ಜೂನ್ 14 ರ ಅಂತರಾಷ್ಟ್ರೀಯ ಪ್ರಚಲಿತ ಘಟನೆಗಳು

0
18

ಜೂನ್ ತಿಂಗಳಲ್ಲಿ ನಡೆದಂತಹ ಅಂತರಾಷ್ಟ್ರೀಯ ಪ್ರಚಲಿತ ಘಟನೆಗಳ ಬಗ್ಗೆ ಸಂಕ್ಷಿಪ್ತವಾಗಿ ನೀಡಲಾಗಿದೆ.

‘ಜಿನ್‌ಪಿಂಗ್‌ ಜತೆಗಿನ ಮಾತುಕತೆ ಫಲಪ್ರದ’

ಬಿಷ್ಕೆಕ್‌ (ಪಿಟಿಐ): ‘ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ಸುಧಾರಣೆಗೆ ಜತೆಗೂಡಿ ಕೆಲಸ ಮಾಡುವ ಬಗ್ಗೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಜತೆಗೆ ನಡೆದ ಮಾತುಕತೆ ಫಲಪ್ರದವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಿರ್ಗಿಸ್ತಾನ ರಾಜಧಾನಿ ಬಿಷ್ಕೆಕ್‌ನಲ್ಲಿ ಜೂನ್ 13 ರ ಗುರುವಾರ ಆರಂಭವಾದ ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಶೃಂಗಸಭೆಯ ಸಂದರ್ಭದಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದರು.

ಮೋದಿ ಅವರು ಪ್ರಧಾನಿಯಾಗಿ ಮರು ಆಯ್ಕೆಯಾದ ನಂತರ ಮೊದಲ ಬಾರಿಗೆ ಉಭಯ ನಾಯಕರ ನಡುವೆ ಮಾತುಕತೆ ನಡೆದಿದೆ. ಪಾಕಿಸ್ತಾನ ಮೂಲದ ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಕಪ್ಪುಪಟ್ಟಿಗೆ ಸೇರಿಸ
ಬೇಕು ಎಂದು ಭಾರತ ವಿಶ್ವಸಂಸ್ಥೆಗೆ ಸಲ್ಲಿಸಿದ್ದ ಪ್ರಸ್ತಾವಕ್ಕೆ, ‘ತಾಂತ್ರಿಕ’ ಕಾರಣವೊಡ್ಡಿ ತಾನು ನೀಡಿದ್ದ ತಡೆಯನ್ನು ಚೀನಾ ಹಿಂತೆಗೆದುಕೊಂಡ ನಂತರ ನಡೆದ ಈ ಮಾತುಕತೆ ಮಹತ್ವ ಪಡೆದಿದೆ.

‘ಭಾರತ–ಚೀನಾ ಸಂಬಂಧಗಳ ಸುಧಾರಣೆಯನ್ನು ನಮ್ಮ ಮಾತುಕತೆ ಒಳಗೊಂಡಿತ್ತು. ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಸುಧಾರಿಸಲು ನಾವು ಒಟ್ಟಾಗಿ ಕೆಲಸ ಮಾಡಲಿದ್ದೇವೆ. ಮಾತುಕತೆ ಫಲಪ್ರದವಾಗಿದೆ‘ ಎಂದು ನಿಯೋಗ ಮಟ್ಟದ ಮಾತುಕತೆ ನಂತರ ಮೋದಿ ಟ್ವೀಟ್‌ ಮಾಡಿದ್ದಾರೆ.

ಕಳೆದ ವರ್ಷ ವುಹಾನ್‌ನಲ್ಲಿ ನಡೆದ ಶೃಂಗಸಭೆ ಯಶಸ್ವಿಯಾಗಿತ್ತು. ಆ ಸಭೆಯ ನಂತರ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಂಡಿದೆ ಎಂದು ಮಾತುಕತೆ ಸಂದರ್ಭದಲ್ಲಿ 
ಪ್ರಸ್ತಾಪವಾಯಿತು.

 ಈ ವರ್ಷದಲ್ಲಿ ಷಿ ಜಿನ್‌ಪಿಂಗ್‌ ಅವರು ಭಾರತಕ್ಕೆ ಭೇಟಿ ನೀಡಲಿದ್ದು, ಸಭೆಯಲ್ಲಿ ಈ ಕುರಿತು ಸಹ ಚರ್ಚೆ ನಡೆಯಿತು. ಭಾರತದ ಆಹ್ವಾನಕ್ಕೆ ಅವರು ಸಮ್ಮತಿ ವ್ಯಕ್ತಪಡಿಸಿದ್ದಾರೆ.

‘ಉಗ್ರರ ಮಟ್ಟಹಾಕಲಿ’: ‘ಪಾಕಿಸ್ತಾನ ಭಾರತದೊಂದಿಗೆ ಮಾತುಕತೆ ನಡೆಸಬೇಕು ಎಂದಾದರೆ ಮೊದಲು ತನ್ನ ನೆಲದಲ್ಲಿ ನಡೆಯುತ್ತಿರುವ ಉಗ್ರರ ಚಟುವಟಿಕೆಗಳಿಗೆ ಅದು ಕಡಿವಾಣ ಹಾಕಬೇಕು’ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು.

ಅಮೆರಿಕಕ್ಕೆ ಅಸಾಂಜ್‌ ಗಡೀಪಾರು ಆದೇಶಕ್ಕೆ ಗೃಹ ಕಾರ್ಯದರ್ಶಿ ಸಹಿ

ಲಂಡನ್‌ (ಪಿಟಿಐ): ವಿಕಿಲೀಕ್ಸ್‌ನ ಸಹ ಸಂಸ್ಥಾಪಕ ಜೂಲಿಯನ್‌ ಅಸಾಂಜ್‌ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸುವ ಆದೇಶಕ್ಕೆ ಬ್ರಿಟನ್‌ ಗೃಹ ಕಾರ್ಯದರ್ಶಿ ಸಾಜಿದ್‌ ಜಾವಿದ್‌ ಸಹಿ ಹಾಕಿದ್ದಾರೆ.

ಅಸಾಂಜ್‌ ಅಮೆರಿಕಕ್ಕೆ ಸಂಬಂಧಿಸಿದ ಅನೇಕ ರಹಸ್ಯ ವಿಷಯಗಳನ್ನು ವಿಕಿಲೀಕ್ಸ್‌ ಮೂಲಕ ಸೋರಿಕೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ ಆತನ ಗಡಿಪಾರಿಗೆ ಅಮೆರಿಕ ಕೋರಿಕೆ ಸಲ್ಲಿಸುವುದರ ಜತೆಗೆ ಕಾನೂನು ಹೋರಾಟ ಸಹ ನಡೆಸಿತ್ತು.

‘ಅಸಾಂಜ್‌ನನ್ನು ಬಂಧಿಸಲಾಗಿದೆ. ಈತನನ್ನು ತಮಗೆ ಹಸ್ತಾಂತರಿಸುವಂತೆ ಅಮೆರಿಕ ಮನವಿ ಮಾಡಿದ್ದು, ಶುಕ್ರವಾರ (ಜೂನ್‌ 14) ಕೋರ್ಟ್‌ನಲ್ಲಿ ಇದರ ವಿಚಾರಣೆ ನಡೆಯಲಿದೆ. ಆದರೆ, ಬುಧವಾರವೇ ನಾನು ಹಸ್ತಾಂತರ ಆದೇಶಕ್ಕೆ ಸಹಿ ಮಾಡಿದ್ದೇನೆ. ಕೋರ್ಟ್‌ ಎದುರು ಈ ಆದೇಶದ ಪ್ರಸ್ತಾಪವೂ ಬರಲಿದೆ’ ಎಂದು ಜಾವಿದ್‌ ಹೇಳಿದ್ದಾರೆ.

‘ಅಸಾಂಜ್‌ ಗಡಿಪಾರು ಕುರಿತು ಕೋರ್ಟ್‌ ನಿರ್ಧಾರವೇ ಅಂತಿಮ. ಆದರೆ, ಗೃಹ ಕಾರ್ಯದರ್ಶಿಯಾಗಿ ನನ್ನ ಕೆಲಸ ಮಾಡಿದ್ದೇನೆ’ ಎಂದು ಅವರು ಹೇಳಿದ್ದಾರೆ.