ಜೂನ್ 18 ರ ಅಂತರಾಷ್ಟ್ರೀಯ ಪ್ರಚಲಿತ ಘಟನೆಗಳು

0
47

ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ನ್ಯಾಟೋಗೆ ಭಾರತ ಸೇರ್ಪಡೆ ಸಂಸತ್ತಿನಲ್ಲಿ ಮಸೂದೆ ಮಂಡನೆ

ವಾಷಿಂಗ್ಟನ್‌ (ಪಿಟಿಐ): ಭಾರತವನ್ನು ನ್ಯಾಟೋ ಒಕ್ಕೂಟಕ್ಕೆ ಸೇರಿಸಬೇಕೆಂದು ಅಮೆರಿಕ ಸಂಸತ್ತಿನಲ್ಲಿ ಇಬ್ಬರು ಹಿರಿಯ ಸಂಸದರು ಮಸೂದೆಯನ್ನು ಮಂಡಿಸಿದ್ದಾರೆ.

ಈ ಸಂಬಂಧ, ದೇಶದ ಶಸ್ತ್ರಾಸ್ತ್ರ ನಿಯಂತ್ರಣ ರಫ್ತು ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದಾರೆ. 

ಡೆಮಾಕ್ರಟಿಕ್‌ ಪಕ್ಷದ ಮಾರ್ಕ್‌ ವಾರ್ನರ್‌ ಹಾಗೂ ರಿಪಬ್ಲಿಕನ್‌ ಪಕ್ಷದ ಜಾನ್‌ ಕಾರ್ನಿನ್‌ ಸೆನೆಟ್‌ನಲ್ಲಿ ತಿದ್ದುಪಡಿ ವಿಷಯ ಪ್ರಸ್ತಾಪಿಸಿದರು. ಭಾರತವು ಅಮೆರಿಕದ ಮುಖ್ಯ ರಕ್ಷಣಾ ಪಾಲುದಾರ ಆಗಿ ಹೊರಹೊಮ್ಮಿದೆ. ಈ ತಿದ್ದುಪಡಿಯು ಉಭಯ ದೇಶಗಳ ಸಂಬಂಧವನ್ನು ಇನ್ನುಷ್ಟು ಗಟ್ಟಿಗೊಳಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಒಸಾಕದಲ್ಲಿ ಮುಂದಿನ ವಾರ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರಧ್ರಾನಿ ಮೋದಿ ಅವರೊಂದಿಗೆ ಸಭೆ ನಡೆಸುವುದಾಗಿ ಹೇಳಿದ ಮೇಲೆ ಈ ತಿದ್ದುಪಡಿಯ ಚರ್ಚೆ ಮುನ್ನೆಲೆಗೆ ಬಂದಿದೆ.

‘ಇದೊಂದು ಮಹತ್ವದ ಬೆಳವಣಿಗೆ’ ಎಂದು ಭಾರತ–ಅಮೆರಿಕ ಕಾರ್ಯತಂತ್ರ ಮತ್ತು ಸಹಭಾಗಿತ್ವ ವೇದಿಕೆಯ ಅಧ್ಯಕ್ಷ ಮುಖೇಶ್‌ ಅಘಿ ಅಭಿಪ್ರಾಯ‍ಪಟ್ಟಿದ್ದಾರೆ.
 
‘ರಕ್ಷಣಾ ಒಪ್ಪಂದವನ್ನು ವಿಸ್ತರಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ರಾಜಕೀಯ ಬೆಂಬಲದ ಸೂಚನೆ’ ಎಂದು  ಭಾರತ ಅಮೆರಿಕ ವ್ಯವಹಾರ ಕೌನ್ಸಿಲ್‌ನ ಬೆಂಜಮಿನ್‌ ಶೆವಾರ್ಟ್ಸ್‌ ಹೇಳಿದರು.

 

ಐಎಸ್‌ಐಗೆ ನೂತನ ಮುಖ್ಯಸ್ಥ

ಇಸ್ಲಾಮಾಬಾದ್ (ಪಿಟಿಐ): ಗೂಢಚರ ಸಂಸ್ಥೆ ಐಎಸ್‌ಐಗೆ ಪಾಕಿಸ್ತಾನ ಸೇನೆ ನೂತನ ಮುಖ್ಯಸ್ಥರನ್ನು ನೇಮಕ ಮಾಡಿದೆ. 

ಲೆ.ಜನರಲ್ ಫೈಜ್ ಹಮೀದ್ ಅವರನ್ನು ಐಎಸ್‌ಐ ಪ್ರಧಾನ ನಿರ್ದೇಶಕರನ್ನಾಗಿ ಮಾಡಲಾಗಿದೆ ಎಂದು ಸೇನೆಯ ಮಾಧ್ಯಮ ವಿಭಾಗ ಐಎಸ್‌ಪಿಆರ್‌ ತಿಳಿಸಿದೆ.

ಐಎಸ್‌ಐನ ಆಂತರಿಕ ರಕ್ಷಣೆ ವಿಭಾಗದ ಮುಖ್ಯಸ್ಥರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಅವರು, ಸೇನೆಯ ಮುಖ್ಯಸ್ಥ ಖಮರ್ ಬಜ್ವಾ ಅವರ ಆಪ್ತ ಎಂದು ಭಾವಿಸಲಾಗಿದೆ. 

‘ದೇಶದ ಆಂತರಿಕ ಮತ್ತು ಬಾಹ್ಯ ರಕ್ಷಣೆಯ ಸವಾಲುಗಳನ್ನು ಎದುರಿಸಲು ಹಮೀದ್ ಅವರ ಅನುಭವ ನೆರವಾಗಲಿದೆ’ ಎಂದು ಹೇಳಲಾಗುತ್ತಿದೆ.

 

‘ಮಾಧ್ಯಮದ ಸ್ವಾತಂತ್ರ್ಯ ಕಸಿಯಲು ವಿಶ್ವಸಂಸ್ಥೆ ಒಪ್ಪಂದ ದುರ್ಬಳಕೆ’

ಕೊಲಂಬೊ (ಎಎಫ್‌ಪಿ): ವಿಶ್ವಸಂಸ್ಥೆಯ ‘ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತರರಾಷ್ಟ್ರೀಯ ಒಪ್ಪಂದ’ ಕಾಯ್ದೆಯನ್ನು (ಐಸಿಸಿಪಿಆರ್) ಶ್ರೀಲಂಕಾ ಪೊಲೀಸರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಮಾಧ್ಯಮ ಕಾರ್ಯಕರ್ತರು ಆರೋಪಿಸಿದ್ದಾರೆ. 

‘ಮಾಧ್ಯಮದ ಮತ್ತು ಅಲ್ಪಸಂಖ್ಯಾತ ಮುಸ್ಲಿಮರ ಸ್ವಾತಂತ್ರ್ಯ ಕಸಿದುಕೊಳ್ಳಲು ಪೊಲೀಸರು ಈ ಒಪ್ಪಂದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮುಸ್ಲಿಂ ವಿರೋಧಿ ಗಲಭೆಗಳು ಹಾಗೂ ಬೌದ್ಧ ಧರ್ಮದ ತೀವ್ರವಾದಿಗಳ ಕುರಿತು ಲೇಖನ ಬರೆದಿದ್ದ ಪತ್ರಕರ್ತರೊಬ್ಬರನ್ನು ಬಂಧಿಸಲು ಪೊಲೀಸ್ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಈ ಒಪ್ಪಂದ ಬಳಸಿಕೊಳ್ಳಲು ಪ್ರಯತ್ನಿಸಿದೆ’ ಎಂದು ‘ಫ್ರೀ ಮೀಡಿಯಾ ಮೂವ್‌ಮೆಂಟ್‌’ ಮಾಧ್ಯಮ ಹಕ್ಕುಗಳ ಸಂಘಟನೆ ಹೇಳಿದೆ. 

‘ಐಸಿಸಿಪಿಆರ್ ಕಾಯ್ದೆ ದುರುಪಯೋಗವಾಗದಂತೆ ತಡೆಯಲು ಸಂಬಂಧಪಟ್ಟ ಎಲ್ಲರೂ ಗಮನ ವಹಿಸಬೇಕು ಎಂದು ಕೋರುತ್ತೇವೆ’ ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಂಘಟನೆ ತಿಳಿಸಿದೆ. 

ಕಳೆದ ತಿಂಗಳು ನಡೆದ ಮುಸ್ಲಿಂ ವಿರೋಧಿ ಗಲಭೆ ವೇಳೆ, ಮುಸ್ಲಿಂ ಮಹಿಳೆಯೊಬ್ಬರನ್ನು ಬಂಧಿಸಿದ್ದಕ್ಕಾಗಿ ಪೊಲೀಸರು ಸಾಕಷ್ಟು ಟೀಕೆಗೆ ಗುರಿಯಾಗಿದ್ದರು.