ಜಮ್ಮು ಮತ್ತು ಕಾಶ್ಮೀರ, ಲಡಾಕ್​ ಕೇಂದ್ರಾಡಳಿತ ಪ್ರದೇಶಗಳ ಹೊಸ ಭೂಪಟ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

0
44

ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್​ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಅದು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಭಾರತದ ಹೊಸ ಭೂಪಟವನ್ನು ಬಿಡುಗಡೆ ಮಾಡಿದೆ.

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್​ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಅದು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಭಾರತದ ಹೊಸ ಭೂಪಟವನ್ನು ಬಿಡುಗಡೆ ಮಾಡಿದೆ. 2019ರ ಅಕ್ಟೋಬರ್​ 31ರಂದು ಈ ಎರಡು ಕೇಂದ್ರಾಡಳಿತ ಪ್ರದೇಶಗಳು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದ್ದವು.

ಭಾರತೀಯ ಸರ್ವೆ ಜನರಲ್​ ಬಿಡುಗಡೆ ಮಾಡಿರುವ ಹೊಸ ಭೂಪಟದಲ್ಲಿ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಮುಜಫರಾಬಾದ್​ ಮತ್ತು ಪಾಕ್​ ಆಕ್ರಮಿತ ಕಾಶ್ಮೀರದಲ್ಲಿರುವ ಮೀರ್​ಪುರ್​ ಜಿಲ್ಲೆಗಳು ಸೇರಿ ಒಟ್ಟು 22 ಜಿಲ್ಲೆಗಳನ್ನು ಹೊಂದಿದೆ. ಕಾರ್ಗಿಲ್​, ಲೇಹ್​, ಗಿಲ್ಗಿಟ್​, ಗಿಲ್ಗಿಟ್​ ವಜಾರತ್​, ಚಿಲ್ಹಾಸ್​, ಬುಡಕಟ್ಟು ಪ್ರದೇಶ ಲೇಹ್​ ಮತ್ತು ಲಡಾಕ್​ ಜಿಲ್ಲೆಗಳು ಲಡಾಕ್​ ಕೇಂದ್ರಾಡಳಿತ ಪ್ರದೇಶದಲ್ಲಿವೆ.

ಹೊಸ ಭೂಪಟದ ಪ್ರಕಾರ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಕಥುವಾ, ಜಮ್ಮು, ಸಾಂಬಾ, ಉಧಂಪುರ, ದೋಡಾ, ಕಿಶ್ತ್​ವಾರ್​, ರಾಜೋರಿ, ರೆಯಾಸಿ, ರಾಂಬನ್​, ಪೂಂಚ್​, ಕುಲ್ಗಾಂ, ಶೋಫಿಯಾನ್​, ಶ್ರೀನಗರ, ಅನಂತ್​ನಾಗ್​, ಬದ್ಗಾಂ, ಪುಲ್ವಾಮಾ, ಗಾಂದೇರ್​ಬಲ್​, ಬಂಡಿಪೋರಅ, ಬಾರಾಮುಲ್ಲಾ, ಕುಪ್ವಾರಾ, ಮೀರ್​ಪುರ್​ ಮತ್ತು ಮುಜಫರಾಬಾದ್​ ಜಿಲ್ಲೆಗಳನ್ನು ಒಳಗೊಂಡಿದೆ.

1947ರಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಕಥುವಾ, ಜಮ್ಮು, ಉಧಂಪುರ, ರೆಯಾಸಿ, ಅನಂತ್​ನಾಗ್​, ಬಾರಾಮುಲ್ಲಾ, ಪೂಂಚ್​, ಮೀರ್​ಪುರ್​, ಮುಜಫರಾಬಾದ್​, ಲೇಹ್​ ಮತ್ತು ಲಡಾಕ್​, ಗಿಲ್ಗಿಟ್​, ಗಿಲ್ಗಿಟ್​ ವಜಾರತ್​, ಚಿಲ್ಹಾಸ್​ ಮತ್ತು ಬುಡಕಟ್ಟು ಪ್ರದೇಶ ಎಂಬ 14 ಜಿಲ್ಲೆಗಳನ್ನು ಒಳಗೊಂಡಿತ್ತು. 2019ರಲ್ಲಿ ರಾಜ್ಯ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ 14 ಜಿಲ್ಲೆಗಳನ್ನು ಮರುವಿಂಗಡಣೆ ಮಾಡಿ, ಕುಪ್ವಾರಾ, ಬಂಡಿಪೋರಾ, ಗಾಂದೇರ್​ಬಲ್​, ಶ್ರೀನಗರ, ಬದ್ಗಾಂ, ಪುಲ್ವಾಮಾ, ಶೋಪಿಯಾನ್​, ಕುಲ್ಗಾಂ, ರಾಜೋರಿ, ರಾಮ್​ಬನ್​, ದೋಡಾ, ಕಿಶ್ತಿವಾರ್​, ಸಾಂಬಾ ಮತ್ತು ಕಾರ್ಗಿಲ್​ ರೂಪದಲ್ಲಿ ಜಿಲ್ಲೆಗಳ ಸಂಖ್ಯೆಯನ್ನು 28ಕ್ಕೆ ಹೆಚ್ಚಿಸಿತ್ತು. ಇವುಗಳ ಪೈಕಿ ಲೇಹ್​ ಮತ್ತು ಲಡಾಕ್​ ಜಿಲ್ಲೆಗಳನ್ನು ಮರುವಿಂಗಡಣೆ ಮಾಡಿ ಕಾರ್ಗಿಲ್​ ಜಿಲ್ಲೆಯನ್ನು ರಚಿಸಿತ್ತು. (ಏಜೆನ್ಸೀಸ್​)