ಜೂನ್ 20 ರ ಕ್ರೀಡಾ ವಿಭಾಗದ ಪ್ರಚಲಿತ ಘಟನೆಗಳು

0
47

ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ನೀಡಲಾಗಿದೆ

ಫೋಲ್ಕ್‌ಸ್ಯಾಮ್‌ ಗ್ರ್ಯಾನ್‌ಪ್ರಿ ಮಹಿಳೆಯರ 1500 ಮೀ. ಓಟ :ಪಿ.ಯು.ಚಿತ್ರಾಗೆ ಸ್ವರ್ಣ ಪದಕ 

ಹೊಸದಿಲ್ಲಿ : ಏಷ್ಯನ್‌ ಚಾಂಪಿಯನ್‌ ಪಿ.ಯು.ಚಿತ್ರಾ ಸ್ವೀಡನ್‌ನ ಸೊಲೊಂಟುನಾದಲ್ಲಿ ನಡೆದ ಫೋಲ್ಕ್‌ಸ್ಯಾಮ್‌ ಗ್ರ್ಯಾನ್‌ಪ್ರಿ ಮಹಿಳೆಯರ 1500 ಮೀ. ಓಟದಲ್ಲಿ ಸ್ವರ್ಣ ಪದಕ ಜಯಿಸಿದ್ದಾರೆ. ಇದು ಹಾಲಿ ಋುತುವಿನಲ್ಲಿ ಭಾರತದ ಮಧ್ಯಮ ದೂರದ ಓಟಗಾರ್ತಿಯ 2ನೇ ಶ್ರೇಷ್ಠ ಪ್ರದರ್ಶನ. 

ಕಳೆದ ಏಪ್ರಿಲ್‌ನಲ್ಲಿ ದೋಹಾದಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿತ್ರಾ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. 

24ರ ತರುಣಿ ಜೂನ್ 18 ರ ಮಂಗಳವಾರ ನಡೆದ ಸ್ಪರ್ಧೆಯಲ್ಲಿ 4 ನಿಮಿಷ 12.65 ಸೆಕೆಂಡ್‌ಗಳಲ್ಲಿ ಮೊದಲ ಸ್ಥಾನಿಯಾಗಿ ಗುರಿ ಮುಟ್ಟಿದರು. 2014ರ ಕಾಮನ್‌ವೆಲ್ತ್‌ ಗೇಮ್ಸ್‌ನ 5000 ಮೀ. ಸ್ಪರ್ಧೆಯಲ್ಲಿ ಬಂಗಾರ ಜಯಿಸಿದ್ದ ಕೀನ್ಯಾದ ಮೆರ್ಸಿ ಚೆರೊನೊ ದ್ವಿತೀಯ ಸ್ಥಾನಕ್ಕೆ ಸಮಾಧಾನ ಪಟ್ಟುಕೊಂಡರು.

ಪುರುಷರ 1500 ಮೀ. ಓಟದ ಸ್ಪರ್ಧೆಯಲ್ಲಿ ಏಷ್ಯನ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ಜಿನ್ಸನ್‌ ಜಾನ್ಸನ್‌(3:39.69 ಸೆ.) ದ್ವಿತೀಯ ಸ್ಥಾನದೊಂದಿಗೆ ರಜತ ಪದಕ ತಮ್ಮದಾಗಿಸಿಕೊಂಡಿದ್ದಾರೆ. 
 
