ಜರ್ಮನಿಯ ಚಾನ್ಸೆಲರ್: ಏಂಜೆಲಾ ಮರ್ಕೆಲ್

0
10

ಏಂಜೆಲಾ ಮರ್ಕೆಲ್ ಅವರು ನಾಲ್ಕನೇ ಬಾರಿ ಜರ್ಮನಿಯ ಚಾನ್ಸೆಲರ್ ಆಗಿ ಆಯ್ಕೆ ಆಗಿದ್ದಾರೆ. ಆದರೆ ಅತ್ಯಂತ ಕಡಿಮೆ ಅಂತರದಿಂದ ಈ ಹುದ್ದೆಗೆ ಮರು ಆಯ್ಕೆ ಆಗಿರುವುದರಿಂದ ಅವರ ಮುಂದಿನ ಹಾದಿ ಮುಳ್ಳಿನ ಮೇಲಿನ ನಡಿಗೆ ಆಗಲಿದೆ ಎಂದೇ ವಿಶ್ಲೇಷಿಸಲಾಗಿದೆ. ‘ಏಂಜೆಲಾ ಅವರಿಗೆ ಇದು ದುಃಸ್ವಪ್ನದ ಗೆಲುವು’ ಎಂದು ಇಲ್ಲಿನ ಪ್ರಮುಖ ಪತ್ರಿಕೆ ‘ಬಿಲ್ಡ್’ ಬರೆದಿದೆ.

ವಿರೋಧ ಪಕ್ಷ ಸೋಶಿಯಲ್ ಡೆಮಾಕ್ರಟಿಕ್ ಅನ್ನು ಎದುರಿಸುವುದು ಹಾಗೂ ಆಲ್ಟರ್‌ನೆಟಿವ್ ಫಾರ್ ಜರ್ಮನಿ (ಎಎಫ್‌ಡಿ) ಪಕ್ಷದೊಂದಿಗೆ ಮೈತ್ರಿ ಮಾತುಕತೆ ನಡೆಸುವುದು ಏಂಜೆಲಾ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಅದರ ತಯಾರಿ ಎಂಬಂತೆ ಅವರು ತಮ್ಮ ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ (ಸಿಡಿಯು) ಪಕ್ಷದ ಸದಸ್ಯರೊಂದಿಗೆ ಸೋಮವಾರ ರಹಸ್ಯ ಮಾತುಕತೆ ನಡೆಸಿದ್ದಾರೆ.

ಕನ್ಸರ್ವೆಟಿವ್ ಹಾಗೂ ಸೋಷಿಯಲ್ ಡೆಮಾಕ್ರಟಿಕ್ ಪಕ್ಷಗಳ ಮತಗಳನ್ನು ಎಎಫ್‌ಡಿ ಬಾಚಿಕೊಂಡ ಪರಿಣಾಮ, ಈ ಎರಡೂ ಪಕ್ಷಗಳ ಸಾಧನೆ ಕೆಲವು ದಶಕಗಳಲ್ಲೇ ಕಳಪೆ ಎನ್ನುವಷ್ಟು ಕಡಿಮೆಯಾಗಿದೆ. ಏಂಜೆಲಾ ಅವರ ಪಕ್ಷವು ಶೇ 33 ಮತಗಳನ್ನಷ್ಟೇ ಗಳಿಸಲು ಸಾಧ್ಯವಾಗಿದೆ. ಶೇ 20.5ರಷ್ಟು ಮತಗಳನ್ನು ಗಳಿಸಿರುವ ಸೋಷಿಯಲ್ ಡೆಮಾಕ್ರಟಿಕ್ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದಾಗಿ ಹೇಳಿದೆ. ಶೇ 12.6 ಪಡೆದು ಮೂರನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಮುಸ್ಲಿಂ ವಿರೋಧಿ ಎಎಫ್‌ಡಿಯು ಸರ್ಕಾರ ರಚನೆಗೆ ಏಂಜೆಲಾ ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದೆ.

ಲಕ್ಷಾಂತರ ವಲಸಿಗರು ಮತ್ತು ನಿರಾಶ್ರಿತರಿಗೆ ದೇಶದಲ್ಲಿ ಆಶ್ರಯ ನೀಡಿದ್ದರ ಪರಿಣಾಮವಾಗಿ ಮರ್ಕೆಲ್ ಈ ಚುನಾವಣೆಯಲ್ಲಿ ಜರ್ಮನಿಯ ಮತದಾರರ ವಿರೋಧ ಎದುರಿಸಿದ್ದಾರೆ. ಗೆಲುವಿನ ಬಳಿಕ ಟಿ.ವಿ ವಾಹಿನಿಯಲ್ಲಿ ಮಾತನಾಡಿದ ಏಂಜೆಲಾ, ‘ಎಲ್ಲ ಪಕ್ಷದವರೂ ತಮ್ಮ ಜವಾಬ್ದಾರಿಗಳನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದಿದ್ದಾರೆ.

ಎಎಫ್‌ಡಿಯ 87 ಸಂಸದರು ಕೆಳಮನೆ (ಬುಂಡೆಸ್ಟ್ಯಾಗ್) ಪ್ರವೇಶಿಸುತ್ತಿದ್ದು, ‘ನಾವು ನಮ್ಮ ದೇಶವನ್ನು ಮರಳಿ ಪಡೆಯುತ್ತೇವೆ’ ಎಂದು ಪಕ್ಷದ ಪ್ರಮುಖ ಅಲೆಕ್ಸಾಂಡರ್ ಗೌಲ್ಯಾಂಡ್ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಎರಡನೇ ಜಾಗತಿಕ ಯುದ್ಧದ ನಂತರ ಬಲಪಂಥೀಯ ವಾದದ ಪಕ್ಷವೊಂದು ಇಷ್ಟು ಮತ ಪಡೆದಿರುವುದು ಇದೇ ಮೊದಲು.

ಮೈತ್ರಿಗೆ ಎಎಫ್‌ಡಿ ಒಳಗೇ ವಿರೋಧ
ಗೆಲುವಿನ ಸಂಭ್ರಮದಲ್ಲಿದ್ದ ಎಎಫ್‌ಡಿಗೆ ಪಕ್ಷದ ನಾಯಕಿ ಫ್ರೌಕ್ ಪೆಟ್ರಿ ಆಘಾತ ನೀಡಿದ್ದಾರೆ. ಏಂಜೆಲಾ ಅವರ ಸರ್ಕಾರಕ್ಕೆ ಬೆಂಬಲ ನೀಡುವುದನ್ನು ಖಂಡಿಸಿರುವ ಅವರು, ‘ಬುಂಡೆಸ್ಟ್ಯಾಗ್ ಪ್ರವೇಶಿಸುತ್ತಿರುವ ಎಎಫ್‌ಡಿ ಸಂಸದರೊಂದಿಗೆ ಗುರುತಿಸಿಕೊಳ್ಳುವುದಿಲ್ಲ. ನಾನು ಸ್ವತಂತ್ರ ಸಂಸದೆಯಾಗಿಯೇ ಇರುತ್ತೇನೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.