ಟಿಪ್ಪುವಿನ ಬೆಳ್ಳಿ ಲೇಪಿತ ಬಂದೂಕು ₹54 ಲಕ್ಷಕ್ಕೆ ಹರಾಜು

0
480

ಟಿಪ್ಪು ಸುಲ್ತಾನ್‌ಗೆ ಸೇರಿದ ವಿರಳವಾದ ಎಂಟು ಕಲಾತ್ಮಕ ಶಸ್ತ್ರಾಸ್ತ್ರಗಳನ್ನು ಬರ್ಕ್‌ಶೈರ್ ಮೂಲದ ಆ್ಯಂಟನಿ ಕ್ರಿಬ್ ಲಿ. ಸಂಸ್ಥೆ ಹರಾಜು ಹಾಕಿದ್ದು, ₹97.28 ಲಕ್ಷಕ್ಕೆ ಇವು ಮಾರಾಟವಾಗಿವೆ.

ಲಂಡನ್ (ಪಿಟಿಐ): ಟಿಪ್ಪು ಸುಲ್ತಾನ್‌ಗೆ ಸೇರಿದ ವಿರಳವಾದ ಎಂಟು ಕಲಾತ್ಮಕ ಶಸ್ತ್ರಾಸ್ತ್ರಗಳನ್ನು ಬರ್ಕ್‌ಶೈರ್ ಮೂಲದ ಆ್ಯಂಟನಿ ಕ್ರಿಬ್ ಲಿ. ಸಂಸ್ಥೆ ಹರಾಜು ಹಾಕಿದ್ದು, 97.28 ಲಕ್ಷಕ್ಕೆ ಇವು ಮಾರಾಟವಾಗಿವೆ.

ಇವುಗಳಲ್ಲಿ ಬೆಳ್ಳಿ ಲೇಪಿತ ಬಂದೂಕು 14 ಬಾರಿ ಬಿಡ್ಡಿಂಗ್ ಆದ ಬಳಿಕ, ಅತಿ ಹೆಚ್ಚು ಮೌಲ್ಯ 54.58 ಲಕ್ಷಕ್ಕೆ ಹರಾಜಾಗಿದೆ. 

‘ಟಿಪ್ಪುವಿನ ಇತರೆ ಶಸ್ತ್ರಾಸ್ತ್ರಗಳಿಗಿಂತ ಇದು ಹೆಚ್ಚು ಹಾನಿಗೊಳಗಾಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಬಹುಶಃ ಇದು ಯುದ್ಧಭೂಮಿಯಿಂದಲೇ ಸಂಗ್ರಹಿಸಿದ ಬಂದೂಕು ಇರಬಹುದು’ ಎಂದು ಹರಾಜಿನ ವೇಳೆ ಸಂಸ್ಥೆಯ ಪ್ರಕಟಣೆಯಲ್ಲಿ  ಹೇಳಲಾಗಿದೆ.

ಟಿಪ್ಪು ವೈಯಕ್ತಿಕವಾಗಿ ಬಳಸುತ್ತಿದ್ದ ಎನ್ನಲಾದ, ಚಿನ್ನದ ಕುಸುರಿ ಇರುವ ಖಡ್ಗ 58 ಬಾರಿ ಹರಾಜು ಪ್ರಕ್ರಿಯೆಗೆ ಒಳಗಾಗಿ ಕೊನೆಗೆ 16.82 ಲಕ್ಷಕ್ಕೆ ಮಾರಾಟವಾಗಿದೆ. ಈಚೆಗೆ ಬರ್ಕ್‌ಶೈರ್‌ನ ಇಂಗ್ಲಿಷ್ ಕೌಂಟಿಯಲ್ಲಿ ದಂಪತಿಯೊಬ್ಬರ ಮನೆಯ ಅಟ್ಟದಲ್ಲಿ ಈ ವಸ್ತುಗಳು ಪತ್ತೆಯಾಗಿದ್ದವು.

‘ಸುಮಾರು 220 ವರ್ಷಗಳ ಬಳಿಕ ಒಂದೇ ಕಡೆ ಟಿಪ್ಪುವಿಗೆ ಸಂಬಂಧಿಸಿದ ಎಂಟು ವಸ್ತುಗಳು ದೊರಕಿದ್ದು ವಿಶೇಷ. ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿದವರಲ್ಲಿ ಬಹುತೇಕರು ಭಾರತೀಯರಾಗಿದ್ದರು’ ಎಂದು ಸಂಸ್ಥೆ ತಿಳಿಸಿದೆ. 

‘ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ಕಾನೂನು ಉಲ್ಲಂಘಿಸಿಲ್ಲ.  ಹರಾಜಿನಲ್ಲಿ ದೊರೆತ ಬಹುಪಾಲು ಹಣವನ್ನು ಭಾರತದಲ್ಲಿನ ಶಾಲೆಗೆ ದೇಣಿಗೆ ನೀಡಲು ಈ ದಂಪತಿ ನಿರ್ಧರಿಸಿದ್ದಾರೆ’ ಎಂದು ಆ್ಯಂಟನಿ ಕ್ರಿಬ್ ಲಿ. ಸಂಸ್ಥೆ ದೃಢಪಡಿಸಿದೆ.

ಎಲ್ಲ ಶಸ್ತ್ರಾಸ್ತ್ರಗಳ ಮೇಲೂ ಹುಲಿ ಹಾಗೂ ಹುಲಿಯ ಪಟ್ಟೆಗಳ ಕೆತ್ತನೆ ಇದೆ.