ಜುಲೈ 26 ರ ರಾಷ್ಟ್ರೀಯ ಪ್ರಚಲಿತ ಘಟನೆಗಳು

0
70

ಈ ಕೆಳಗೆ ರಾಷ್ಟ್ರೀಯ ಮಟ್ಟದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಕುರಿತು ಸಂಕ್ಷಿಪ್ತವಾಗಿ ವಿವರಣೆ ನೀಡಲಾಗಿದೆ.

ಆರ್‌ಟಿಐ: ವಿವಾದಾತ್ಮಕ ತಿದ್ದುಪಡಿಗೆ ಅಂಗೀಕಾರ

ನವದೆಹಲಿ: ಮಾಹಿತಿ ಹಕ್ಕು (ಆರ್‌ಟಿಐ) (ತಿದ್ದುಪಡಿ) ಮಸೂದೆ 2019ಕ್ಕೆ ರಾಜ್ಯಸಭೆ ಜುಲೈ 25 ರ ಗುರುವಾರ ಒಪ್ಪಿಗೆ ಕೊಟ್ಟಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿರೋಧ ಪಕ್ಷಗಳ ಎಲ್ಲ ಸದಸ್ಯರ ಸಭಾತ್ಯಾಗದ ಬಳಿಕ ವಿವಾದಾತ್ಮಕ ತಿದ್ದುಪಡಿ ಮಸೂದೆಗೆ ಅಂಗೀಕಾರ ಕೊಡಲಾಯಿತು.

ಕೇಂದ್ರ ಮತ್ತು ರಾಜ್ಯ ಮಟ್ಟದ ಮಾಹಿತಿ ಆಯುಕ್ತರ ಅಧಿಕಾರಾವಧಿ ಮತ್ತು ವೇತನವನ್ನು ನಿರ್ಧರಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುವುದು ತಿದ್ದುಪಡಿ ಮಸೂದೆಯ ಮುಖ್ಯ ಉದ್ದೇಶವಾಗಿದೆ. ಈ ಮಸೂದೆಗೆ ಇದೇ ಜುಲೈ 22ರಂದು ಲೋಕಸಭೆ ಒಪ್ಪಿಗೆ ಕೊಟ್ಟಿತ್ತು. 

ಮಸೂದೆಯನ್ನು ಸಂಸತ್ತಿನ ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿ
ದಿದ್ದವು. ಟಿಎಂಸಿಯ ಡೆರೆಕ್‌ ಒಬ್ರಯಾನ್‌, ಸಿಪಿಐನ ಬಿನೋಯ್‌ ವಿಶ್ವಂ, ಸಿಪಿಎಂನ ಕೆ.ಕೆ. ರಾಜೇಶ್‌ ಮತ್ತು ಎಲಮರಂ ಕರೀಮ್‌ ಹಾಗೂ ಕಾಂಗ್ರೆಸ್‌ನ ರಾಜೀವ್‌ ಗೌಡ ಅವರು ಮಸೂದೆಯನ್ನು ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂಬ ನಿಲುವಳಿ ಮಂಡಿಸಿದ್ದರು. ಆದರೆ, ಈ ನಿಲುವಳಿಗೆ ಸೋಲಾಯಿತು. ಹಾಗಾಗಿ ಮಸೂದೆಯ ಅಂಗೀಕಾರ ಸುಲಭವಾಯಿತು.

ನಿಲುವಳಿಯ ಪರ ವಿರೋಧ ಪಕ್ಷಗಳಿಗೆ ಒಟ್ಟುಗೂಡಿಸಲು ಸಾಧ್ಯವಾದದ್ದು 75 ಮತಗಳನ್ನು ಮಾತ್ರ. ನಿಲುವಳಿ ವಿರುದ್ಧ 117 ಮತಗಳು ದಾಖಲಾದವು. ಟಿಆರ್‌ಎಸ್‌, ಬಿಜೆಡಿ ಸದಸ್ಯರು ವಿರುದ್ಧವಾಗಿ ಮತ ಹಾಕಿದರು. 

ಮತಪತ್ರದ ಮೂಲಕ ಈ ಮತದಾನ ನಡೆಯಿತು. ಮತಗಳ ಎಣಿಕೆ ನಡೆಯುತ್ತಿದ್ದಂತೆಯೇ ವಿರೋಧ ಪಕ್ಷಗಳ ಸದಸ್ಯರು ಸ್ಪೀಕರ್‌ ಪೀಠದ ಮುಂದೆ ಪ್ರತಿಭಟನೆ ನಡೆಸಿದರು. ತಿದ್ದುಪಡಿಯು ಮಾಹಿತಿ ಹಕ್ಕು ಕಾಯ್ದೆಯ ಕತ್ತು ಹಿಸುಕಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲ ನಿಮಿಷಗಳ ಬಳಿಕ ಅವರೆಲ್ಲರೂ ಸಭಾತ್ಯಾಗ ಮಾಡಿದರು. ನಂತರ, ಧ್ವನಿಮತದಿಂದ ಮಸೂದೆ ಅಂಗೀಕಾರವಾಯಿತು. 
 
ನೋಟು ರದ್ದತಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆ ಬಗೆಗಿನ ಮಾಹಿತಿಯು ಆರ್‌ಟಿಐ ಮೂಲಕ ಬಹಿರಂಗವಾಗಿದ್ದಕ್ಕೆ ಮೋದಿ ಅವರು ಈ ರೀತಿಯಲ್ಲಿ ಪ್ರತೀಕಾರ ಕೈಗೊಂಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಜೈರಾಂ ರಮೇಶ್‌ ಹೇಳಿದರು. ಒಟ್ಟು ಐದು ಪ್ರಕರಣಗಳಲ್ಲಿ ಸರ್ಕಾರಕ್ಕೆ ಮುಜುಗರವಾಗಿತ್ತು. ನಕಲಿ ಪಡಿತರ ಚೀಟಿಗಳ ಸಂಖ್ಯೆ, ವಿದೇಶದಿಂದ ತಂದ ಕಪ್ಪುಹಣದ ಪ್ರಮಾಣದ ಮಾಹಿತಿ ಮತ್ತು ಸುಸ್ತಿದಾರರ ಪಟ್ಟಿ ಸಲ್ಲಿಕೆಯ ಮಾಹಿತಿಯು ಈ ಕಾಯ್ದೆಯ ಕಾರಣಕ್ಕೇ ಜನರಿಗೆ ತಿಳಿಯಿತು ಎಂದು ಜೈರಾಂ ಅವರು ಪ್ರತಿಪಾದಿಸಿದರು. 

ಮಾಹಿತಿ ಆಯುಕ್ತರ ಕೆಲಸದಲ್ಲಿ ಕೇಂದ್ರ ಮಧ್ಯಪ್ರವೇಶ ನಡೆಸುವುದಿಲ್ಲ ಎಂಬ ಭರವಸೆಯನ್ನು ಪ್ರಧಾನಿ ಕಾರ್ಯಾಲಯದಲ್ಲಿ ರಾಜ್ಯ ಸಚಿವರಾಗಿರುವ ಜಿತೇಂದ್ರ ಸಿಂಗ್‌ನೀಡಿದರು. ಕೇಂದ್ರ ಮತ್ತು ರಾಜ್ಯ ಮಾಹಿತಿ ಆಯೋಗದ ಸ್ವಾಯತ್ತೆ ಮುಂದುವರಿಯಲಿದೆ ಎಂದೂ ಹೇಳಿದರು. 

 

ತ್ರಿವಳಿ ತಲಾಕ್‌ ಮಸೂದೆಗೆ

ನವದೆಹಲಿ: ತ್ರಿವಳಿ ತಲಾಕ್‌ ನೀಡುವವರಿಗೆ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ‘ಮುಸ್ಲಿಂ ಮಹಿಳೆ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆ–2019’ಕ್ಕೆ ಲೋಕಸಭೆಯಲ್ಲಿ  ಜುಲೈ 25 ರ ಗುರುವಾರ ಅನುಮೋದನೆ ದೊರೆತಿದೆ.

ಮಸೂದೆಯಲ್ಲಿ ಹಲವು ಬದಲಾವಣೆ ತರಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿದವು. ತ್ರಿವಳಿ ತಲಾಕ್ ನೀಡುವ 
ಪುರುಷನಿಗೆ ಮೂರು ವರ್ಷ ಜೈಲುಶಿಕ್ಷೆ ನೀಡಲು ಮಸೂದೆಯಲ್ಲಿ ಅವಕಾಶವಿದೆ. ಪ್ರತಿಪಕ್ಷಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದವು. ಕಾಂಗ್ರೆಸ್‌, ಟಿಎಂಸಿ, ಎಸ್‌ಪಿ, ಡಿಎಂಕೆ ಸದಸ್ಯರು ಮಸೂದೆ ವಿರೋಧಿಸಿ ಸದನದಿಂದ ಹೊರನಡೆದರು.

ಮಸೂದೆಯನ್ನು ಧ್ವನಿಮತಕ್ಕೆ ಹಾಕಲಾಯಿತು. ಮಸೂದೆ ಪರವಾಗಿ 303 ಸದಸ್ಯರು ಮತ್ತು ವಿರುದ್ಧ 82 ಸದಸ್ಯರು ಮತ ಚಲಾಯಿಸಿದರು. ಈಗ ಮಸೂದೆಯು ರಾಜ್ಯಸಭೆಯ ಅನುಮೋದನೆ ಪಡೆಯಬೇಕಿದೆ.

 

“ಅತನು ಚಕ್ರವರ್ತಿ” ಹೊಸ ಹಣಕಾಸು ಕಾರ್ಯದರ್ಶಿ

ನವದೆಹಲಿ (ಪಿಟಿಐ): ಹೂಡಿಕೆ ಮತ್ತು ಸಾರ್ವಜನಿಕ ಸಂಪತ್ತು ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ಅತನು ಚಕ್ರವರ್ತಿ ಅವರನ್ನು ಹಣಕಾಸು ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.

ಈ ಹುದ್ದೆಯಲ್ಲಿದ್ದ ಸುಭಾಷ್‌ ಚಂದ್ರ ಗರ್ಗ್‌ ಅವರನ್ನು ಬುಧವಾರ ದಿಢೀರನೆ ವಿದ್ಯುತ್‌ ಸಚಿವಾಲಯಕ್ಕೆ ವರ್ಗಾಯಿಸಲಾಗಿದೆ.

ಸ್ವಯಂ ನಿವೃತ್ತಿ?: ಹಣಕಾಸು ಸಚಿವಾಲಯದಿಂದ ವಿದ್ಯುತ್‌ ಸಚಿವಾಲಯಕ್ಕೆ ವರ್ಗಾವಣೆ ಮಾಡಿದ ಮರು ದಿನವೇ ಸೇವೆಯಿಂದ ಸ್ವಯಂ ನಿವೃತ್ತಿಯಾಗಲು ಗರ್ಗ್‌ ಅವರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

1983ರ ರಾಜಸ್ಥಾನ್‌ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿರುವ ಗರ್ಗ್ ಅವರ ಸೇವಾವಧಿಯು 2020ರ ಅಕ್ಟೋಬರ್‌ವರೆಗೆ ಇದೆ.