ಜೂನ್ 14 ರ ರಾಷ್ಟ್ರೀಯ ಪ್ರಚಲಿತ ಘಟನೆಗಳು

0
41

ಭಾರತದಲ್ಲಿ ನಡೆದಿರುವಂತಹ ಪ್ರಚಲಿತ ಘಟನೆಗಳ ಬಗ್ಗೆ ಸಂಕ್ಷಿಪ್ತವಾಗಿ ನೀಡಲಾಗಿದೆ

ಇಎಸ್‌ಐ: ಕೊಡುಗೆ ದರ ಕಡಿತ

ನವದೆಹಲಿ (ಪಿಟಿಐ): ಆರೋಗ್ಯ ವಿಮೆ ಯೋಜನೆಗಾಗಿ ಉದ್ಯೋಗಿಗಳ ರಾಜ್ಯ ವಿಮೆ ನಿಗಮಕ್ಕೆ (ಇಎಸ್‌ಐಸಿ) ಮಾಲೀಕರು ಮತ್ತು ನೌಕರರು ನೀಡುವ ಕೊಡುಗೆಯ ದರವನ್ನು ಶೇ 6.5ರಿಂದ ಶೇ 4ಕ್ಕೆ ಇಳಿಸಲಾಗಿದೆ.

ಜುಲೈ 1ರಿಂದ ಜಾರಿಗೆ ಬರಲಿದೆ. ಉದ್ಯೋಗಿಗಳ ರಾಜ್ಯ ವಿಮೆಕಾಯ್ದೆಯಡಿ, ಮಾಲೀಕರ ಕೊಡುಗೆಯನ್ನು ಶೇ 4.75ರಿಂದ ಶೇ 3.25ಕ್ಕೆ ಮತ್ತು ಉದ್ಯೋಗಿಗಳ ಕೊಡುಗೆ ಶೇ1.75ರಿಂದ ಶೇ 0.75ಕ್ಕೆ ತಗ್ಗಿಸುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ 3.6 ಕೋಟಿ ಉದ್ಯೋಗಿಗಳು ಮತ್ತು 12.85 ಲಕ್ಷ ಮಾಲೀಕರಿಗೆ  ಪ್ರಯೋಜನ ದೊರೆಯಲಿದೆ. ಉದ್ದಿಮೆ ಸಂಸ್ಥೆಗಳಿಗೆ ವರ್ಷಕ್ಕೆ  5 ಸಾವಿರ ಕೋಟಿ ಉಳಿತಾಯವಾಗಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಮಾಹಿತಿ ನೀಡಿದೆ.
 
2018-19ರ ಸಾಲಿನಲ್ಲಿ ಉದ್ಯೋಗಿಗಳು ಮತ್ತು ಮಾಲೀಕರಿಂದ ಇಎಸ್‌ಐಗೆ ಸಂದಾಯವಾದ ಆರೋಗ್ಯ ವಿಮೆಯ ಒಟ್ಟು ಮೊತ್ತ 22,279 ಕೋಟಿ ರೂ.ಗಳು. 
 
ಇತರ ಹಿಂದುಳಿದ ವರ್ಗಗಳ ಉಪವರ್ಗೀಕರಣಗೊಳಿಸುವ ಆಯೋಗದ ಅವಧಿ ವಿಸ್ತರಣೆ

ನವದೆಹಲಿ: ಇತರ ಹಿಂದುಳಿದ ವರ್ಗಗಳ ಉಪವರ್ಗೀಕರಣಗೊಳಿಸುವ ಆಯೋಗದ ಅವಧಿಯನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ವಿಸ್ತರಿಸಿದೆ.

ದೆಹಲಿ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜಿ.ರೋಹಿಣಿ ಅವರ ನೇತೃತ್ವದಲ್ಲಿ ಈ ಆಯೋಗವನ್ನು 2017ರ ಅಕ್ಟೋಬರ್‌ 2ರಂದು ರಚಿಸಲಾಗಿತ್ತು.

’ಜುಲೈ 31ರವರೆಗೆ ಆಯೋಗದ ಅವಧಿಯನ್ನು ವಿಸ್ತರಿಸಲಾಗಿದೆ. ಮೇ 31ಕ್ಕೆ ಆಯೋಗದ ಅವಧಿ ಮುಕ್ತಾಯವಾಗಬೇಕಾಗಿತ್ತು. ಇದೀಗ ಆರನೇ ಬಾರಿ ಅವಧಿ ವಿಸ್ತರಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಪಟ್ಟಿಯಲ್ಲಿರುವ ಹಿಂದುಳಿದ ವರ್ಗಗಳನ್ನು ಉಪವರ್ಗೀಕರಣಗೊಳಿಸುವ ಕಾರ್ಯವನ್ನು ಆಯೋಗವು ಕೈಗೊಂಡಿದೆ.  ವರ್ಗೀಕರಣಗೊಳಿಸುವುದರಿಂದ  ಮೀಸಲಾತಿಯಲ್ಲೇ ಒಳಮೀಸಲಾತಿ ಕಲ್ಪಿಸುವ ಪ್ರಸ್ತಾವನೆ ಮಂಡಿಸಬಹುದು. ಇದು ರಾಷ್ಟ್ರ ರಾಜಕೀಯದ ಮೇಲೆ ವ್ಯಾಪಕ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗಿದೆ.