ಜುಲೈ.22 ಕ್ಕೆ ಚಂದ್ರಯಾನ-2 ಉಡಾವಣೆ ಎರಡನೇ ಯತ್ನ: ಇಸ್ರೋ ಹೇಳಿಕೆ

0
42

ಬಹುನಿರೀಕ್ಷಿತ ಚಂದ್ರಯಾನ-2 ಉಪಗ್ರಹವನ್ನು ಜು.22ರ ಮುಂಜಾನೆ 2.43ಕ್ಕೆ ಉಡಾವಣೆ ಮಾಡಲು ಇನ್ನೊಂದು ಪ್ರಯತ್ನ ಮಾಡುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.

ನವದೆಹಲಿ: ಬಹುನಿರೀಕ್ಷಿತ ಚಂದ್ರಯಾನ-2 ಉಪಗ್ರಹವನ್ನು ಜುಲೈ.22ರ ಮಧ್ಯಾಹ್ನ 2.43ಕ್ಕೆ ಉಡಾವಣೆ ಮಾಡಲು ಇನ್ನೊಂದು ಪ್ರಯತ್ನ ಮಾಡುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.

ಜುಲೈ 15ರ ಮುಂಜಾನೆ 2.51ಕ್ಕೆ ಚಂದ್ರಯಾನ-2 ಉಪಗ್ರಹ ಉಡಾವಣೆಗೆ ಮೊದಲ ಪ್ರಯತ್ನ ಮಾಡಲಾಗಿತ್ತು. ಆದರೆ, ಉಡಾವಣೆಗೆ ಅಂದಾಜು 56 ನಿಮಿಷಗಳು ಬಾಕಿಯಿರುವಂತೆ ಉಪಗ್ರಹವನ್ನು ಹೊತ್ತೊಯ್ಯಬೇಕಿದ್ದ ಜಿಎಸ್​ಎಲ್​ವಿ ಮ್ಯಾರ್ಕ್​ 3 ಉಡಾಹಕದಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಇಸ್ರೋ ಉಡಾವಣೆಯನ್ನು ಸ್ಥಗಿತಗೊಳಿಸಿತ್ತು.

ಅಂದಾಜು 976 ಕೋಟಿ ರೂಪಾಯಿಯ ಯೋಜನೆ ಇದಾಗಿದೆ. ಹಾಗಾಗಿ, ಉಡಾವಣೆಗೊಂಡ ನಂತರದಲ್ಲಿ ಭಾರಿ ನಷ್ಟವಾಗುವ ಸಾಧ್ಯತೆ ಇತ್ತು. ಇದನ್ನು ತಡೆಗಟ್ಟುವ ಉದ್ದೇಶದಿಂದ ಕೊನೇ ಕ್ಷಣದಲ್ಲಿ ಉಡಾವಣೆಯನ್ನು ರದ್ದುಗೊಳಿಸಿದ್ದಾಗಿ ಇಸ್ರೋ ಹೇಳಿಕೊಂಡಿತ್ತು.

ಉಡಾವಣಾ ವಾಹಕದ ಒಂದು ಭಾಗದಲ್ಲಿನ ಒಂದು ಬಿಡಿಭಾಗ ಸರಿಯಾಗಿ ಜೋಡಣೆಗೊಂಡಿರಲಿಲ್ಲ. ಅದನ್ನು ಈಗ ಸರಿಯಾಗಿ ಜೋಡಣೆ ಮಾಡಲಾಗಿದೆ. ಹೀಗಾಗಿ, ಉಡಾವಣೆಗೆ ಮತ್ತೊಂದು ಪ್ರಯತ್ನ ಮಾಡಲು ನಿರ್ಧರಿಸಲಾಗಿದೆ ಎಂದು ಇಸ್ರೋ ಹೇಳಿದೆ. 

ಇಸ್ರೋ ಕೈಗೆತ್ತಿಕೊಂಡಿರುವ ಅತ್ಯಂತ ಕ್ಲಿಷ್ಟ ಬಾಹ್ಯಾಕಾಶ ಯೋಜನೆ ಚಂದ್ರಯಾನ-2 ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದರು. ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಸುರಕ್ಷಿತವಾಗಿ ಇಳಿಸುವುದು ಯೋಜನೆಯ ಬಹುಮುಖ್ಯವಾದ ಕಾರ್ಯಕ್ರಮವಾಗಿದೆ.