ಟಿವಿ, ಸಿಮೆಂಟ್‌ ಮೇಲಿನ ಜಿಎಸ್‌ಟಿ ಇಳಿಕೆ: ಜೇಟ್ಲಿ ವಿಶ್ವಾಸ

0
21

ಜಿಎಸ್‌ಟಿ ಸಂಗ್ರಹ ಏರಿಕೆಯಾಗುತ್ತಿರುವುದರಿಂದ ದೊಡ್ಡ ಸ್ಕ್ರೀನ್‌ನ ಟಿ.ವಿ, ಎ.ಸಿ, ಸಿಮೆಂಟ್‌ ಮತ್ತಿತರ ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಇಳಿಕೆಯಾಗುವ ಅವಕಾಶಗಳಿವೆ ಎಂದು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇವೆಲ್ಲ ಉತ್ಪನ್ನಗಳು ಶೇ.28ರ ಜಿಎಸ್‌ಟಿ ಶ್ರೇಣಿಯಲ್ಲಿದ್ದು, ತೆರಿಗೆ ಇಳಿಕೆಯಾಗುವ ಸಾಧ್ಯತೆ ಇದೆ.

ಹೊಸದಿಲ್ಲಿ: ಜಿಎಸ್‌ಟಿ ಸಂಗ್ರಹ ಏರಿಕೆಯಾಗುತ್ತಿರುವುದರಿಂದ ದೊಡ್ಡ ಸ್ಕ್ರೀನ್‌ನ ಟಿ.ವಿ, ಎ.ಸಿ, ಸಿಮೆಂಟ್‌ ಮತ್ತಿತರ ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಇಳಿಕೆಯಾಗುವ ಅವಕಾಶಗಳಿವೆ ಎಂದು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇವೆಲ್ಲ ಉತ್ಪನ್ನಗಳು ಶೇ.28ರ ಜಿಎಸ್‌ಟಿ ಶ್ರೇಣಿಯಲ್ಲಿದ್ದು, ತೆರಿಗೆ ಇಳಿಕೆಯಾಗುವ ಸಾಧ್ಯತೆ ಇದೆ. 

”ಜಿಎಸ್‌ಟಿಯಡಿಯಲ್ಲಿ ಶೇ.28ರ ಶ್ರೇಣಿಯಲ್ಲಿದ್ದ ಬಹುತೇಕ ಸರಕುಗಳನ್ನು ಆ ವ್ಯಾಪ್ತಿಯಿಂದ ಈಗಾಗಲೇ ಹೊರಗಿಡಲಾಗಿದೆ. ಕೇವಲ 35 ಸರಕುಗಳಷ್ಟೇ ಸದ್ಯಕ್ಕೆ ಉಳಿದಿವೆ. ಈ ದುಬಾರಿ ತೆರಿಗೆ ಶ್ರೇಣಿಯಲ್ಲಿ ಮುಂದಿನ ಹಂತದಲ್ಲಿ ತಂಬಾಕಿನಂಥ ಅಪಾಯಕಾರಿ ವಸ್ತುಗಳು ಮತ್ತು ಕೆಲವು ಐಷಾರಾಮಿ ಉತ್ಪನ್ನಗಳನ್ನು ಮಾತ್ರ ಇಡಲಾಗುವುದು,” ಎಂದು ಜೇಟ್ಲಿ ಹೇಳಿದ್ದಾರೆ. 

ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಅವರು ಬರೆದಿದ್ದು, ”ಜಿಎಸ್‌ಟಿ ಬರುವುದಕ್ಕೂ ಮುನ್ನ ಗೃಹೋಪಯೋಗಿ ವಸ್ತುಗಳಿಗೆ ಶೇ.31ರಷ್ಟು ತೆರಿಗೆ ಇತ್ತು. ಅದನ್ನು ‘ಕಾಂಗ್ರೆಸ್‌ ಪರಂಪರೆಯ ತೆರಿಗೆ’ ಎಂದು ಕರೆಯಬಹುದು. ಕಳೆದ ಒಂದು ವರ್ಷದಲ್ಲಿ 384 ಸರಕುಗಳ ಮೇಲಿನ ತೆರಿಗೆಯನ್ನು ಇಳಿಸಿದ್ದೇವೆ,” ಎಂದಿದ್ದಾರೆ. 

”ತೆರಿಗೆ ಆದಾಯ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ವಿಶ್ವಾಸವಿದ್ದು, ಶೇ.28ರಲ್ಲಿರುವ ಇನ್ನೂ ಕೆಲವು ಸರಕುಗಳ ತೆರಿಗೆ ಇಳಿಕೆಯಾಗುವ ಸಾಧ್ಯತೆ ಇದೆ. 13 ತಿಂಗಳ ಅವಧಿಯೊಳಗೆ ಜಿಎಸ್‌ಟಿ ಮಂಡಳಿಯು ಶೇ.28ರ ಶ್ರೇಣಿಯಿಂದ ಬಹಳಷ್ಟು ಸರಕುಗಳನ್ನು ಹೊರಗಿಟ್ಟು ತೆರಿಗೆ ಕಡಿತ ಮಾಡಿದೆ. ಐಶಾರಾಮಿ ಮತ್ತು ಅಪಾಯದ ಸರಕುಗಳಿಗಷ್ಟೇ ಹೆಚ್ಚಿನ ತೆರಿಗೆ ಇರಲಿದೆ,” ಎಂದು ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. 

