ಜಿಎಸ್‌ಟಿ ಗಡುವು ವಿಸ್ತರಣೆ

0
5

ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ವಾರ್ಷಿಕ ರಿಟರ್ನ್ಸ್‌ ಸಲ್ಲಿಕೆಯ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸಿ ತೆರಿಗೆದಾರರಿಗೆ ಅನುಕೂಲತೆ ಕಲ್ಪಿಸಿದೆ.

ನವದೆಹಲಿ (ಪಿಟಿಐ): ಸರಕು ಮತ್ತುಸೇವಾ ತೆರಿಗೆಯ (ಜಿಎಸ್‌ಟಿ) ವಾರ್ಷಿಕ ರಿಟರ್ನ್ಸ್‌ ಸಲ್ಲಿಕೆಯ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸಿ ತೆರಿಗೆದಾರರಿಗೆ ಅನುಕೂಲತೆ ಕಲ್ಪಿಸಿದೆ.

ಹಣಕಾಸು ವರ್ಷ 2017–18ನೇ ಸಾಲಿನ ಗಡುವನ್ನು ಡಿಸೆಂಬರ್‌ 31ಕ್ಕೆ ಮತ್ತು 2018–19ನೇ ಸಾಲಿನ ಗಡುವನ್ನು
2020ರ ಮಾರ್ಚ್‌ 31ರವರೆಗೆ ವಿಸ್ತರಿಸಲಾಗಿದೆ. ರಿಟರ್ನ್ಸ್‌ಗಳ ಹೊಂದಾಣಿಕೆಯ ಹೇಳಿಕೆ ದಾಖಲಿಸುವ ದಿನವನ್ನು ಕೂಡ ವಿಸ್ತರಿಸಲಾಗಿದೆ.

ಸರಳೀಕರಣ: ಇದರ ಜತೆಗೆ, ಎರಡು ಜಿಎಸ್‌ಟಿ ಅರ್ಜಿ ನಮೂನೆಗಳನ್ನು ಸಲ್ಲಿಸುವುದನ್ನು ಸರಳಗೊಳಿಸಲಾಗಿದೆ. ಈ ಫಾರ್ಮ್‌ಗಳಲ್ಲಿನ ಅನೇಕ ವಿವರಗಳನ್ನು ಭರ್ತಿ ಮಾಡುವುದನ್ನು ಐಚ್ಛಿಕಗೊಳಿಸಲಾಗಿದೆ ಎಂದು ಪರೋಕ್ಷ ತೆರಿಗೆ ಮತ್ತು
ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಹೇಳಿಕೆಯಲ್ಲಿ ತಿಳಿಸಿದೆ.

‘ಜಿಎಸ್‌ಟಿಆರ್‌–9’ (ವಾರ್ಷಿಕ ರಿಟರ್ನ್‌) ಮತ್ತು ವಹಿವಾಟಿನ ಲೆಕ್ಕಪತ್ರದ ಅಂಕಿ ಅಂಶಗಳು ಮತ್ತು ತೆರಿಗೆ ಲೆಕ್ಕಪತ್ರ ಸಲ್ಲಿಕೆಯ ವಿವರಗಳನ್ನು (ರಿಟರ್ನ್ಸ್‌) ಹೊಂದಾಣಿಕೆ ಮಾಡುವ ಹೇಳಿಕೆಯಾಗಿರುವ ‘ಜಿಎಸ್‌ಟಿಆರ್‌–9ಸಿ’ ಫಾರ್ಮ್‌ ಸಲ್ಲಿಸುವ ಗಡುವು ವಿಸ್ತರಿಸಲಾಗಿದೆ. ಈ ಮೊದಲಿನ ಗಡುವು ಕ್ರಮವಾಗಿ ನವೆಂಬರ್‌ 30 ಮತ್ತು ಡಿಸೆಂಬರ್‌ 31 ಆಗಿತ್ತು.

ಗಡುವು ವಿಸ್ತರಣೆಯಿಂದ ಜಿಎಸ್‌ಟಿ ತೆರಿಗೆದಾರರು ಈ ಎರಡೂ ಫಾರ್ಮ್‌ಗಳನ್ನು ಕಾಲಮಿತಿ ಒಳಗೆ ಸಲ್ಲಿಸುವ ನಿರೀಕ್ಷೆ ಇದೆ ಎಂದು ‘ಸಿಬಿಐಸಿ’ ತಿಳಿಸಿದೆ. ಈ  ಫಾರ್ಮ್‌ಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ತೆರಿಗೆದಾರರು ಆಕ್ಷೇಪಿಸಿದ್ದರು.