ಜುಲೈ14 ರ ಕ್ರೀಡಾ ವಿಭಾಗದ ಪ್ರಚಲಿತ ಘಟನೆಗಳು

0
70

ಈ ಕೆಳಗೆ ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ನೀಡಲಾಗಿದೆ

ಫಿಫಾ ರ‍್ಯಾಂಕಿಂಗ್:  ಭಾರತ ಮಹಿಳಾ ಫುಟ್ಬಾಲ್‌ ತಂಡಕ್ಕೆ  57ನೇ ಸ್ಥಾನ 

ಹೊಸದಿಲ್ಲಿ: ಕಳೆದ ಕೆಲವು ತಿಂಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಪರಿಣಾಮ ಭಾರತ ಮಹಿಳಾ ಫುಟ್ಬಾಲ್‌ ತಂಡ ಫಿಫಾ ಬಿಡುಗಡೆ ಮಾಡಿದ ನೂತನ ರ‍್ಯಾಂಕಿಂಗ್ ನಲ್ಲಿ 6 ಸ್ಥಾನ ಬಡ್ತಿಯೊಂದಿಗೆ 57ನೇ ಸ್ಥಾನಕ್ಕೇರಿದೆ. 

ಏಷ್ಯಾ ದೇಶಗಳ ಪೈಕಿ ಭಾರತ 11ನೇ ರ‍್ಯಾಂಕ್ ಹೊಂದಿದೆ. ಕಳೆದ ಮಾರ್ಚ್‌ನಲ್ಲಿ ಬಿಡುಗಡೆಯಾಗಿದ್ದ ರ‍್ಯಾಂಕಿಂಗ್ ನಲ್ಲಿ 1392 ಅಂಕಗಳನ್ನು ಹೊಂದಿದ್ದ ಟೀಮ್‌ ಇಂಡಿಯಾ, ಈಗ 1422 ಅಂಕ ಕಲೆಹಾಕಿದೆ. ಕಳೆದ ಜನವರಿಯಿಂದ 18 ಪಂದ್ಯಗಳನ್ನಾಡಿರುವ ಮಹಿಳಾ ತಂಡ 12 ಪಂದ್ಯಗಳಲ್ಲಿ ಜಯ ಗಳಿಸಿದೆ. ಉಳಿದ ಆರು ಪಂದ್ಯಗಳ ಪೈಕಿ ಒಂದರಲ್ಲಿ ಡ್ರಾ ಮಾಡಿಕೊಂಡು, ಐದರಲ್ಲಿ ಸೋತಿದೆ. 

 

ಶೂಟಿಂಗ್‌: ಭಾರತಕ್ಕೆ ಎರಡು ಸ್ವರ್ಣ

ಹೊಸದಿಲ್ಲಿ : ಜರ್ಮನಿಯ ಸುಹ್ಲ್‌ನಲ್ಲಿ ಜುಲೈ 13 ರ ಶನಿವಾರ ಆರಂಭಗೊಂಡ ಜೂನಿಯರ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತ ಎರಡು ಸ್ವರ್ಣ ಸೇರಿ 5 ಪದಕ ಗೆಲ್ಲುವುದರೊಂದಿಗೆ ಫಲಪ್ರದ ಅಭಿಯಾನ ಶುರುವಿಟ್ಟುಕೊಂಡಿದೆ. 

ಇಲ್ಲಿನ ಇಂಟರ್‌ನ್ಯಾಷನಲ್‌ ಶೂಟಿಂಗ್‌ ಸ್ಪೋರ್ಟ್‌ ಫೆಡರೇಷನ್‌ನಲ್ಲಿ ಮೊದಲ ದಿನ ನಡೆದ ಜೂನಿಯರ್‌ ಪುರುಷರ 25 ಮೀ. ಸ್ಟ್ಯಾಂಡರ್ಡ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಉಧಯ್‌ವೀರ್‌ 575 ಅಂಕ ಕಲೆಹಾಕಿ ಸ್ವರ್ಣ ಪದಕ ಜಯಿಸಿದ್ದಾರೆ. ಆದರ್ಶ್‌ ಸಿಂಗ್‌ (568 ಅಂಕ) ಮತ್ತು ಅನಿಶ್‌ ಭನ್ವಾಲಾ (566 ಅಂಕ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಸಾಧನೆ ಮಾಡಿದ್ದಾರೆ. 

