ಜೂನ್ 23 ರ ಕ್ರೀಡಾ ವಿಭಾಗದ ಪ್ರಚಲಿತ ಘಟನೆಗಳು

0
26

ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ನೀಡಲಾಗಿದೆ

ಮಹಿಳೆಯರ ಎಫ್​ಐಎಚ್ ಸಿರೀಸ್ ಫೈನಲ್ಸ್ ಟೂರ್ನಿಯ ಫೈನಲ್​ನಲ್ಲಿ ಜಪಾನ್​ ಮಣಿಸಿದ ಭಾರತ

ಹಿರೋಶಿಮಾ: ಎಫ್​ಐಎಚ್ ಸಿರೀಸ್ ಫೈನಲ್ಸ್ ಟೂರ್ನಿಯ ಫೈನಲ್​ನಲ್ಲಿ ರಾಣಿ ರಾಂಪಾಲ್​ ನೇತೃತ್ವದ ಭಾರತ ತಂಡ ಡ್ರ್ಯಾಗ್​ ಫ್ಲಿಕ್ಕರ್​ ಗುರ್ಜಿಂತ್ ಕೌರ್ ಸಿಡಿಸಿದ ಅವಳಿ ಗೋಲಿನ ನೆರವಿನಿಂದ ಜಪಾನ್​ ವಿರುದ್ಧ 3-1 ಗೋಲುಗಳ ಅಂತರದಿಂದ ಜಯ ಗಳಿಸಿದೆ.

ಭಾರತ ತಂಡದ ಪರ 3 ನೇ ನಿಮಿಷದಲ್ಲಿ ನಾಯಕಿ ರಾಣಿ ರಾಂಪಾಲ್​ ಗೋಲು ಗಳಿಸಿ ತಂಡಕ್ಕೆ 1-0 ಮುನ್ನಡೆ ಒದಗಿಸಿದರು. ಇದಕ್ಕೆ ಪ್ರತಿಯಾಗಿ ಜಪಾನ್​ ಕನೋನ್​ ಮೋರಿ 11ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡ ಸಮಬಲ ಸಾಧಿಸಲು ನೆರವಾದರು. ದ್ವಿತೀಯಾರ್ಧದಲ್ಲಿ ಗುರ್ಜಿಂತ್​ ಕೌರ್​ 45ನೇ ಮತ್ತು 60ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

 

ಏಷ್ಯನ್ ಸ್ನೂಕರ್ ಗೆದ್ದ ಪಂಕಜ್

ದೋಹಾ: ಭಾರತದ ಅಗ್ರ ಕ್ಯೂ ಆಟಗಾರ ಪಂಕಜ್ ಆಡ್ವಾಣಿ 35ನೇ ಪುರುಷರ ಏಷ್ಯನ್ ಸ್ನೂಕರ್ ಚಾಂಪಿಯನ್​ಷಿಪ್​ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಈ ಮೂಲಕ ವೃತ್ತಿಜೀವನದಲ್ಲಿ ಕ್ಯೂ ಸ್ಪೋರ್ಟ್ಸ್ ಗ್ರಾಂಡ್ ಸ್ಲಾಂ ಸಾಧನೆ ಮಾಡಿದ್ದಾರೆ.

ಎಸಿಬಿಎಸ್​ನ ಏಷ್ಯನ್ ಸ್ನೂಕರ್ ಟೂರ್ನಿಗಳಾದ 6-ರೆಡ್ (ಶಾರ್ಟ್ ಫಾರ್ವ್ಯಾಟ್), 15-ರೆಡ್ (ಲಾಂಗ್ ಫಾರ್ವ್ಯಾಟ್) ಜತೆಗೆ ಐಬಿಎಸ್​ಎಫ್ ವಿಶ್ವ ಚಾಂಪಿಯನ್​ಷಿಪ್​ನ ಎಲ್ಲ ಫಾರ್ವ್ಯಾಟ್​ಗಳ ಪ್ರಶಸ್ತಿ ಗೆದ್ದ ಸಾಧನೆ ಪಂಕಜ್ ಅವರದಾಗಿದೆ.