 
ಮಹಿಳಾ ಕ್ರಿಕೆಟ್‌: ಮಾಲಿ ತಂಡ ‘ವಿಶ್ವ ದಾಖಲೆ’
 

ಕಿಗಾಲಿ: ಮಾಲಿಯ ಮಹಿಳಾ ಕ್ರಿಕೆಟ್‌ ತಂಡ, ಟಿ–20 ಪಂದ್ಯವೊಂದರಲ್ಲಿ ಮಂಗಳವಾರ ರುವಾಂಡ ವಿರುದ್ಧ ಕೇವಲ ಆರು ರನ್ನಿಗೆ ಉರುಳಿದೆ. ಇದಕ್ಕಾಗಿ ಆ ತಂಡ ಆಡಿದ್ದು 9 ಓವರ್‌! ಮಾಲಿ ತಂಡ ಅತಿ ಕಡಿಮೆ ರನ್‌ ಗಳಿಸಿದ ವಿಶ್ವದಾಖಲೆಗೆ ‘ಪಾತ್ರ’ವಾಯಿತು.

ಇನ್ನೂ ವಿಶೇಷ ಎಂದರೆ ಈ ಆರರಲ್ಲಿ ಐದು ರನ್‌ ಬಂದಿದ್ದು ಇತರೆ ರನ್‌ಗಳ ಮೂಲಕ. 2 ಬೈ, 2 ಲೆಗ್‌ಬೈ, ಒಂದು ವೈಡ್‌! ಖಾತೆ ತೆರೆದ ಏಕೈಕ ಆಟಗಾರ್ತಿ, ಮಾರಿಯಂ ಸಮಾಕೆ. ಕ್ವಿಬುಕಾ ಮಹಿಳಾ ಟಿ–20 ಟೂರ್ನಿಯ ಈ ಪಂದ್ಯದಲ್ಲಿ ರುವಾಂಡ ನಾಲ್ಕೇ ಎಸೆತಗಳಲ್ಲಿ ಜಯ ಸಾಧಿಸಿತು.

 
ನಿಷೇಧ ಭೀತಿ: ಆರ್ಚರಿ ಸಂಸ್ಥೆಗೆ ತಿಂಗಳ ಗಡುವು

ಕೋಲ್ಕತ್ತ (ಪಿಟಿಐ): ವಿಶ್ವ ಆರ್ಚರಿ ಸಂಸ್ಥೆಯು, ಭಾರತ ಅರ್ಚರಿ ಸಂಸ್ಥೆ (ಎಎಐ) ಯನ್ನು ಸದಸ್ಯ ರಾಷ್ಟ್ರಗಳ ಪಟ್ಟಿಯಿಂದ ಕಿತ್ತುಹಾಕಿದೆ. ಎಎಐ ಬಣಗಳು ಆಂತರಿಕ ಕಚ್ಚಾಟವನ್ನು ಸರಿಪಡಿಸಿಕೊಳ್ಳಬೇಕು ಇಲ್ಲವೇ ನಿಷೇಧಕ್ಕೆ ತಯಾರಾಗಬೇಕು  ಎಂದು ಅದು ಗಡುವು ನೀಡಿದೆ.

ಎಎಐ ಮೇಲೆ ನಿಷೇಧ ಹೇರುವ ಸಂಬಂಧ ಜುಲೈ 31ರವರೆಗೆ ಕಾಯುವುದಾಗಿ ವಿಶ್ವ ಆರ್ಚರಿ ಸಂಸ್ಥೆ (ಡಬ್ಲ್ಯುಐ) ಹೇಳಿದೆ. ಎಎಐಗೆ ನಡೆದ ವಿವಾದಾತ್ಮಕ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪಿಗೆ ಕಾಯುತ್ತಿರುವುದಾಗಿಯೂ ತಿಳಿಸಿದೆ.