ಇದೇ ಸ್ಪರ್ಧೆಯ ತಂಡ ವಿಭಾಗದಲ್ಲಿ ಆದರ್ಶ್‌ ಮತ್ತು ಸಹೋದರ ವಿಜಯ್‌ವೀರ್‌ ಸಿಧು ಜತೆ ಉಧಯ್‌ವೀರ್‌ 1707 ಅಂಕ ಸಂಪಾದಿಸಿ ಜೂನಿಯರ್‌ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಉಧಯ್‌ವೀರ್‌ ಎರಡು ಬಂಗಾರದ ಪದಕಗಳಿಗೆ ಕೊರಳೊಡ್ಡಿದ್ದಾರೆ. ಅನಿಶ್‌, ರಾಜ್‌ಕನ್ವಾರ್‌ ಸಂಧು ಮತ್ತು ದಿಲ್ಶಾನ್‌ ಕೆಲಿ ಒಳಗೊಂಡ ಭಾರತ ತಂಡ, 1676 ಅಂಕ ಗಳಿಸಿ ಎರಡನೇ ಸ್ಥಾನಿಯಾಗಿ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದೆ. ದಿನದಂತ್ಯಕ್ಕೆ ಭಾರತ ತಲಾ ಎರಡು ಚಿನ್ನ, ಬೆಳ್ಳಿ ಮತ್ತು ಒಂದು ಕಂಚಿನೊಂದಿಗೆ ಒಟ್ಟು ಐದು ಪದಕ ಗೆದ್ದು ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 

 

ಅಮೆರಿಕ ತಂಡಕ್ಕೆ ಮೋರೆ ಕೋಚ್

ನವದೆಹಲಿ (ಪಿಟಿಐ): ಭಾರತದ ಹಿರಿಯ ಕ್ರಿಕೆಟಿಗ ಕಿರಣ ಮೋರೆ ಅವರು ಅಮೆರಿಕ ಕ್ರಿಕೆಟ್ ತಂಡಕ್ಕೆ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಹೋದ ತಿಂಗಳು ಅವರು ಅಮೆರಿಕ ಕ್ರಿಕೆಟ್ ತಂಡಕ್ಕೆ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಇದೀಗ ಅವರು ಕೋಚ್ ಆಗಿ ಹೆಚ್ಚುವರಿ ಹೊಣೆಯನ್ನು ನಿಭಾಯಿಸಲಿದ್ದಾರೆ. ಈಚೆಗೆ ತಂಡದ ಮುಖ್ಯ ಕೋಚ್ ಪುಬುಡು ದಾಸನಾಯಕೆ ಅವರು ರಾಜೀನಾಮೆ ನೀಡಿದ್ದರು. ಅವರು 2016ರಿಂದ ಕಾರ್ಯನಿರ್ವಹಿಸಿದರು.

56 ವರ್ಷದ ಮೋರೆ ಅವರು ನಿರ್ದೇಶಕರಾಗಿ ಜೂನ್ ತಿಂಗಳಲ್ಲಿ ಅಧಿಕಾರ ಸ್ವೀಕರಿಸಿದ್ದರು. ವೆಸ್ಟ್ ಇಂಡೀಸ್  ಆಟಗಾರ ಕೀರನ್ ಪೊವೆಲ್ ಅವರು ಹೈಪರ್ಫಾರ್ಮೆನ್ಸ್‌ ಮ್ಯಾನೇಜರ್ ಆಗಿದ್ದರು.