ಬಿಲಿಯರ್ಡ್ಸ್​ನಲ್ಲಿ ಅವರು ಈಗಾಗಲೆ ಈ ಸಾಧನೆ ದಾಖಲಿಸಿದ್ದರು. ಬೆಂಗಳೂರಿನ ಆಟಗಾರ ಪಂಕಜ್ ಏಷ್ಯನ್ ಸ್ನೂಕರ್ ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್​ನ ಥನವತ್ ಟಿರಪೊಂಗ್​ಪೈಬೂನ್ ವಿರುದ್ಧ 6-3ರಿಂದ ಗೆಲುವು ದಾಖಲಿಸಿದರು. ಈ ಮೂಲಕ ಏಷ್ಯನ್ ಮತ್ತು ವಿಶ್ವ ಚಾಂಪಿಯನ್​ನ ಎಲ್ಲ ಫಾರ್ವ್ಯಾಟ್ ಪ್ರಶಸ್ತಿ ಗೆದ್ದ ಮೊದಲಿಗರೆನಿಸಿದರು.

 

ಕಾಮನ್‌ವೆಲ್ತ್ ಗೇಮ್ಸ್‌ ಬಹಿಷ್ಕಾರದ ಎಚ್ಚರಿಕೆ

ನವದೆಹಲಿ (ಪಿಟಿಐ): ಮುಂದಿನ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಶೂಟಿಂಗ್ ಕೈಬಿಟ್ಟಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತ ಒಲಿಂಪಿಕ್ಸ್ ಸಂಸ್ಥೆ (ಐಒಎ) ಕೂಟದಲ್ಲಿ ಪಾಲ್ಗೊಳ್ಳದೇ ಇರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ.

ಬರ್ಮಿಂಗಂನಲ್ಲಿ 2022ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಶೂಟಿಂಗ್ ಕೈಬಿಡಲು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್ ಜೂನ್ 20 ರ  ಗುರುವಾರ ರಾತ್ರಿ ನಿರ್ಧರಿಸಿತ್ತು. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡು ಮೂರು ಹೊಸ ಕ್ರೀಡೆಗಳನ್ನು ಸೇರಿಸಲು ತೀರ್ಮಾನಿಸಲಾಗಿತ್ತು.

ಕಳೆದ ವರ್ಷವೇ ಈ ಬಗ್ಗೆ ಸಂದೇಹ ಎದ್ದಿತ್ತು. ಆದ್ದರಿಂದ ಅಂದಿನ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಬ್ರಿಟನ್ ಕ್ರೀಡಾ ಸಚಿವರು ಮತ್ತು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್‌ ಪದಾಧಿಕಾರಿಗಳಿಗೆ ಪತ್ರ ಬರೆದು ಕೂಟದಿಂದ ಶೂಟಿಂಗ್ ಕೈಬಿಡಬಾರದು ಎಂದು ಕೋರಿದ್ದರು. ಆದರೆ ಫೆಡರೇಷನ್ ಈ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಕೂಟದ ಆತಿಥ್ಯ ವಹಿಸುವ ದೇಶಕ್ಕೆ ನೀಡಿತ್ತು.

ಶೂಟಿಂಗ್ ಕೈಬಿಟ್ಟರೆ ಭಾರತಕ್ಕೆ ದೊಡ್ಡ ಹೊಡೆತ ಬೀಳಲಿದೆ. ಕಳೆದ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನ ಶೂಟಿಂಗ್‌ನಲ್ಲಿ ಭಾರತ 16 ಪದಕ ಗೆದ್ದಿತ್ತು.

‘ಶೂಟಿಂಗ್ ಭಾರತ ಭರವಸೆಯ ಕ್ರೀಡೆ. ಇಲ್ಲಿನ ಅನೇಕ ಶೂಟರ್‌ಗಳಿಗೆ ಕಾಮನ್‌ವೆಲ್ತ್ ಕೂಟವು ಒಲಿಂಪಿಕ್ಸ್‌ಗೆ ಪ್ರವೇಶಿಸುವ ಹೆಬ್ಬಾಗಿಲು.

ಆದ್ದರಿಂದ ಈ ಕ್ರೀಡೆಯನ್ನು ಕೈಬಿಡುವುದು ಸರಿಯಲ್ಲ’ ಎಂದು ಭಾರತ ಒಲಿಂಪಿಕ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದರು.