ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ “ಗಿರೀಶ್​ ಕಾರ್ನಾಡ್”​ ವಿಧಿವಶ

0
79

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಗಿರೀಶ್​ ಕಾರ್ನಾಡ್​ ಅವರು ಇಂದು(ಜೂನ್ 10 ರ ಸೋಮವಾರ) ಬೆಳಗ್ಗೆ 8 ಗಂಟೆಗೆ ತಮ್ಮ ಲ್ಯಾವೆಲ್ಲೆ ರಸ್ತೆಯಲ್ಲಿರುವ ಮನೆಯಲ್ಲಿ ನಿಧನರಾದರು.81 ವರ್ಷದ ಗಿರೀಶ್​ ಕಾರ್ನಾಡ್​ ಅವರು ಹಲವು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ನೀಡುತ್ತಿದ್ದರೂ ಫಲಕಾರಿಯಾಗಲಿಲ್ಲ.

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಗಿರೀಶ್​ ಕಾರ್ನಾಡ್​ ಅವರು ಇಂದು(ಜೂನ್ 10 ರ ಸೋಮವಾರ) ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ತಮ್ಮ ಲ್ಯಾವೆಲ್ಲೆ ರಸ್ತೆಯಲ್ಲಿರುವ ಮನೆಯಲ್ಲಿ ನಿಧನರಾದರು.

81 ವರ್ಷದ ಗಿರೀಶ್​ ಕಾರ್ನಾಡ್​ ಅವರು ಹಲವು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ನೀಡುತ್ತಿದ್ದರೂ ಫಲಕಾರಿಯಾಗಲಿಲ್ಲ.

ಗಿರೀಶ ಕಾರ್ನಾಡ್‌ ರವರ ಜೀವನ ಮತ್ತು ಸಾಧನೆ

ಗಿರೀಶ ಕಾರ್ನಾಡ್‌ 1938 ಮೇ 19ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದ್ದರು. ನಾಟಕಕಾರರಾದ ಇವರು ಏಕಾಂಕ ನಾಟಕ ಮಾ ನಿಷಾಧ, ಯಯಾತಿ, ತುಘಲಕ್​, ನಾಗಮಂಡಲ, ಟಿಪ್ಪುವಿನ ಕನಸುಗಳು, ಹಿಟ್ಟಿನ ಹುಂಜ ಅಥವಾ ಬಲಿ, ಅಗ್ನಿ ಮತ್ತು ಮಳೆ, ಅಂಜುಮಲ್ಲಿಗೆ, ಒಡಕಲು ಬಿಂಬ, ಹಯವದನ, ಬೆಂದ ಕಾಳು ಆನ್ ಟೋಸ್ಟ, ಮದುವೆ ಅಲ್ಬಮ್, ಪ್ಲಾವರ್ಸ ಸೇರಿ ಹಲವು ನಾಟಕಗಳನ್ನು ರಚಿಸಿದ್ದಾರೆ. ಗಿರೀಶ್ ಕಾರ್ನಾಡ್ ತಮ್ಮ ಸಮಗ್ರ ಸಾಹಿತ್ಯಕ್ಕೆ 1998ರಲ್ಲಿ ಜ್ಞಾನಪೀಠ ಪ್ರಶಸ್ತಿ ಭಾಜನರಾಗಿದ್ದಾರೆ. 2011ರಲ್ಲಿ “ಆಡಾಡತ ಆಯುಷ್ಯ” ಎಂಬ ತಮ್ಮ ಆತ್ಮಚರಿತ್ರೆ ಬರೆದುಕೊಂಡಿದ್ದಾರೆ.

