ಜೂನ್ 21 ರ ಅಂತರಾಷ್ಟ್ರೀಯ ಪ್ರಚಲಿತ ಘಟನೆಗಳು

0
29

ಜೂನ್ ನಲ್ಲಿ ನಡೆದಂತಹ ಅಂತರಾಷ್ಟ್ರೀಯ ಪ್ರಚಲಿತ ಘಟನೆಗಳ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ

ಸಾಪೇಕ್ಷ ಸಿದ್ಧಾಂತದ ಹಸ್ತಪ್ರತಿ ನೊಬೆಲ್ ಸಂಗ್ರಹಾಲಯಕ್ಕೆ

ಸ್ಟಾಕ್‌ಹೋಂ (ಎಎಫ್‌ಪಿ): ಆಲ್ಬರ್ಟ್‌ ಐನ್‌ಸ್ಟೀನ್ ಮಂಡಿಸಿದ ಸಾಪೇಕ್ಷ ಸಿದ್ಧಾಂತದ ಎರಡು ಪುಟಗಳ ಹಸ್ತಪ್ರತಿಯನ್ನು ಸ್ವೀಡಿಷ್ ಉದ್ಯಮಿ ಪರ್‌ ಟಾಬ್ ಅವರು ನೊಬೆಲ್ ಸಂಗ್ರಹಾಲಯಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. 

ಕಳೆದ ವರ್ಷ ನಡೆದ ಹರಾಜಿನಲ್ಲಿ 86 ಲಕ್ಷ ನೀಡಿ ಟಾಬ್ ಅವರು ಈ ಹಸ್ತಪ್ರತಿ ಖರೀದಿಸಿದ್ದರು. ಇದನ್ನು ನೊಬೆಲ್ ಸಂಗ್ರಹಾಲಯಕ್ಕೆ ನೀಡುವುದಾಗಿ ಆಗ ಅವರು ಘೋಷಿಸಿದ್ದರು. 

ನೊಬೆಲ್‌ ಪುರಸ್ಕೃತ ಜರ್ಮನ್‌ನ ಭೌತವಿಜ್ಞಾನಿ ಮ್ಯಾಕ್ಸ್ ವಾನ್ ಲಾವಿ ಅವರು ಸಾಪೇಕ್ಷ ಸಿದ್ಧಾಂತಕ್ಕೆ ಬರೆದಿದ್ದ ಕೈಬರಹದ ಟಿಪ್ಪಣಿ ಸಹ ಇದೇ ಹಸ್ತಪ್ರತಿಯಲ್ಲಿದೆ. 1948ರವರೆಗೂ ಲಾವಿ ಅವರೇ ಈ ಹಸ್ತಪ್ರತಿ ಹೊಂದಿದ್ದರು. ಬಳಿಕ ಅದು ಖಾಸಗಿ ಸಂಗ್ರಹಕಾರರಿಗೆ ಹಸ್ತಾಂತರವಾಗಿತ್ತು. 

ದ್ಯುತಿವಿದ್ಯುತ್ ನಿಯಮ ಕುರಿತು ಮಂಡಿಸಿದ ಸಿದ್ಧಾಂತಕ್ಕಾಗಿ ಐನ್‌ಸ್ಟೀನ್ ಅವರು 1922ರ ನವೆಂಬರ್ 10ರಂದು ನೊಬೆಲ್ ಪ್ರಶಸ್ತಿ ಸ್ವೀಕರಿಸಿದ್ದರು

 

ಅಮೆರಿಕದ ಡ್ರೋನ್ ಹೊಡೆದುರುಳಿಸಿದ ಇರಾನ್‌

ಟೆಹರಾನ್‌(ಎಎಫ್‌ಪಿ): ಹೊರ್‌ಮಾಜ್ಗನ್‌ ಪ್ರಾಂತದಲ್ಲಿ ಇರಾನ್‌ ವಾಯುಪ್ರದೇಶ ಉಲ್ಲಂಘಿಸಿದ ಅಮೆರಿಕದ ಬೇಹುಗಾರ( ಸ್ಪೈ)ಡ್ರೋನ್ ಒಂದನ್ನು ಹೊಡೆದುರುಳಿಸಿರುವುದಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ ಗುರುವಾರ ಹೇಳಿಕೊಂಡಿದೆ. 

ಸಮುದ್ರದಲ್ಲಿ ವಾಯುಪ್ರದೇಶ ಉಲ್ಲಂಘಿಸಿ ಬಂದಿದ್ದ ಅಮೆರಿಕ ನಿರ್ಮಿತ ಗ್ಲೋಬಲ್‌ ಹಾಕ್‌ ಕಣ್ಗಾವಲು ಡ್ರೋನ್‌ ಅನ್ನು ಕ್ಷಿಪಣಿಯಿಂದ ಹೊಡೆದುರುಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಗಾರ್ಡ್‌ ತಿಳಿಸಿದೆ. ಇರಾನ್‌ ಸೇನೆ ಡ್ರೋನ್‌ ಚಿತ್ರವನ್ನು ಇಲ್ಲಿಯವರೆಗೂ ಪ್ರಕಟಿಸಿಲ್ಲ. 

‘ಈ ಕಾರ್ಯಾಚರಣೆ ಮೂಲಕ ತನ್ನ ಗಡಿಯನ್ನು ಇರಾನ್‌ ರಕ್ಷಿಸಿಕೊಳ್ಳಲಿದೆ ಎನ್ನುವ ಸ್ಪಷ್ಟ ಸಂದೇಶ ಇದಾಗಿದೆ’ ಎಂದು ಗಾರ್ಡ್‌ ಮುಖ್ಯಸ್ಥ ಹುಸೈನ್‌ ಸಲಾಮಿ ತಿಳಿಸಿದ್ದಾರೆ. ‘ನಾವು ಯುದ್ಧ ಬಯಸುತ್ತಿಲ್ಲ. ಆದರೆ ಯಾರಾದರೂ ಯುದ್ಧ ಘೋಷಿಸಿದರೆ ನಾವು ಸನ್ನದ್ಧರಾಗಿದ್ದೇವೆ’ ಎಂದು ಸ್ಥಳೀಯ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. 

ಗಲ್ಫ್‌ ಶಿಪ್ಪಿಂಗ್‌ ದಾಳಿ ನಂತರದಲ್ಲಿ ಎರಡೂ ದೇಶಗಳು ನಡುವೆ ವೈಷಮ್ಯ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಹಡಗುಗಳ ಮೇಲಿನ ದಾಳಿಗೆ ಇರಾನ್‌ ಕಾರಣ ಎಂದು ಅಮೆರಿಕ ದೂಷಿಸಿತ್ತು. ಕಳೆದ ವರ್ಷದ ಮೇನಲ್ಲಿ ಇರಾನ್‌ ಜೊತೆಗಿನ 2015ರ ಪರಮಾಣು ಒಪ್ಪಂದವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ರದ್ದುಗೊಳಿಸಿದ ಬಳಿಕ ಉಭಯ ದೇಶಗಳ ನಡುವಿನ ಬಾಂಧವ್ಯ ಹದಗೆಟ್ಟಿತ್ತು. ಅಮೆರಿಕದ ಬಿ–52 ಬಾಂಬರ್‌ ವಿಮಾನಗಳು, ಯುದ್ಧ ನೌಕೆಗಳು ಗಲ್ಫ್‌ ಪ್ರದೇಶದಲ್ಲಿ ನಿಯೋಜಿಸಿದ ಬಳಿಕ ಯುದ್ಧದ ಸ್ಥಿತಿ ನಿರ್ಮಾಣವಾಗಿತ್ತು.