ಶೇ.28ರ ತೆರಿಗೆ ಶ್ರೇಣಿಯಲ್ಲಿ ಅಪಾಯದ ಮತ್ತು ಐಶಾರಾಮಿ ಸರಕುಗಳು ಇರಲಿವೆ. ಶೇ.28ರ ತೆರಿಗೆ ಶ್ರೇಣಿಯಲ್ಲಿದ್ದ ಬಹುತೇಕ ಸರಕುಗಳನ್ನು ಈಗ ಶೇ.18 ಮತ್ತು ಶೇ.12ರ ತೆರಿಗೆ ಶ್ರೇಣಿಗೆ ತರಲಾಗಿದೆ. 

ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ಇಳಿಕೆಯಿಂದ ಸರಕಾರದ ಬೊಕ್ಕಸಕ್ಕೆ 70,000 ಕೋಟಿ ರೂ. ನಿವ್ವಳ ನಷ್ಟವಾಗಿದೆ. ಸರಕಾರಕ್ಕೆ ತೆರಿಗೆ ಆದಾಯ ಇಳಿಕೆಯಾಗುತ್ತದೆ. ಆದರೆ, ತೆರಿಗೆ ಕಡಿತದಿಂದ ಉತ್ಪನ್ನಗಳ ಬೆಲೆ ಇಳಿಯಲಿದೆ. ಗ್ರಾಹಕರ ಖರೀದಿ ಸಾಮರ್ಥ್ಯ‌ ವೃದ್ಧಿಯಾಗಲಿದ್ದು, ಆರ್ಥಿಕತೆ ಬೆಳೆಯಲಿದೆ. 

ಸೇವಾ ವಲಯದಲ್ಲಿನ 68 ನಾನಾ ಬಗೆಯ ಸೇವೆಗಳ ಮೇಲಿನ ತೆರಿಗೆ ಇಳಿಕೆಯಾಗಿದೆ. ಸಿಮೆಂಟ್‌ ಹೊರತುಪಡಿಸಿ ನಿರ್ಮಾಣ ವಲಯದ ಸರಕುಗಳ ತೆರಿಗೆ ಕಡಿತವಾಗಿದೆ. ಇನ್ನು ರೆಫ್ರಿಜಿರೇಟರ್‌, ವಾಷಿಂಗ್‌ ಮೆಷಿನ್‌ನಂಥ ಬೃಹತ್‌ ಎಲೆಕ್ಟ್ರಿಕ್‌ ವಸ್ತುಗಳ(ಶ್ವೇತ ಸರಕು) ತೆರಿಗೆ ಇಳಿಸಲಾಗಿದೆ. ಜಿಎಸ್‌ಟಿಯಿಂದ ಖರೀದಿಗೆ ಉತ್ತಮ ವಾತಾವರಣ ಸೃಷ್ಟಿಯಾಗಿದ್ದು, ಗ್ರಾಹಕರಿಗೆ ಇದಕ್ಕಿಂತ ಉತ್ತಮ ಅವಕಾಶ ಇನ್ನೊಂದು ಸಿಗದು. 

ಸ್ವಾತಂತ್ರ್ಯ ಪಡೆದ ನಂತರ ಈವರೆಗಿನ ತೆರಿಗೆ ಸುಧಾರಣೆಗಳಲ್ಲಿ ಜಿಎಸ್‌ಟಿ ಪ್ರಮುಖವಾದದ್ದಾಗಿದೆ. ಕಾಂಗ್ರೆಸ್‌ನ ಒಡೆತನದ ತೆರಿಗೆ ಜಾಗಕ್ಕೆ ಸರಳ ಮತ್ತು ಉತ್ತಮವಾದ ಜಿಎಸ್‌ಟಿ ಬಂದಿದ್ದು, ಸಂಭ್ರಮಿಸಲು ಇದೊಂದು ಉತ್ತಮ ಅವಕಾಶವಾಗಿದೆ. 

ಪರಿಷ್ಕೃತ ತೆರಿಗೆಗಳು ಜಾರಿ 

ಕಳೆದ ವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳು, ಫ್ರಿಡ್ಜ್‌, ಸಣ್ಣ ಪರದೆಯ ಟಿ.ವಿ, ವಾಷಿಂಗ್‌ ಮೆಷಿನ್‌, ಫುಟ್‌ವೇರ್‌ ಮತ್ತಿತರ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಗಣನೀಯವಾಗಿ ಇಳಿಸಲಾಗಿದೆ. ಹೊಸ ತೆರಿಗೆಗಳು ಶುಕ್ರವಾರದಿಂದ(ಜು.27) ಜಾರಿಗೆ ಬಂದಿವೆ. ಕೆಲವು ಉತ್ಪನ್ನಗಳ ದರಗಳಲ್ಲಿ ಶೇ.10ರಷ್ಟು ಇಳಿಕೆಯಾಗಿದ್ದರೆ, ಕೆಲವು ಉತ್ಪನ್ನಗಳ ದರದಲ್ಲಿ ಶೇ.6ರಷ್ಟು ಇಳಿಕೆಯಾಗಿದೆ. ಸ್ಯಾನಿಟರಿ ನ್ಯಾಪ್‌ಕಿನ್‌ಗಳ ತೆರಿಗೆ ಶೂನ್ಯವಾಗಿದೆ.