ಸದಸ್ಯತ್ವದಿಂದ ತೆಗೆದುಹಾಕಿದರೂ, ಭಾರತೀಯ ಬಿಲ್ಗಾರರು ಈಗಾಗಲೇ ನೋಂದಾಯಿಸಿರುವ ಅಂತರರಾಷ್ಟ್ರೀಯ  ಸ್ಪರ್ಧೆಗಳಿಗೆ ರಾಷ್ಟ ಧ್ವಜದಡಿ ಪಾಲ್ಗೊಳ್ಳಲು ಅಡ್ಡಿಯಾಗುವುದಿಲ್ಲ. ಕಾನೂನುಬದ್ಧ ಪ್ರಾತಿನಿಧ್ಯ ಇಲ್ಲದಿರುವುದರಿಂದ ಭಾರತವು ವಿಶ್ವ ಆರ್ಚರಿ ಸದಸ್ಯ ರಾಷ್ಟ್ರಗಳ ಪಟ್ಟಿಯಲ್ಲಿ ಇರುವುದಿಲ್ಲ. ವಿಶ್ವ ಆರ್ಚರಿ ಸಂಸ್ಥೆಯು, ಜುಲೈ 31ರವರೆಗೆ ಎಎಐ ಬೆಳವಣಿಗೆಗಳನ್ನು ಕಾದುನೋಡಲಿದೆ. ಸುಪ್ರೀಂ ಕೋರ್ಟ್‌ ನೀಡುವ ತೀರ್ಪಿನ ಆಧಾರದ ಮೇಲೆ ತೀರ್ಮಾನಕ್ಕೆ ಬರಲಾಗುವುದು ಎಂದು ಎರಡು ಪುಟಗಳ ಪ್ರಕಟಣೆ ತಿಳಿಸಿದೆ. 
 
ನೇಮರ್‌ಗೆ ಮೂರು ಪಂದ್ಯಗಳ ನಿಷೇಧ
 

ಪ್ಯಾರಿಸ್‌: ಬ್ರೆಜಿಲ್‌ನ ಸ್ಟಾರ್‌ ಆಟಗಾರ ನೇಮರ್‌, ಮುಂದಿನ ಋತುವಿನಲ್ಲಿ ಚಾಂಪಿಯನ್ಸ್‌ ಲೀಡ್‌ನ ಮೂರು ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ಯುಎಎಫ್‌ಎ ಬುಧವಾರ ಖಚಿತಪಡಿಸಿದೆ. 

ಪ್ಯಾರಿಸ್‌ ಸೇಂಟ್‌ ಜರ್ಮೈನ್ಸ್ ಮತ್ತು ಮ್ಯಾಂಚೆಸ್ಟರ್‌ ಯುನೈಟೆಡ್‌ ನಡುವಣ ಪಂದ್ಯಕ್ಕೆ ಸಂಬಂಧಿಸಿ ರೆಫ್ರಿಯನ್ನು ಅವಮಾನಿಸಿದ್ದಕ್ಕಾಗಿ ಜಗತ್ತಿನ ಈ ಅತಿ ಶ್ರೀಮಂತ ಆಟಗಾರ ಮೇಲೆ 3 ಪಂದ್ಯಗಳ ನಿಷೇಧ ಹೇರಲಾಗಿದೆ.

ಯುಇಎಫ್‌ಎನ ಶಿಸ್ತು ಸಮಿತಿ ಏಪ್ರಿಲ್‌ನಲ್ಲಿ ನಿಷೇಧ ಹೇರಿತ್ತು. ಇದರ ವಿರುದ್ಧ ಪಿಎಸ್‌ಜಿ ಮನವಿ ಸಲ್ಲಿಸಿತ್ತು. ಆದರೆ ಅದರ ಮನವಿಯನ್ನು ತಿರಸ್ಕರಿಸಲಾಯಿತು. ಬುಧವಾರ ನಿಷೇಧವನ್ನು ಅಧಿಕೃತಗೊಳಿಸಲಾಯಿತು ಎಂದು ಯುಇಎಫ್‌ಎ ತಿಳಿಸಿದೆ. 

ಎರಡು ವರ್ಷ ಹಿಂದೆ  1,733 ಕೋಟಿ ಕೊಟ್ಟು ಪಿಎಸ್‌ಜಿ ತಂಡ ಅವರನ್ನು ಖರೀದಿಸಿತ್ತು.