ಜೇನು ಸಾಕಣೆ ಮಾಹಿತಿಗೆ ‘ಮಧು ಮಿತ್ರ’ ಆ್ಯಪ್‌

0
63

ವೈಜ್ಞಾನಿಕ ಜೇನು ಕೃಷಿ, ಜೇನು ಸಾಕಣೆದಾರರ ನಡುವೆ ಕೊಂಡಿ ಬೆಸೆಯುವ ಉದ್ದೇಶದಿಂದ ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯವು ‘ಮಧು ಮಿತ್ರ’ ಆ್ಯಪ್‌ ಸಿದ್ಧಪಡಿಸಿದೆ.

ಶಿರಸಿ: ವೈಜ್ಞಾನಿಕ ಜೇನು ಕೃಷಿ, ಜೇನು ಸಾಕಣೆದಾರರ ನಡುವೆ ಕೊಂಡಿ ಬೆಸೆಯುವ ಉದ್ದೇಶದಿಂದ ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯವು ‘ಮಧು ಮಿತ್ರ’ ಆ್ಯಪ್‌ ಸಿದ್ಧಪಡಿಸಿದೆ.

ನೂತನ ಆ್ಯಪ್‌ನಲ್ಲಿ ಪರಾಗಸ್ಪರ್ಶ ಕಾರ್ಯದಲ್ಲಿ ಜೇನು ನೊಣಗಳ ಪಾತ್ರ, ಜೇನು ಸಂಸ್ಕರಣೆ ಮತ್ತು ಪರೀಕ್ಷೆ, ಪ್ರಗತಿಪರ ಜೇನು ಕೃಷಿಕರು, ಜೇನು ಕೃಷಿ ವಿಜ್ಞಾನಿಗಳು, ಜೇನು ಕೃಷಿಕರ ಯಶೋಗಾಥೆ, ಜೇನು ಪ್ರಭೇದ, ರಕ್ಷಣಾ ವ್ಯವಸ್ಥೆ, ಜೇನು ಸಾಕಣೆ ಉಪಕರಣಗಳು, ಸ್ಥಳಾಂತರ, ಜೇನು ಕೃಷಿ ಒಳಗೊಂಡ ಸಮಗ್ರ ಮಾಹಿತಿ ಲಭ್ಯವಾಗಲಿದೆ.

ಬಾಗಲಕೋಟೆ ವಿಶ್ವವಿದ್ಯಾಲಯದ ಕೀಟ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಜೆ.ಡಿ.ಗೋಪಾಲಿ ನೇತೃತ್ವದಲ್ಲಿ ಪ್ರೊ. ವಿನಯಕುಮಾರ್, ಪ್ರೊ.ಆರ್.ರಘುನಾಥ, ಪ್ರೊ.ವೆಂಕಟೇಶ ಯು, ಪ್ರೊ. ಟಿ.ಬಿ.ಅಳ್ಳೊಳ್ಳಿ ಈ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ.

‘ಜೇನು ಕೃಷಿ ಮಾಡಲು ಆಸಕ್ತಿ ತೋರುವ ರೈತರಿಗೆ, ಮೂಲ ಮಾಹಿತಿಯ ಕೊರತೆ ಇರುವುದನ್ನು ಮನಗಂಡ ವಿಶ್ವವಿದ್ಯಾಲಯವು ಆ್ಯಪ್‌ ಮೂಲಕ ಆಸಕ್ತರನ್ನು ಒಂದೆಡೆ ಸೇರಿಸುವ ಪ್ರಯತ್ನಕ್ಕೆ ಮುಂದಾಗಿದೆ. ಗುಣಮಟ್ಟದ ಜೇನು ಪೆಟ್ಟಿಗೆ, ಜೇನು ಕುಟುಂಬ ಸಂಗ್ರಹಿಸಲು, ಜೇನುತುಪ್ಪ ಸಂಸ್ಕರಣೆ ಸಂಬಂಧ ವಿವರ ಪಡೆಯಲು ಆ್ಯಪ್‌ ಸಹಕಾರಿಯಾಗಲಿದೆ’ ಎನ್ನುತ್ತಾರೆ ಡಾ. ಗೋ‍ಪಾಲಿ.

