ಜೂನ್ 13 ರ ಪ್ರಚಲಿತ ಘಟನೆಗಳು

0
37

ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಡೆದ ಪ್ರಚಲಿತ ಘಟನೆಗಳ ಬಗ್ಗೆ ಸಂಕ್ಷಿಪ್ತವಾಗಿ ಈ ಕೆಳಗೆ ವಿವರಿಸಲಾಗಿದೆ

ಬ್ಯಾಂಕ್‌ ವಂಚನೆ 2.05 ಲಕ್ಷ ಕೋಟಿ

ನವದೆಹಲಿ (ಪಿಟಿಐ): ಕಳೆದ 11 ಹಣಕಾಸು ವರ್ಷಗಳಲ್ಲಿ ದೇಶಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ 2.05 ಲಕ್ಷ ಕೋಟಿ ಮೌಲ್ಯದ   ವಂಚನೆ ನಡೆದಿದೆ.

ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳಲ್ಲಿ ಅತಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಿದ ಪ್ರಶ್ನೆಗೆ ಮಾಹಿತಿ ನೀಡಿದೆ.

2008–09 ರಿಂದ 2018–19ರ ಅವಧಿಯಲ್ಲಿ ಒಟ್ಟಾರೆ 53,334 ವಂಚನೆ ಪ್ರಕರಣಗಳು ವರದಿಯಾಗಿವೆ.
 
ವಂಚನೆ ಪ್ರಕರಣಗಳ ನಡೆದ ಬ್ಯಾಂಕ್‌ಗಳ ಪಟ್ಟಿಯಲ್ಲಿ ಸಿಂಡಿಕೇಟ್‌ ಬ್ಯಾಂಕ್‌, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ, ಐಡಿಬಿಐ ಬ್ಯಾಂಕ್‌, ಸ್ಟ್ಯಾಂಡರ್ಡ್‌ ಚಾರ್ಟರ್ಡ್‌ ಬ್ಯಾಂಕ್, ಕೆನರಾ ಬ್ಯಾಂಕ್, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕೋಟಕ್‌ ಮಹೀಂದ್ರಾ, ಇಂಡಿಯನ್‌ ಓವರ್‌ಸಿಸ್‌ ಬ್ಯಾಂಕ್‌, ಓರಿಯಂಟಲ್‌ ಬ್ಯಾಂಕ್ ಆಫ್‌ ಕಾಮರ್ಸ್‌ ಸಹ ಸೇರಿವೆ. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ವಿದೇಶಿ ಬ್ಯಾಂಕ್‌ಗಳಲ್ಲಿಯೂ ವಂಚನೆಗಳು ನಡೆದಿವೆ ಎಂದು ಆರ್‌ಬಿಐ ವರದಿಯಲ್ಲಿ ಇದೆ.

 

ತಿಂಗಳಾಂತ್ಯಕ್ಕೆ ಜಲನ್ ಸಮಿತಿ ವರದಿ ಸಲ್ಲಿಕೆ

ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್‌ ಬ್ಯಾಂಕ್‌ನ ಬಂಡವಾಳ ಮೀಸಲು ಪ್ರಮಾಣ ನಿಗದಿಪಡಿಸಲು ರಚಿಸಲಾಗಿರುವ ಬಿಮಲ್‌ ಜಲನ್‌ ಸಮಿತಿಯು ಈ ತಿಂಗಳಾಂತ್ಯಕ್ಕೆ ವರದಿ ಸಲ್ಲಿಸಲಿದೆ.

ವರದಿ ಅಂತಿಮಗೊಳಿಸುವ ಮೊದಲು ಸಮಿತಿಯು ಮತ್ತೊಮ್ಮೆ ಸಭೆ ಸೇರಲಿದೆ. ಸದಸ್ಯರಲ್ಲಿ ಭಿನ್ನಾಭಿಪ್ರಾಯ ತಲೆದೋರಿರಬಹುದು. ಚರ್ಚೆ ಮೂಲಕ ಬಗೆಹರಿಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

6 ಮಂದಿ ಸದಸ್ಯರ ಈ ಸಮಿತಿಯನ್ನು ಆರ್‌ಬಿಐನ ಮಾಜಿ ಗವರ್ನರ್‌ ಬಿಮಲ್‌ ಜಲನ್‌ ನೇತೃತ್ವದಲ್ಲಿ 2018ರ ಡಿಸೆಂಬರ್‌ನಲ್ಲಿ ರಚಿಸಲಾಗಿದೆ.

ಆರ್‌ಬಿಐ ತನ್ನ ಬಂಡವಾಳ ಮೀಸಲು ಪ್ರಮಾಣವನ್ನು ಜಾಗತಿಕವಾಗಿ ಬಳಕೆಯಲ್ಲಿ ಇರುವ ನಿಯಮಗಳ ಅನ್ವಯ ನಿಗದಿಪಡಿಸಬೇಕು. ಹೆಚ್ಚುವರಿ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಬೇಕು ಎನ್ನುವುದು ಹಣಕಾಸು ಸಚಿವಾಲಯದ  ನಿಲುವಾಗಿದೆ. ಆರ್‌ಬಿಐ ಬಳಿ 9.6 ಲಕ್ಷ ಕೋಟಿ ಹೆಚ್ಚುವರಿ ಬಂಡವಾಳ ಇದೆ.