ಗಿರೀಶ್​ ಅವರು ಪ್ರಾಥಮಿಕ ಶಿಕ್ಷಣವನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಪ್ರೌಢಶಿಕ್ಷಣವನ್ನು ಧಾರವಾಡದ ಬಾಸೆಲ್​ ಮಿಷನ್​ ಹೈಸ್ಕೂಲ್​ನಲ್ಲಿ ಹಾಗೂ ಪದವಿ ಶಿಕ್ಷಣವನ್ನು ಕರ್ನಾಟಕ ಕಾಲೇಜಿನಲ್ಲಿ ಪಡೆದರು. ತಂದೆ ರಘುನಾಥ ಕಾರ್ನಾಡ್ ಶಿರಸಿಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಅಂದರೆ 1952ರಿಂದ 53ರಲ್ಲಿ ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದರು. ಆ ಬಳಿಕ ತಂದೆ ವರ್ಗಾವಣೆಯಾಗಿದ್ದರಿಂದ ಗಿರೀಶ ಕಾರ್ನಾಡರ ಮುಂದಿನ ಶಿಕ್ಷಣ ಹೊರ ಜಿಲ್ಲೆಯಲ್ಲಾಯಿತು.  ನಂತರ ಹೆಚ್ಚಿನ ವ್ಯಾಸಂಗಕ್ಕೆ ಆಕ್ಸಫರ್ಡ್​ಗೆ ತೆರಳಿ ಅಲ್ಲಿನ ಆಕ್ಸ್​ಫರ್ಡ್​ ಡಿಬೇಟ್​ ಕ್ಲಬ್​ಗೆ ಆಯ್ಕೆಯಾದ ಪ್ರಥಮ ಏಷಿಯನ್​ ಎಂಬ ಹೆಗ್ಗಳಿಕೆಗೆ ಭಾಜನರಾದರು.

ಕನ್ನಡ, ತಮಿಳು, ಹಿಂದಿ ಸೇರಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 1970ರಿಂದ ಅವರ ಸಿನಿಮಾ ಪಯಣ ಶುರುವಾಗಿದೆ. ಸಂಸ್ಕಾರ, ವಂಶವೃಕ್ಷ, ಎಕೆ 47, ಸಂತ ಶಿಶುನಾಳ ಶರೀಫ, ಏಪ್ರಿಲ್​ ಫೂಲ್​, ತನನಂ ತನನಂ, ಆ ದಿನಗಳು, ಕೆಂಪೇಗೌಡ ಸಿನಿಮಾಗಳಲ್ಲಿ ಅಮೋಘ ಅಭಿನಯ ನೀಡಿದ್ದಾರೆ. ಸಂತ ಶಿಶುನಾಳ ಶರೀಫದಲ್ಲಿ ಇವರು ನಿರ್ವಹಿಸಿದ ಗುರು ಗೋವಿಂದ ಭಟ್ಟರ ಪಾತ್ರಕ್ಕೆ ಕರ್ನಾಟಕ ರಾಜ್ಯ ಅತ್ಯುತ್ತಮ ಪೋಷಕ ನಟ ಗೌರವ ಲಭಿಸಿದೆ. ಅಲ್ಲದೆ ಇತ್ತೀಚೆಗೆ ತೆರೆಕಂಡ ಹಿಂದಿ ಸಿನಮಾ ಸಲ್ಮಾನ್​ ಖಾನ್​ ಅವರ ಟೈಗರ್ ಜಿಂದಾ ಹೈ ದಲ್ಲೂ ಕೂಡ ಅಭಿನಯಿಸಿದ್ದಾರೆ.

ಕಾರ್ನಾಡ್ ಅವರು ಪಡೆದಿರುವ ಪ್ರಶಸ್ತಿಗಳು

ಗಿರೀಶ್​ ಕಾರ್ನಾಡ್​ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1974ರಲ್ಲಿ ಪದ್ಮಶ್ರೀ, 1992ರಲ್ಲಿ ಪದ್ಮಭೂಷಣ, 1998ರಲ್ಲಿ ಜ್ಞಾನಪೀಠ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಹಾಗೇ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಯು.ಆರ್​.ಅನಂತಮೂರ್ತಿ ಅವರ ಸಂಸ್ಕಾರ ಸಿನಿಮಾ ಮಾಡುವ ಮೂಲಕ ಇಬ್ಬರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕಾದಂಬರಿಗಳನ್ನು ಸಿನಿಮಾ ಮಾಡಿದ ಏಕೈಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.