‘ವಿಶ್ವವಿದ್ಯಾಲಯವು ಜೇನು ಉತ್ಪಾದಕರ ಸಂಘವನ್ನು ರಚಿಸಿದೆ. ಸಂಘದ ಸದಸ್ಯರು ಆ್ಯಪ್‌ನಲ್ಲಿ ಮೊಬೈಲ್ ಸಂಖ್ಯೆ ಸಹಿತ ನೋಂದಣಿ ಮಾಡಿಕೊಂಡರೆ, ಭವಿಷ್ಯದಲ್ಲಿ ಏಕ ವ್ಯವಸ್ಥೆ ಮೂಲಕ ಜೇನುತುಪ್ಪವನ್ನು ರಫ್ತು ಮಾಡಬಹುದು. ರೈತರಿಗೆ ಅನುಕೂಲವಾಗುವಂತೆ ಆಫ್‌ಲೈನ್‌ನಲ್ಲಿ ಸಹ ಈ ಆ್ಯಪ್ ಕೆಲಸ ಮಾಡುತ್ತದೆ. ಇನ್ನು ಒಂದು ತಿಂಗಳಲ್ಲಿ ‘ಮಧು ಮಿತ್ರ’ ಆ್ಯಪ್, ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗುತ್ತದೆ’ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

‘ಜೇನು ಸಾಕಣೆದಾರರ ಸಮಗ್ರ ಮಾಹಿತಿ ಕ್ರೋಡೀಕರಿಸಿ, ದಾಖಲಿಸುವ ಕಾರ್ಯ ಇನ್ನೂ ಆಗಿರಲಿಲ್ಲ. ಹೊಸ ಆ್ಯಪ್ ಅಡಿಯಲ್ಲಿ ಎಲ್ಲರನ್ನೂ ಒಂದೆಡೆ ಸೇರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇದರಿಂದ ವಾರ್ಷಿಕ ಜೇನು ಉತ್ಪಾದನೆಯ ನಿಖರ ಅಂಕಿ–ಅಂಶವೂ ಲಭ್ಯವಾಗುತ್ತದೆ. ದೇಶದ ಯಾವುದೇ ಮೂಲೆಯಲ್ಲಿರುವ ಗ್ರಾಹಕರು, ಆ್ಯಪ್‌ನಲ್ಲಿರುವ ಮೊಬೈಲ್ ಸಂಖ್ಯೆ ಮೂಲಕ ಉತ್ಪಾದಕರನ್ನು ಸಂಪರ್ಕಿಸಿ, ಶುದ್ಧ ಜೇನುತುಪ್ಪ ಖರೀದಿಸಬಹುದು’ ಎನ್ನುತ್ತಾರೆ ಪ್ರೊ. ಆರ್.ರಘುನಾಥ.

ಇತ್ತೀಚೆಗೆ ಶಿರಸಿಯಲ್ಲಿ ನಡೆದ ವಿಶ್ವ ಜೇನು ದಿನಾಚರಣೆಯಲ್ಲಿ ‘ಮಧು ಮಿತ್ರ’ ಆ್ಯಪ್‌ ಅನ್ನು ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಗಿತ್ತು.

‘ಅವೈಜ್ಞಾನಿಕ ಕೊಯ್ಲಿನಿಂದ ಜೇನು ಸಂತತಿ ನಾಶವಾಗುತ್ತಿದೆ. ಹೀಗಾಗಿ, ವೈಜ್ಞಾನಿಕ ಕೃಷಿಗೆ ಒತ್ತು ನೀಡಿ, ಆರು ತಿಂಗಳ ಅವಧಿಯಲ್ಲಿ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ.’

– ಡಾ.ಜೆ.ಡಿ.ಗೋಪಾಲಿ, ಕೀಟ ವಿಜ್ಞಾನ ವಿಭಾಗದ ಪ್ರಾಧ್ಯಾಪಕ