ಜೂನ್ 26 ರ ಅಂತರಾಷ್ಟ್ರೀಯ ಪ್ರಚಲಿತ ಘಟನೆಗಳು

0
25

ಈ ಕೆಳಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಫ್ರಾಂಕ್‌ಫರ್ಟ್‌ನಲ್ಲಿ 2ನೇ ಮಹಾಯುದ್ಧ ಕಾಲದ ಬಾಂಬ್ ಪತ್ತೆ

ಬರ್ಲಿನ್‌ (ಎಎಫ್‌ಪಿ): ಫ್ರಾಂಕ್‌ಫರ್ಟ್‌ ನಗರದಲ್ಲಿ ಎರಡನೇ ಮಹಾ ಯುದ್ಧ ಕಾಲದ ಎರಡು ಸಜೀವ ಬಾಂಬ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

ಹೆಸ್ಸೆ ರಾಜ್ಯದ ಗೀಸೆನ್ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ  250 ಕೆ.ಜಿ.ಯ ಜರ್ಮನಿ ಬಾಂಬ್‌ ಮತ್ತು 50 ಕೆ.ಜಿ.ಯ ಅಮೆರಿಕದ ಬಾಂಬ್‌ ಪತ್ತೆಯಾಗಿದೆ. ಈ ಪ್ರದೇಶದ 2,500 ಮಂದಿಯನ್ನು ಸ್ಥಳಾಂತರಿಸಿ, ಬಾಂಬ್‌ ನಿಷ್ಕ್ರಿಯಗೊಳಿಸಲಾಯಿತು.  ಅಮೆರಿಕದ ಬಾಂಬ್‌ ಅನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಲಾಗಿದೆ. ಜರ್ಮನ್‌ ಬಾಂಬ್‌ ಅನ್ನು ನಿಷ್ಕ್ರೀಯಗೊಳಿಸುವುದು ಸಾಧ್ಯವಾಗದ ಕಾರಣ ಅದನ್ನು ಸ್ಫೋಟಿಸಲಾಯಿತು. 

ಮಹಾಯುದ್ಧ ಅಂತ್ಯ ಗೊಂಡು 75 ವರ್ಷಗಳಾದರೂ, ಜರ್ಮನಿಯಲ್ಲಿ ಬಾಂಬ್‌ ಮತ್ತು ಸ್ಫೋ ಟಕಗಳು ಪತ್ತೆಯಾಗುತ್ತಲೇ ಇವೆ.  ಯುದ್ಧ ಸಂದರ್ಭದಲ್ಲಿ ಜರ್ಮನಿ ಮೇಲೆ ನಡೆಸಿದ ಬಾಂಬ್‌ ದಾಳಿಯಲ್ಲಿ ಶೇ 10ರಷ್ಟು ಸ್ಫೋಟಗೊಂಡಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಈ ತಿಂಗಳ ಆರಂಭದಲ್ಲಿ ಕಟ್ಟಡ ಕಾಮಗಾರಿ ಸಂದರ್ಭದಲ್ಲಿ 100 ಕೆ.ಜಿ.ಯ ಅಮೆರಿಕದ ಬಾಂಬ್‌ ಪತ್ತೆಯಾಗಿತ್ತು. 3 ಸಾವಿರ ಮಂದಿಯನ್ನು ಸ್ಥಳಾಂತರಿಸಿ ಅದನ್ನು ನಿಷ್ಕ್ರೀಯಗೊಳಿಸಲಾಗಿತ್ತು.

 

ಇರಾನ್ ಮೇಲೆ ಅಮೆರಿಕ ಅರ್ಥಿಕ ದಿಗ್ಬಂಧನ :ರಾಜತಾಂತ್ರಿಕ ಮಾರ್ಗ ಬಂದ್‌

ದುಬೈ(ರಾಯಿಟರ್ಸ್‌): ಅಮೆರಿಕವು ಹೊಸದಾಗಿ ಮತ್ತೆ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿರುವುದರಿಂದ ಎರಡೂ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಮಾರ್ಗವನ್ನು ಮುಚ್ಚಿದಂತಾಗಿದೆ ಎಂದು ಇರಾನ್‌ ಹೇಳಿದೆ. ಈ ಮೂಲಕ  ಶಾಂತಿಗಾಗಿ ಇದ್ದ ಏಕೈಕ ಮಾರ್ಗವನ್ನು ಅಮೆರಿಕ ಕೈಬಿಟ್ಟಂತಾಗಿದೆ ಎಂದು ಅದು ಆರೋಪಿಸಿದೆ. 

