ಜೊಕೊವಿಚ್‌ಗೆ ಲಾರೆಸ್‌ ಗೌರವ

0
448

ಸರ್ಬಿಯಾದ ಟೆನಿಸ್‌ ತಾರೆ ನೊವಾಕ್‌ ಜೊಕೊವಿಚ್‌ ಅವರು ಪ್ರತಿಷ್ಠಿತ ಲಾರೆಸ್‌ ವಿಶ್ವ ಕ್ರೀಡಾ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಮೊನಾಕೊ (ಪಿಟಿಐ): ಸರ್ಬಿಯಾದ ಟೆನಿಸ್‌ ತಾರೆ ನೊವಾಕ್‌ ಜೊಕೊವಿಚ್‌ ಅವರು ಪ್ರತಿಷ್ಠಿತ ಲಾರೆಸ್‌ ವಿಶ್ವ ಕ್ರೀಡಾ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ನೊವಾಕ್‌ 2019ರ ‘ವಿಶ್ವದ ಶ್ರೇಷ್ಠ ಕ್ರೀಡಾಪಟು’ ಗೌರವಕ್ಕೆ ಭಾಜನರಾಗಿದ್ದಾರೆ. ಅವರು ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದು, ಜಮೈಕಾದ ಓಟಗಾರ ಉಸೇನ್‌ ಬೋಲ್ಟ್‌ ದಾಖಲೆ ಸರಿಗಟ್ಟಿದ್ದಾರೆ. ಐದು ಬಾರಿ ಪ್ರಶಸ್ತಿ ಗೆದ್ದ ದಾಖಲೆ ಸ್ವಿಟ್ಜರ್‌ಲೆಂಡ್‌ನ ಟೆನಿಸ್‌ ಆಟಗಾರ ರೋಜರ್‌ ಫೆಡರರ್‌ ಅವರ ಹೆಸರಿನಲ್ಲಿದೆ.

ಜೊಕೊವಿಚ್‌ ಅವರು ಪ್ರಶಸ್ತಿಯ ಹಾದಿಯಲ್ಲಿ ಫ್ರಾನ್ಸ್‌ನ ಫುಟ್‌ಬಾಲ್ ಆಟಗಾರ ಕೈಲಿಯನ್‌ ಬಾಪೆ, ಕೀನ್ಯಾದ ದೂರ ಅಂತರದ ಓಟಗಾರ ಎಲ್ಯೂಡ್‌ ಕಿಪ್‌ಚೋಗ್‌ ಮತ್ತು ಅಮೆರಿಕದ ಬ್ಯಾಸ್ಕೆಟ್‌ಬಾಲ್‌ ಆಟಗಾರ ಲೆಬ್ರೊನ್‌ ಜೇಮ್ಸ್‌ ಅವರನ್ನು ಹಿಂದಿಕ್ಕಿದ್ದಾರೆ.

ಅಮೆರಿಕದ ಜಿಮ್ನಾಸ್ಟಿಕ್ಸ್‌ ಪಟು ಸಿಮೋನ್‌ ಬೆಲಿಸ್‌ ‘ಸ್ಪೋರ್ಟ್ಸ್‌ವುಮೆನ್‌ ಆಫ್‌ ದಿ ಇಯರ್‌’ ಪ್ರಶಸ್ತಿ ಪಡೆದರು.

ಜಪಾನ್‌ನ ಟೆನಿಸ್‌ ಆಟಗಾರ್ತಿ ನವೊಮಿ ಒಸಾಕ ‘ಬ್ರೇಕ್‌ಥ್ರೂ ಆಫ್‌ ದಿ ಇಯರ್‌’ ಮತ್ತು ಅಮೆರಿಕದ ಗಾಲ್ಫರ್‌ ಟೈಗರ್‌ ವುಡ್ಸ್‌ ‘ವರ್ಲ್ಡ್‌ ಕಮ್‌ಬ್ಯಾಕ್‌ ಆಫ್‌ ದಿ ಇಯರ್‌’ ಪ್ರಶಸ್ತಿಗಳನ್ನು ಜಯಿಸಿದರು.

‘ವರ್ಲ್ಡ್‌ ಕಮ್‌ಬ್ಯಾಕ್‌ ಆಫ್‌ ದಿ ಇಯರ್‌’ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಭಾರತದ ಕುಸ್ತಿಪಟು ವಿನೇಶಾ ಪೋಗಟ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕ್ರೀಡಾ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಜಾರ್ಖಂಡ್‌ನ ಯುವ ಸಂಸ್ಥೆಗೆ ‘ಲಾರೆಸ್‌ ಸ್ಪೋರ್ಟ್ಸ್‌ ಫಾರ್‌ ಗುಡ್‌’ ಪುರಸ್ಕಾರ ನೀಡಲಾಯಿತು.