ಜುಲೈ16 ರ ಕ್ರೀಡಾ ವಿಭಾಗದ ಪ್ರಚಲಿತ ಘಟನೆಗಳು

0
28

ಈ ಕೆಳಗೆ ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ನೀಡಲಾಗಿದೆ

ಭಾರತದಲ್ಲಿ ವಿಶ್ವಕಪ್ ಶೂಟಿಂಗ್‌

ನವದೆಹಲಿ (‍ಪಿಟಿಐ): ಅಂತರರಾಷ್ಟ್ರೀಯ ಶೂಟಿಂಗ್ ಕ್ರೀಡಾ ಫೆಡರೇಷನ್ ಆಯೋಜಿಸುವ ಶೂಟಿಂಗ್ ವಿಶ್ವಕಪ್‌ನ ಮುಂದಿನ ಆವೃತ್ತಿಗೆ ಭಾರತ ಆತಿಥ್ಯ ವಹಿಸಲಿದೆ. ಮಾರ್ಚ್‌ 15ರಿಂದ 26ರ ವರೆಗೆ ರಾಷ್ಟ್ರ ರಾಜಧಾನಿಯಲ್ಲಿ ಸ್ಪರ್ಧೆಗಳು ನಡೆಯಲಿವೆ.

ಜುಲೈ 15 ರ ಸೋಮವಾರ ನಡೆದ ಫೆಡರೇಷನ್‌ನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ರೈಫಲ್, ಪಿಸ್ತೂಲ್ ಮತ್ತು ಶಾಟ್‌ಗನ್‌ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ಟೋಕಿಯೊ ಒಲಿಂಪಿಕ್ಸ್‌ಗೆ ಆಯ್ಕೆಯಾದ ಶೂಟರ್‌ಗಳಿಗೆ ಅಭ್ಯಾಸ ಮಾಡಲು ವಿಶ್ವಕಪ್‌ ಉತ್ತಮ ಅವಕಾಶ ಒದಗಿಸಲಿದೆ. ಕಳೆದ ವರ್ಷ ವಿಶ್ವಕಪ್ ಫೈನಲ್ಸ್‌ಗೆ ಭಾರತ ಆತಿಥ್ಯ ವಹಿಸಿತ್ತು. ಈ ವರ್ಷದ ಫೆಬ್ರುವರಿಯಲ್ಲಿ ವಿಶ್ವಕಪ್‌ ಸ್ಪರ್ಧೆಗಳು ಇಲ್ಲೇ ನಡೆದಿದ್ದವು.

 

ಜಮೈಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಅಂಧರ ತಂಡ

ಬೆಂಗಳೂರು: ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ಅಂಧರ ಕ್ರಿಕೆಟ್ ತಂಡವು ಸೀಮಿತ ಓವರ್‌ಗಳ ಸರಣಿ ಆಡಲು ಜಮೈಕಾಗೆ ತೆರಳಲಿದೆ. ಹಾಲಿ ವಿಶ್ವ ಚಾಂಪಿಯನ್‌ ಭಾರತ ತಂಡ, ಜಮೈಕಾ ತಂಡದ ವಿರುದ್ಧ ಮೂರು ಏಕದಿನ ‍ಹಾಗೂ ಎರಡು ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ.

ಜುಲೈ 20ರಂದು ಮೊದಲ ಏಕದಿನ ಪಂದ್ಯ ನಿಗದಿಯಾಗಿದೆ. ಮರುದಿನ ಎರಡನೇ ಪಂದ್ಯ ನಡೆಯಲಿದೆ. ಜುಲೈ 24 ರಂದು ಮೊದಲ ಟ್ವೆಂಟಿ–20 ಪಂದ್ಯ ಹಾಗೂ ಮೂರನೇ ಏಕದಿನ ಪಂದ್ಯ ಜುಲೈ 25ರಂದು ನಡೆಯಲಿದೆ. 27 ರಂದು ಎರಡನೇ ಹಾಗೂ ಕೊನೆಯ ಟ್ವೆಂಟಿ–20 ಪಂದ್ಯ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಂಡ ಇಂತಿದೆ:
ಬಿ1 ವರ್ಗ: ಅಮೋಲ್‌ ಕರ್ಚೆ, ಮೊಹಮದ್‌ ಜಾಫರ್‌ ಇಕ್ಬಾಲ್‌, ಬಸಪ್ಪ ವಡ್ಡಗೋಳ, ಸೋನು ಗೋಲ್ಕರ್‌ ಮತ್ತು ಚಂದ್ರಶೇಖರ್ ಕೆ.ಎನ್‌.
ಬಿ2 ವರ್ಗ: ಅಜಯ್‌ ಕುಮಾರ್‌ ರೆಡ್ಡಿ (ನಾಯಕ), ಡಿ ವೆಂಕಟೇಶ್‌ ಮತ್ತು ಸುರ್ಜಿತ್‌ ಗಾರಾ.
ಬಿ3 ವರ್ಗ: ಸುನೀಲ್‌ ರಮೇಶ್‌, ದುರ್ಗಾ ರಾವ್‌, ಪಂಕಜ್‌ ಭುವೆ ಮತ್ತು ದೀಪಕ್‌ ಮಲಿಕ್‌.