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಇರಾನ್‌ನ  ಪ್ರಮುಖ ನಾಯಕ ಅಯಾತೊಲ್ಲಹ್‌ ಅಲಿ ಖಮೇನಿ ಮತ್ತು ಇತರ ಎಂಟು ಹಿರಿಯ ಅಧಿಕಾರಿಗಳ ವಿರುದ್ಧ ದಿಗ್ಬಂಧನಗಳನ್ನು ಹೇರುವ ಆದೇಶಕ್ಕೆ ಸಹಿ ಹಾಕಿದ್ದರು. ವಿದೇಶಾಂಗ ಸಚಿವ ಮೊಹಮ್ಮದ್‌ ಜಾವೇದ್‌ ಝರಿಫ್‌ ವಿರುದ್ಧ ಈ ವಾರಾಂತ್ಯಕ್ಕೆ ದಿಗ್ಬಂಧನ ಹೇರುವ ನಿರೀಕ್ಷೆ ಇದೆ.

ಕಳೆದ ವಾರ ಅಮೆರಿಕದ ಬೇಹುಗಾರಿಕಾ ಕ್ಷಿಪಣಿಯನ್ನು ಇರಾನ್‌ ಹೊಡೆದುರುಳಿಸಿದ ಬೆನ್ನಲ್ಲೇ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ.    

‘ಇರಾನ್‌ನ ಪ್ರಮುಖ ಮುಖಂಡರು ಮತ್ತು ರಾಜತಾಂತ್ರಿಕ ಮುಖಂಡರ ಮೇಲೆ ಅನಗತ್ಯವಾಗಿ ಹಲವಾರು  ದಿಗ್ಬಂಧನಗಳನ್ನು ವಿಧಿಸುವುದರಿಂದ ರಾಜತಾಂತ್ರಿಕ ಮಾರ್ಗವನ್ನು ಶಾಶ್ವತವಾಗಿ ಮುಚ್ಚಿದಂತಾಗುತ್ತದೆ’ ಎಂದು ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ಬಾಸ್‌ ಮೌಸವಿ ಕೂಡ ಟ್ವೀಟ್‌ ಮಾಡಿದ್ದಾರೆ.

ಈಗಾಗಲೇ ಇರುವ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ವ್ಯವಸ್ಥೆಯನ್ನು ಟ್ರಂಪ್‌ ಅವರ ಹತಾಶ ಆಡಳಿತವು ಹಾಳುಗೆಡವುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಖಮೇನಿ ಅವರು ವಿದೇಶದಲ್ಲಿ ಯಾವುದೇ ಆಸ್ತಿಪಾಸ್ತಿ ಹೊಂದಿಲ್ಲ. ಆದ್ದರಿಂದ ಈ ರೀತಿಯ ದಿಗ್ಬಂಧನದಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಶ್ವೇತಭವನದ ಈ ನಿಲುವುಗಳು ’ಬುದ್ಧಿಮಾಂದ್ಯ ರೀತಿಯಲ್ಲಿ ಗೋಚರಿಸುತ್ತಿವೆ’ ಎಂದು ಇರಾನ್‌ ಅಧ್ಯಕ್ಷ ಹಸ್ಸನ್‌ ರೌಹಾನಿ ಹೇಳಿದ್ದಾರೆ.

ಇರಾನ್ ಮುಕ್ತ ಅವಕಾಶ ಬಳಸಿಕೊಳ್ಳಬೇಕು:  ಇರಾನ್‌ 2015ರ ಅಣುಒಪ್ಪಂದದ ಷರತ್ತನ್ನು ಹೊರತುಪಡಿಸಿ ಮಾತುಕತೆಗೆ ಸಿದ್ಧವಾಗಿದ್ದರೆ ದ್ವಿರಾಷ್ಟ್ರ ಮಾತುಕತೆ ಸಾಧ್ಯ ಎಂದು ಡೊನಾಲ್ಡ್‌ ಟ್ರಂಪ್‌ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್‌ ಬೋಲ್ಟನ್‌ ಮತ್ತೆ ಹೇಳಿದ್ದಾರೆ.

