ಜುಲೈ 6 ರ ಅಂತರಾಷ್ಟ್ರೀಯ ಪ್ರಚಲಿತ ಘಟನೆಗಳು

0
19

ಈ ಕೆಳಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಕುರಿತು ಸಂಕ್ಷಿಪ್ತವಾಗಿ ವಿವರಣೆ ನೀಡಲಾಗಿದೆ.

20 ಕೋಟಿ ಗೆದ್ದ ಭಾರತೀಯ ಮಹಿಳೆ

ದುಬೈ(ಪಿಟಿಐ): ರಫೆಲ್ ಲಾಟರಿಯಲ್ಲಿ ಭಾರತದ ಸೋಪ್ನಾ ನಾಯರ್‌ ಅವರು  20.58 ಕೋಟಿ ಗೆದ್ದಿದ್ದಾರೆ. 

‘ಗೆದ್ದ ಮೊತ್ತದ ಭಾಗವೊಂದನ್ನು ಮಹಿಳೆಯರು ಸೇರಿ ದುರ್ಬಲ ವರ್ಗದ ಸಬಲೀಕರಣಕ್ಕೆ ಬಳಸುತ್ತೇವೆ. ಈ ಹಿಂದೆಯೂ ನನ್ನ ಕೈಲಾದಷ್ಟು ದಾನ ಮಾಡಿದ್ದೇನೆ. ಇದೀಗ ನಾನು ಆರ್ಥಿಕವಾಗಿ ಸ್ವತಂತ್ರವಾಗಿದ್ದು, ಹೆಚ್ಚಿನ ಸಮಾಜಸೇವೆ ಮಾಡುತ್ತೇನೆ’ ಎಂದು ಅಬುಧಾಬಿಯಲ್ಲಿ ಇಂಜಿನಿಯರ್‌ ಆಗಿರುವ ಕೇರಳದ ಸೋಪ್ನಾ ‘ಖಲೀಜ್‌ ಟೈಮ್ಸ್‌’ಗೆ ತಿಳಿಸಿದ್ದಾರೆ. 

‘ಇಷ್ಟೊಂದು ಹಣ ಗೆದ್ದಿದ್ದೀವೆ ಎನ್ನುವುದನ್ನು ನನಗೂ ನನ್ನ ಕುಟುಂಬಕ್ಕೂ ನಂಬಲಾಗುತ್ತಿಲ್ಲ.  ಮೂರ್ನಾಲ್ಕು ಬಾರಿಯಷ್ಟೇ ಈ ರೀತಿಯ ಟಿಕೆಟ್‌ ತೆಗೆದುಕೊಂಡಿರಬಹುದು. ಈ ಬಾರಿ ಟಿಕೆಟ್‌ ಖರೀದಿಸಿದ ಸಂದರ್ಭದಲ್ಲಿ ಗಂಡನಿಗೆ ತಿಳಿಸಿರಲಿಲ್ಲ. ಗೆದ್ದ ವಿಷಯ ತಿಳಿಸಿದಾಗ ಅವರೂ ಆಶ್ಚರ್ಯಪಟ್ಟರು’ ಎಂದಿದ್ದಾರೆ. 

 

ಯುಎಇ: ಪ್ರವಾಸಿಗರಿಗೆ ಉಚಿತ ಸಿಮ್‌, ಡೇಟಾ

ದುಬೈ (ಪಿಟಿಐ): ಯುನೈಟೆಡ್‌ ಅರಬ್‌ ಎಮಿರೇಟ್ಸ್‌ಗೆ ಪ್ರವಾಸ ಕೈಗೊಳ್ಳುವವ ಪ್ರವಾಸಿಗರಿಗೆ ಉಡುಗೊರೆಯಾಗಿ ‘ಸಿಮ್‌’ ಕಾರ್ಡ್‌ ಪಡೆಯಬಹುದು. ಅದರೊಂದಿಗೆ ಉಚಿತವಾಗಿ 20 ಎಂ.ಬಿ ಡೇಟಾ ಕೂಡ ದೊರೆಯಲಿದೆ. ಇದಕ್ಕೆ ಯಾವುದೇ ದಾಖಲಾತಿಗಳನ್ನು ಒದಗಿಸಬೇಕಾಗಿಲ್ಲ.

‘ಫೆಡರಲ್‌ ಅಥಾರಿಟಿ ಫಾರ್‌ ಐಡೆಂಟಿಟಿ ಅಂಡ್‌ ಸಿಟಿಜನ್‌ಶಿಪ್‌‘ ಅಬುಧಾಬಿಯಲ್ಲಿ ಈ ಘೋಷಣೆಯನ್ನು ಜುಲೈ 5 ರ ಶುಕ್ರವಾರ ಮಾಡಿದೆ. ಈ ಸಿಮ್‌ ಕಾರ್ಡ್‌ಗಳ ಬಳಕೆದಾರರಿಗೆ ಅಂತರರಾಷ್ಟ್ರೀಯ ಕರೆ ನಿಮಿಷಗಳು ಮತ್ತು ಸಂದೇಶಗಳು ಉಚಿತವಾಗಿ ದೊರೆಯಲಿವೆ. 

ಈ ಪ್ರವಾಸಿ ಸ್ನೇಹಿ ಸಿಮ್‌ಗಳ ‘ವೆಲಿಡಿಟಿ’ ತಿಂಗಳವರೆಗೆ ಇರುತ್ತದೆ. ಒಂದು ವೇಳೆ ಪ್ರವಾಸಿಗರು ತಮ್ಮ ವೀಸಾವನ್ನು ನವೀಕರಿಸಿದರೆ ಸಿಮ್‌ಗಳು ಸ್ವಯಂ ಚಾಲಿತವಾಗಿ ನವೀಕರಣಗೊಳ್ಳುತ್ತವೆ. ಈ ಸಿಮ್‌ಗಳನ್ನು ದೇಶದ ಎಲ್ಲಿಯಾದರೂ ‘ರೀಚಾರ್ಜ್‌’ ಮಾಡಬಹುದು ಎಂದು ಗಲ್ಫ್‌ ನ್ಯೂಸ್‌ ವರದಿ ಮಾಡಿದೆ. 

 

 

ಶ್ರೀಲಂಕಾ: ಮರಣದಂಡನೆ ಆದೇಶಕ್ಕೆ ತಡೆ

ಕೊಲಂಬೊ (ಪಿಟಿಐ): ಮಾದಕ ವಸ್ತುಗಳ ಅಪರಾಧಿಗಳಿಗೆ ಮರಣದಂಡನೆ ವಿಧಿಸುವ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಆದೇಶಕ್ಕೆ ಶ್ರೀಲಂಕಾದ ಸುಪ್ರೀಂ ಕೋರ್ಟ್‌ ಅಕ್ಟೋಬರ್.30ರವರೆಗೆ ತಡೆ ನೀಡಿದೆ. ಸಿರಿಸೇನಾ ಅವರು ಕಳೆದ ತಿಂಗಳು ತಮ್ಮ ಆದೇಶ ನೀಡಿದ್ದರು.

ಅಧ್ಯಕ್ಷರ ಆದೇಶ ಪ್ರಶ್ನಿಸಿ ಶಿಕ್ಷೆಗೊಳಗಾದ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಅಧ್ಯಕ್ಷರ ಆದೇಶವು ಅಪರಾಧಿಗಳ ಮೂಲಭೂತ ಹಕ್ಕಿಗೆ ಧಕ್ಕೆ ಮಾಡುತ್ತದೆ ಎಂದು ವಕೀಲ ಎಂ.ಎ.ಸುಮಂತಿರಾಜನ್ ಅವರು ಅರ್ಜಿಯಲ್ಲಿ ತಿಳಿಸಿದ್ದರು.

ಮರಣದಂಡನೆ ವಿಧಿಸುವ ಆದೇಶ ಪ್ರಶ್ನಿಸಿ 11 ಕ್ಕೂ ಹೆಚ್ಚು ಮೂಲಭೂತ ಹಕ್ಕಿನ ಅರ್ಜಿಗಳು ವಿವಿಧ ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗಿವೆ.