ಜುಲೈ 18 ರಿಂದ ಸಂಸತ್ತಿನ ಮುಂಗಾರು ಅಧಿವೇಶನ : ಸಚಿವ ಅನಂತ ಕುಮಾರ್ ಹೇಳಿಕೆ

0
26

ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 18ರಿಂದ ಆಗಸ್ಟ್ 10ರವರೆಗೆ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಜೂನ್ 25 ರ ಸೋಮವಾರ ತಿಳಿಸಿದ್ದಾರೆ.

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 18ರಿಂದ ಆಗಸ್ಟ್ 10ರವರೆಗೆ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್  ಜೂನ್ 25 ರ  ಸೋಮವಾರ ತಿಳಿಸಿದ್ದಾರೆ.

ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಪಿಎ) ಸಭೆ ನಡೆಸಿ ದಿನಾಂಕ ನಿಗದಿಪಡಿಸಿದೆ. ಒಟ್ಟು 18 ದಿನಗಳ ಕಲಾಪ ಇರಲಿದೆ. ತ್ರಿವಳಿ ತಲಾಖ್ ಸೇರಿದಂತೆ ಆರು ಮಹತ್ವದ ವಿಧೇಯಕಗಳ ಬಗ್ಗೆ ಈ ಅಧಿವೇಶನದಲ್ಲಿ ತೀರ್ಮಾನವಾಗಬೇಕಿದೆ. ಈ ನಿಟ್ಟಿನಲ್ಲಿ ವಿಪಕ್ಷಗಳ ಸಹಕಾರವನ್ನು ಕೋರುತ್ತೇವೆ ಎಂದು ಕುಮಾರ್ ಹೇಳಿದ್ದಾರೆ.

ರಾಜ್ಯಸಭಾ ಉಪಾಧ್ಯಕ್ಷ ಪ್ರೊ. ಪಿ.ಜೆ. ಕುರಿಯನ್ ಅಧಿಕಾರ ಅವಧಿ ಜುಲೈ 1ಕ್ಕೆ ಅಂತ್ಯಗೊಳ್ಳಲಿದ್ದು, ನೂತನ ಉಪಾಧ್ಯಕ್ಷರ ಆಯ್ಕೆಗೆ ಇದೇ ಅಧಿವೇಶನದಲ್ಲಿ ಚುನಾವಣೆ ನಡೆಯಬೇಕಿದೆ.

ಚರ್ಚೆಯಾಗಲಿರುವ ಮಹತ್ವದ ವಿಧೇಯಕ

ಲೋಕಸಭೆಯಲ್ಲಿ ಅನುಮೋದನೆ ಪಡೆದು ರಾಜ್ಯಸಭೆಯಲ್ಲಿರುವ ತ್ರಿವಳಿ ತಲಾಖ್

ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ಮಸೂದೆ

# ರಾಷ್ಟ್ರೀಯ ವೈದ್ಯಕೀಯ ಶಿಕ್ಷಣ ಆಯೋಗ ವಿಧೇಯಕ

# ತೃತೀಯ ಲಿಂಗಿಗಳ ಹಕ್ಕು ರಕ್ಷಣೆ ಮಸೂದೆ

# ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ತಿದ್ದುಪಡಿ ಮಸೂದೆ

# ಜಿಎಸ್​ಟಿ ತಿದ್ದುಪಡಿ ಮಸೂದೆ

 

ಏಪ್ರಿಲ್ ಅಧಿವೇಶನ ವ್ಯರ್ಥ!

ಕಳೆದ ಏಪ್ರಿಲ್​ನಲ್ಲಿ ನಡೆದ ಬಜೆಟ್ ಅಧಿವೇಶನ ವಿಪಕ್ಷಗಳ ಗದ್ದಲದಿಂದಾಗಿ ಯಾವುದೇ ಮಹತ್ವದ ಚರ್ಚೆಗಳಿಗೆ ಅವಕಾಶ ಸಿಗದೆ ಸಂಪೂರ್ಣ ವ್ಯರ್ಥವಾಗಿತ್ತು. ಕಲಾಪಕ್ಕೆ ನಿಗದಿಯಾಗಿದ್ದ ಅವಧಿಯಲ್ಲಿ ಲೋಕಸಭೆಯಲ್ಲಿ ಶೇ. 1 ಹಾಗೂ ರಾಜ್ಯಸಭೆಯಲ್ಲಿ ಶೇ. 6ಮಾತ್ರ ಸದ್ಬಳಕೆಯಾಗಿತ್ತು. ಪಿಎನ್​ಬಿ ಹಗರಣ, ಎಸ್​ಸಿ ಹಾಗೂ ಎಸ್​ಟಿ ದೌರ್ಜನ್ಯ ತಡೆ ಕಾಯ್ದೆ ಸಂಬಂಧಿತ ಚರ್ಚೆಗಳಿಗೆ ಅವಕಾಶವೇ ಸಿಗದೆ 250 ಗಂಟೆಗಳ ಕಲಾಪ ಗದ್ದಲಕ್ಕೆ ಬಲಿಯಾಗಿತ್ತು. 2000ನೇ ಇಸವಿಯಿಂದ ಅತಿ ಕಡಿಮೆ ಉತ್ಪಾದಕತೆಯ ಬಜೆಟ್ ಅಧಿವೇಶನ ಕಳೆದ ಬಾರಿಯದ್ದಾಗಿತ್ತು ಎಂದು ಸಂಶೋಧನಾ ಸಂಸ್ಥೆಯೊಂದು ವರದಿ ಮಾಡಿತ್ತು.