ಇರಾನ್‌ ತನ್ನ ಅಣ್ವಸ್ತ್ರ ಚಟುವಟಿಕೆಯಿಂದ ಹಿಂದೆ ಸರಿದರೆ, ಜಾಗತಿಕ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಿದರೆ ಮಾತುಕತೆಗೆ ಅಮೆರಿಕ ಅಧ್ಯಕ್ಷರು ಅವಕಾಶವನ್ನು ಮುಕ್ತವಾಗಿ ಇರಿಸಿದ್ದಾರೆ. ಇರಾನ್‌ ಈ ಮುಕ್ತ ಅವಕಾಶವನ್ನು ಬಳಸಿಕೊಳ್ಳಬೇಕು  ಎಂದು ಜೆರುಸಲೆಂನಲ್ಲಿ ಬೋಲ್ಟನ್‌ ಹೇಳಿದ್ದಾರೆ. ತನ್ನ ಬೇಹುಗಾರಿಕಾ ಡ್ರೋನ್‌ಅನ್ನು ಹೊಡೆದುರುಳಿಸಿದ ಆರೋಪವನ್ನು ಅಮೆರಿಕವು ಇರಾನ್‌ ಮೇಲೆ ಹೊರಿಸಿದ್ದರೆ, ಅತ್ತ ಇರಾನ್‌ ಈ ಆರೋಪವನ್ನು ತಳ್ಳಿ ಹಾಕಿದೆ.

ಶಾಂತಿ ಕಾಪಾಡಲು ಚೀನಾ ಸಲಹೆ

ಬೀಜಿಂಗ್‌ (ಎಎಫ್‌ಪಿ): ಇರಾನ್‌ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರ್ಥಿಕ ದಿಗ್ಬಂಧನ ವಿಧಿಸುವ ಮೂಲಕ ಎರಡೂ ರಾಷ್ಟ್ರಗಳ ನಡುವೆ ಹದಗೆಡುತ್ತಿರುವ ಸಂಬಂಧದ ಬಗ್ಗೆ ಚೀನಾ ಆತಂಕ ವ್ಯಕ್ತಪಡಿಸಿದ್ದು, ಶಾಂತಿ ಮತ್ತು ಸಂಯಮವನ್ನು ಪಾಲಿಸುವುದು ಒಳಿತು ಎಂದು ಅಭಿಪ್ರಾಯಪಟ್ಟಿದೆ.

ಕಣ್ಣುಮುಚ್ಚಿಕೊಂಡು ಕೇವಲ ಒತ್ತಡ ತಂತ್ರವನ್ನಷ್ಟೇ ಅನುಸರಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಈ ರೀತಿಯ ತಂತ್ರಗಳು ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ, ಪ್ರಾದೇಶಿಕ ಅಶಾಂತಿ ಸೃಷ್ಟಿಸುತ್ತವೆ  ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್‌ ಶುಆಂಗ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ರಷ್ಯಾ ಬೆಂಬಲ

ರಷ್ಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೋಲಾಯ್‌ ಪಟ್ರುಶೇ ಇರಾನ್‌ ನಡೆಯನ್ನು ಬೆಂಬಲಿಸಿದ್ದಾರೆ. ತನ್ನ ವ್ಯಾಪ್ತಿಯಲ್ಲಿದ್ದ ಡ್ರೋನ್‌ ಅನ್ನು ಅಮೆರಿಕ ಹೊಡೆದುರಳಿಸಿದೆ. ಅತ್ತ ಸಮುದ್ರದಲ್ಲಿ ಟ್ಯಾಂಕರ್‌ಗಳ ಮೇಲೆ ಇರಾನ್‌ ದಾಳಿ ಮಾಡಿದೆ ಎಂಬ ಸಾಕ್ಷಿಯು ಅತ್ಯಂತ ನಂಬಿಕೆಗೆ ಅರ್ಹವಾಗಿಲ್ಲ. ಅದನ್ನು ಆಧರಿಸಿ ಯಾವುದೇ ನಿರ್ಧಾರಕ್ಕೆ ಬರಲಾಗದು ಎಂದು ಹೇಳಿದ್ದಾರೆ.

‘ಕಾಲ ಪಕ್ವವಾಗಿಲ್ಲ’

ವಿಶ್ವಸಂಸ್ಥೆಯಲ್ಲಿ ಇರಾನ್‌ ರಾಯಭಾರಿ ಆಗಿರುವ ಮಜಿದ್‌ ತಕ್ತ್‌ ರವಂಚಿ ಅವರು ಅಮೆರಿಕ ಮತ್ತು ಇರಾನ್‌ ನಡುವೆ ಮಾತುಕತೆಗೆ ಈಗ ಕಾಲ ಪಕ್ವವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ರಹಸ್ಯ ಸಭೆ ನಡೆಸಿದ ಸಂದರ್ಭದಲ್ಲಿ ಮಜಿದ್‌ ಅವರು ಸುದ್ದಿಗಾರರೊಡನೆ ಮಾತನಾಡಿ ‘ಅಮೆರಿಕವು ಇರಾನ್‌ ಮೇಲೆ ಆರ್ಥಿಕ ಯುದ್ಧ ಸಾರುವುದನ್ನು ನಿಲ್ಲಿಸಬೇಕು’ ಬೆದರಿಕೆ ಒಡ್ಡುವರರ ಜೊತೆ ಮಾತುಕತೆ ಆರಂಭಿಸುವುದು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. 

“ಅಮೆರಿಕದ ಹಿತಾಸಕ್ತಿಗಳ ಮೇಲಿನ ದಾಳಿಯು ನಾಶ ಅಥವಾ ವಿಪರೀತ ಪ್ರತಿಕ್ರಿಯೆಗೆ ಕಾರಣವಾಗಬಹುದು. ಇರಾನ್‌ ಅಮೆರಿಕದ ಸೇನಾ ಸಾಮರ್ಥ್ಯ ಅರ್ಥ ಮಾಡಿಕೊಳ್ಳಬೇಕು.”

     – ಡೊನಾಲ್ಡ್‌ ಟ್ರಂಪ್‌ಅಮೆರಿಕ ಅಧ್ಯಕ್ಷ

 

ಶ್ರೀಲಂಕಾ : ಪೋಷಕರನ್ನು ಕಳೆದುಕೊಂಡ 176 ಮಕ್ಕಳು

ಕೊಲಂಬೊ (ಪಿಟಿಐ): ಈಸ್ಟರ್ ಭಾನುವಾರದಂದು ನಡೆದ ಸರಣಿ ಬಾಂಬ್‌ ದಾಳಿಯಲ್ಲಿ 176 ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದು ಶ್ರೀಲಂಕಾದ ಕ್ಯಾಥೋಲಿಕ್ ಚರ್ಚ್‌ ಹೇಳಿಕೆ ಆಧರಿಸಿ ಮಾಧ್ಯಮಗಳು ವರದಿ ಮಾಡಿವೆ.

ಕೆಲವು ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದರೆ, ಇನ್ನೂ ಕೆಲವರು ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಏಪ್ರಿಲ್‌ 21ರಂದು ನಡೆದ ಏಳು ಸರಣಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 258 ಮಂದಿ ಸಾವನ್ನಪ್ಪಿದ್ದರು. 500 ಜನರು ಗಾಯಗೊಂಡಿದ್ದರು.

ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸಹಾಯ ಹಾಗೂ ಅವರ ಭವಿಷ್ಯ ರೂಪಿಸಲು ಚರ್ಚ್‌ ಮುಂದಾಗಿದೆ ಎಂದು ಕಾರ್ಡಿನಲ್‌ ಮಲ್ಕಮ್‌ ರಂಜಿತ್‌ ಹೇಳಿದ್ದಾಗಿ ‘ಡೈಲಿ ಮಿರರ್‌’ ಸೋಮವಾರ ವರದಿ ಮಾಡಿದೆ.