 

ಭಾರತದ ಬಾಕ್ಸರ್‌ಗಳ ಸಾಧನೆ

ನವದೆಹಲಿ (ಪಿಟಿಐ): ಭಾರತದ ಯುವ ಬಾಕ್ಸರ್‌ಗಳು ಸರ್ಬಿಯಾದಲ್ಲಿ ನಡೆಯುತ್ತಿರುವ ಗೋಲ್ಡನ್ ಗ್ಲೋವ್‌ ಆಫ್‌ ವೊವೊಡಿನಾ ಅಂತರರಾಷ್ಟ್ರೀಯ ಬಾಕ್ಸಿಂಗ್‌ ಟೂರ್ನಿಯಲ್ಲಿ ಅಮೋಘ ಸಾಧನೆ ಮುಂದುವರಿಸಿದ್ದಾರೆ. ಭಾನು ವಾರ ನಾಲ್ಕು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದುಕೊಂಡರು.

49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸೆಲಾಯ್ ಸಾಯ್, 56 ಕೆಜಿ ವಿಭಾಗದಲ್ಲಿ ಕಣಕ್ಕೆ ಇಳಿದ ಬಿಲಾಟ್ಸನ್ ಎಲ್.ಸಿಂಗ್, 60 ಕೆಜಿ ವಿಭಾಗದಲ್ಲಿ ಆಡಿದ ಅಜಯ್ ಕುಮಾರ್ ಮತ್ತು 69 ಕೆಜಿಯ ಸ್ಪರ್ಧಿ ವಿಜಯ್‌ದೀಪ್ ಬೆಳ್ಳಿ ಪದಕಕ್ಕೆ ಮುತ್ತನ್ನಿತ್ತರು.

ಅಂತಿಮ ಹಣಾಹಣಿಯಲ್ಲಿ ಸೆಲಾಯ್‌ ಸಾಯ್‌ 0–5 ಪಾಯಿಂಟ್‌ ಗಳಿಂದ ಒಮರ್‌ ಅಮೆಟೊವಿಚ್‌ ಎದುರು ಸೋತರು. ಬಿಲಾಟ್ಸನ್ ಸಿಂಗ್ ರಷ್ಯಾದ ಬೋರಿಸ್ ಕರಿಬಿಯನ್‌ಗೆ ಮಣಿದರು. ಈ ಬೌಟ್ ಕೂಡ ಏಕಪಕ್ಷೀಯವಾಗಿತ್ತು. ಅಜಯ್ ಕುಮಾರ್ ಕೂಡ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು. ಡೀಗೊ ಮಾಮಿಕ್ ಎದುರು ಅವರು 0–5ರಿಂದ ಸೋತರು.

ಹೋರಾಡಿದ ವಿಜಯ್‌: ವಿಜಯ್‌ ದೀಪ್ ಚಿನ್ನದ ಪದಕವನ್ನು ಸುಲಭವಾಗಿ ಕೈಚೆಲ್ಲಲಿಲ್ಲ. ಕಜಕಸ್ತಾನದ ಅಜಾಮತ್ ಬೆಕ್ಟಾಸ್‌ ಎದುರಿನ ಬೌಟ್‌ನಲ್ಲಿ ಅವರು 2–3ರಲ್ಲಿ ಸೋತರು. 91 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಹರ್ಷ ಗಿಲ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
 
 
ವಿಜೇಂದರ್ ಸಿಂಗ್‌ ಗೆಲುವಿನ ‘ಪಂಚ್‌’

ನ್ಯೂವಾರ್ಕ್‌, ಅಮೆರಿಕ (ಪಿಟಿಐ): ವೃತ್ತಿಪರ ಬಾಕ್ಸಿಂಗ್‌ನಲ್ಲಿ ಅಮೋಘ ಓಟ ಮುಂದುವರಿಸಿರುವ ಭಾರತದ ವಿಜೇಂದರ್ ಸಿಂಗ್ ಅಮೆರಿಕ ಸರ್ಕೀಟ್‌ನಲ್ಲಿ ಪದಾರ್ಪಣೆಯನ್ನು ಸ್ಮರಣೀಯವಾಗಿಸಿದ್ದಾರೆ. ಜುಲೈ 13 ರ ಶನಿವಾರ ತಡರಾತ್ರಿ ನಡೆದ ಟೂರ್‌ನ ಚೊಚ್ಚಲ ಬೌಟ್‌ನಲ್ಲಿ ಅನುಭವಿ ಮೈಕ್ ಸ್ನೈಡರ್ ಅವರ ವಿರುದ್ಧ ವಿಜೇಂದರ್ ಗೆಲುವು ಸಾಧಿಸಿದರು.

ಸೂಪರ್‌ ಮಿಡಲ್‌ವೇಟ್‌ ವಿಭಾಗದ ಈ ಸ್ಪರ್ಧೆಯಲ್ಲಿ ಎಂಟು ಸುತ್ತುಗಳಿದ್ದವು. ಹರಿಯಾಣದ, 33 ವರ್ಷದ ವಿಜೇಂದರ್ ನಾಲ್ಕು ಸುತ್ತುಗಳಲ್ಲಿ ಮೇಲುಗೈ ಸಾಧಿಸಿ ಸತತ 11ನೇ ಜಯವನ್ನು ತಮ್ಮದಾಗಿಸಿಕೊಂಡರು.

ನಾಲ್ಕನೇ ಸುತ್ತಿನ ಎರಡನೇ ನಿಮಿಷದಲ್ಲಿ ವಿಜೇಂದರ್‌ ಪ್ರಬಲ ಪಂಚ್ ಪ್ರಯೋಗಿಸಿದರು. ಇದರಿಂದ ಕಂಗೆಟ್ಟ ಮೈಕ್ ಸ್ನೈಡರ್ ರಿಂಗ್‌ನಲ್ಲೇ ಕುಸಿದರು.