ಜಿಸ್ಯಾಟ್​-29 ಉಪಗ್ರಹ ಉಡಾವಣೆ ಯಶಸ್ವಿ: ಇಸ್ರೋ ಮಹತ್ತರ ಸಾಧನೆ

0
699

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ ) ಬುಧವಾರ ಮತ್ತೊಂದು ಸಂವಹನಾ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಜಿಎಸ್‌ಎಲ್‌ವಿಯ ಮಾರ್ಕ್- 3 ರಾಕೆಟ್‌ನಿಂದ ಇಸ್ರೋಗೆ ಈ ಯಶಸ್ಸು ಸಿಕ್ಕಿರುವುದು ಮತ್ತೊಂದು ಸಾಧನೆಯಾಗಿದೆ.

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (  ಇಸ್ರೋ ) ನವೆಂಬರ್ 14 ರ ಬುಧವಾರ ಮತ್ತೊಂದು ಸಂವಹನಾ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಜಿಎಸ್‌ಎಲ್‌ವಿಯ ಮಾರ್ಕ್- 3 ರಾಕೆಟ್‌ನಿಂದ ಇಸ್ರೋಗೆ ಈ ಯಶಸ್ಸು ಸಿಕ್ಕಿರುವುದು ಮತ್ತೊಂದು ಸಾಧನೆಯಾಗಿದೆ. ಇನ್ನು, 4 ವರ್ಷಗಳಲ್ಲಿ ಮಾನವ ಸಹಿತ ಬಾಹ್ಯಾಕಾಶ ಯೋಜನೆ ಹಾಗೂ ಚಂದ್ರಯಾನ್ 2 ನಂತಹ ಎರಡು ದೊಡ್ಡ ಯೋಜನೆಗಳ ತಯಾರಿಯಲ್ಲಿರುವ ಇಸ್ರೋಗೆ ಇದು ಹೊಸ ಹುರುಪು ಮೂಡಿಸಿದೆ. 

ಆಂಧ್ರದ ಶ್ರೀ ಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಸಂಜೆ 5.08ಕ್ಕೆ ಜಿಎಸ್‌ಎಲ್‌ವಿ ಮಾರ್ಕ್ – 3 – ಡಿ 2 ವಾಹನ ನಭಕ್ಕೆ ಚಿಮ್ಮಿದ್ದು, ಜಿಸ್ಯಾಟ್ – 29 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ. 

ಇಸ್ರೋದ ಈ ಮಹತ್ತರ ಸಾಧನೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಇನ್ನು, ಈ ಸಾಧನೆಗೆ ಇಸ್ರೋನ ಇಡೀ ತಂಡ ಕಾರಣವೆಂದು ಮುಖ್ಯಸ್ಥ ಶಿವನ್‌ ಟ್ವೀಟ್ ಮಾಡಿದ್ದಾರೆ. 

3,423ಕೆಜಿ ತೂಕದ ಈ ಸಂವಹನ ಉಪಗ್ರಹದ ಜೀವಿತಾವಧಿ 10 ವರ್ಷ ಆಗಿದೆ. ಇದು Ka ಮತ್ತು Ku ಬ್ಯಾಂಡ್ ಸಂವಹನ ಟ್ರಾನ್ಸ್ಪಾಂಡರ್ಗಳನ್ನು ಹೊಂದಿದ್ದು, ದೇಶದ ಜಮ್ಮು – ಕಾಶ್ಮೀರ, ಈಶಾನ್ಯ ಭಾರತ ಸೇರಿ ಹಲವು ಪ್ರದೇಶಗಳಿಗೂ ಸಂವಹನ ಉದ್ದೇಶಕ್ಕೆ ಈ ಉಪಗ್ರಹ ಬಳಕೆಯಾಗಲಿದೆ. ಈ ಉಪಗ್ರಹದಿಂದ ದೇಶದ ಮೂಲೆ ಮೂಲೆಗೆ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ಕಲ್ಪಿಸಬಹುದಾಗಿದೆ.