಶ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿರುವ ಆಸ್ಟ್ರೇಲಿಯಾ 4ನೇ ಸ್ಥಾನದೊಂದಿಗೆ 70 ಲಕ್ಷ ರೂ. (1 ಲಕ್ಷ ಡಾಲರ್) ಗಳಿಸಿದೆ.

ಮುಂದಿನ ಏಕದಿನ ವಿಶ್ವಕಪ್ ನಂತರದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ನಿರ್ಧರಿಸಲು 2021ರವರೆಗೆ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್​ಷಿಪ್ ಫೈನಲ್ ನಡೆಯಲಿದ್ದು, ಇದರಲ್ಲಿ 9 ತಂಡಗಳು 27 ಸರಣಿ ಮತ್ತು 71 ಪಂದ್ಯಗಳನ್ನು ಆಡಲಿವೆ. -ಪಿಟಿಐ