ಜಾಕ್‌ ಮಾ ಹಿಂದಿಕ್ಕಿದ ಮುಕೇಶ್ ಅಂಬಾನಿ ಏಷ್ಯಾದ ಶ್ರೀಮಂತ ವ್ಯಕ್ತಿ

0
25

ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಚೀನಾದ ಅಲಿಬಾಬಾ ಸ್ಥಾಪಕ ಜಾಕ್ ಮಾ ಅವರನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಹೊಸದಿಲ್ಲಿ: ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಚೀನಾದ ಅಲಿಬಾಬಾ ಸ್ಥಾಪಕ ಜಾಕ್ ಮಾ ಅವರನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. 

ಏಷ್ಯಾದ ಅತಿ ದೊಡ್ಡ ಸಿರಿವಂತರಾಗಿದ್ದ ಚೀನಾದ ಬಿಸಿನೆಸ್‌ ಮ್ಯಾಗ್ನೆಟ್‌ ಮತ್ತು ಆಲಿಬಾಬಾ ಗ್ರೂಪ್‌ನ ಅಧ್ಯಕ್ಷ ಜಾಕ್‌ ಮಾ ಅವರನ್ನು ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಕೇಶ್‌ ಅಂಬಾನಿ ಹಿಂದಿಕ್ಕಿದ್ದಾರೆ. 

ಭಾರತದ ಇ-ಕಾಮರ್ಸ್‌ ವಲಯದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಸಂಚಲನಕ್ಕೆ ಕಾರಣವಾಗಿದ್ದು, ಮುಕೇಶ್‌ ಅವರು ಏಷ್ಯಾದ ಬೃಹತ್‌ ಸಿರಿವಂತರಾಗಿ ರೂಪುಗೊಂಡಿದ್ದಾರೆ. ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್‌ ಸೂಚ್ಯಂಕದ ಪ್ರಕಾರ ಅಂಬಾನಿ ಅವರ ಆಸ್ತಿ 44.3 ಶತಕೋಟಿ ಡಾಲರ್‌(ಅಂದಾಜು 3 ಲಕ್ಷ ಕೋಟಿ ರೂ.). ಮಾ ಅವರ ಸಂಪತ್ತು 44 ಶತಕೋಟಿ ಡಾಲರ್‌ನಷ್ಟಿದೆ. 

ಈ ಸುದ್ದಿ ಬಳಿಕ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳು ಶೇ.1.7ರಷ್ಟು ಬೆಳವಣಿಗೆ ದಾಖಲಿಸಿವೆ. ಈ ವರ್ಷ ರಿಲಯನ್ಸ್‌ನ ಪೆಟ್ರೊಕೆಮಿಕಲ್ಸ್‌ ಸಾಮರ್ಥ್ಯ‌ ದುಪ್ಪಟ್ಟಾಗಿದ್ದು, ಅಂಬಾನಿ ಸಂಪತ್ತಿಗೆ ಈ ವರ್ಷ 400 ಕೋಟಿ ಡಾಲರ್‌(27 ಸಾವಿರ ಕೋಟಿ ರೂ.) ಜಮೆಯಾಗಿದೆ. ರಿಲಯನ್ಸ್‌ ಜಿಯೊ ಆದಾಯದಿಂದಲೂ ಹೂಡಿಕೆದಾರರು ಸಂತೋಷಗೊಂಡಿದ್ದಾರೆ. 

ಜಿಯೊಗೆ 21.5 ಕೋಟಿ ಟೆಲಿಕಾಂ ಚಂದಾದಾರರಿದ್ದು, ವ್ಯಾಪ್ತಿ ವಿಸ್ತರಣೆಗೆ ಪೂರಕವಾಗಿ ನಾನಾ ಹೊಸ ಯೋಜನೆಗಳನ್ನು ತಿಂಗಳ ಆರಂಭದಲ್ಲಿಯಷ್ಟೇ ಕಂಪನಿ ಘೋಷಿಸಿದೆ. ”ರಿಲಯನ್ಸ್‌ ರೀಟೇಲ್‌ ಲಿಮಿಟೆಡ್‌ ಮತ್ತು ರಿಲಯನ್ಸ್‌ ಜಿಯೊ ಬಿಸಿನೆಸ್‌ ಅನ್ನು ಬಳಸಿಕೊಂಡು, ಆನ್‌ಲೈನ್‌ನಿಂದ ಆಫ್‌ಲೈನ್‌ ವರೆಗಿನ ವಲಯದಲ್ಲಿ ದೊಡ್ಡ ಬೆಳವಣಿಗೆಯ ಅವಕಾಶ ಸೃಷ್ಟಿಸಲಿದ್ದೇವೆ,” ಎಂದು ಅಂಬಾನಿ ಅವರು ಇತ್ತೀಚೆಗೆ ನಡೆದ ಷೇರುದಾರರ ವಾರ್ಷಿಕ ಸಭೆಯಲ್ಲಿ ಹೇಳಿದ್ದರು. ದೇಶದ 1,100 ನಗರಗಳಲ್ಲಿ ಮೊದಲ ಹಂತದಲ್ಲಿ ಬೈಬರ್‌ ಆಧಾರಿತ ಬ್ರ್ಯಾಡ್‌ಬ್ಯಾಂಡ್‌ ಸೇವೆಯನ್ನು ಆರಂಭಿಸಲು ಜಿಯೊ ಮುಂದಾಗಿದೆ. ಇದು ಟೆಲಿಕಾಂ ವಲಯದಲ್ಲಿ ಇನ್ನೊಂದು ಸಂಚಲನಕ್ಕೆ ಕಾರಣವಾಗಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.