ಜ್ವೆರೆವ್‌ ಮುಡಿಗೆ ಚೊಚ್ಚಲ ಕಿರೀಟ

0
392

ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌, ಎಟಿಪಿ ಫೈನಲ್ಸ್‌ ಟೆನಿಸ್‌ ಟೂರ್ನಿಯಲ್ಲಿ ಭಾನುವಾರ ಚೊಚ್ಚಲ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು.

ಲಂಡನ್‌ (ಎಎಫ್‌ಪಿ): ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌, ಎಟಿಪಿ ಫೈನಲ್ಸ್‌ ಟೆನಿಸ್‌ ಟೂರ್ನಿಯಲ್ಲಿ ಭಾನುವಾರ ಚೊಚ್ಚಲ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು.

ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ 21 ವರ್ಷ ವಯಸ್ಸಿನ ಜ್ವೆರೆವ್‌ 6–4, 6–3 ನೇರ ಸೆಟ್‌ಗಳಿಂದ ಸರ್ಬಿಯಾದ ನೊವಾಕ್‌ ಜೊಕೊವಿಚ್‌ಗೆ ಆಘಾತ ನೀಡಿದರು.

ಸೆಮಿಫೈನಲ್‌ನಲ್ಲಿ ಆರು ಬಾರಿಯ ಚಾಂಪಿಯನ್‌ ರೋಜರ್‌ ಫೆಡರರ್‌ ಅವರನ್ನು ಸೋಲಿಸಿದ್ದ ಮೂರನೇ ಶ್ರೇಯಾಂಕದ ಆಟಗಾರ ಜ್ವೆರೆವ್‌, ಫೈನಲ್‌ನಲ್ಲೂ ಮೋಡಿ ಮಾಡಿದರು. ನಾಲ್ಕು ಬಾರಿ ಜೊಕೊವಿಚ್‌ ಸರ್ವ್‌ ಮುರಿದ ಜ್ವೆರೆವ್‌, ಸರ್ಬಿಯಾದ ಆಟಗಾರನ ಎದುರು ರೌಂಡ್‌ ರಾಬಿನ್‌ ಲೀಗ್‌ನಲ್ಲಿ ಎದುರಾಗಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡರು.

ಟೂರ್ನಿಯಲ್ಲಿ ಆರನೇ ಪ್ರಶಸ್ತಿ ಗೆದ್ದು ಫೆಡರರ್‌ ದಾಖಲೆ ಸರಿಗಟ್ಟುವ ಕನಸು ಕಂಡಿದ್ದ ಜೊಕೊವಿಚ್‌ಗೆ ಆರಂಭದಲ್ಲೇ ಹಿನ್ನಡೆ ಎದುರಾಯಿತು.

ಮೊದಲ ಸೆಟ್‌ನಲ್ಲಿ ಮೂರು ‘ಏಸ್‌’ಗಳನ್ನು ಸಿಡಿಸಿದ ಜ್ವೆರೆವ್‌, ಒಮ್ಮೆ ಎದುರಾಳಿಯ ಸರ್ವ್‌ ಮುರಿದು ಸುಲಭವಾಗಿ ಗೆಲುವಿನ ತೋರಣ ಕಟ್ಟಿದರು.