ಜಟ್ರೋಫಾ ಇಂಧನ ಬಳಸಿ ಯಶಸ್ವಿ ವಿಮಾನ ಹಾರಾಟ

0
685

ಪರಿಸರಸ್ನೇಹಿ ಜೈವಿಕ ಇಂಧನವನ್ನು ಭಾಗಶಃ ಬಳಸಿದ ಭಾರತದ ಮೊಟ್ಟಮೊದಲ ವಿಮಾನ ಡೆಹರಾಡೂನ್‌ ಮತ್ತು ದಿಲ್ಲಿ ನಡುವೆ ಯಶಸ್ವಿಯಾಗಿ ಹಾರಾಟ ನಡೆಸುವ ಮೂಲಕ ಆಗಸ್ಟ್ 27 ರ ಸೋಮವಾರ ಇತಿಹಾಸ ಸೃಷ್ಟಿಸಿದೆ.

ಹೊಸದಿಲ್ಲಿ: ಪರಿಸರಸ್ನೇಹಿ ಜೈವಿಕ ಇಂಧನವನ್ನು ಭಾಗಶಃ ಬಳಸಿದ ಭಾರತದ ಮೊಟ್ಟಮೊದಲ ವಿಮಾನ ಡೆಹರಾಡೂನ್‌ ಮತ್ತು ದಿಲ್ಲಿ ನಡುವೆ ಯಶಸ್ವಿಯಾಗಿ ಹಾರಾಟ ನಡೆಸುವ ಮೂಲಕ ಆಗಸ್ಟ್ 27 ರ ಸೋಮವಾರ ಇತಿಹಾಸ ಸೃಷ್ಟಿಸಿದೆ.

ಸ್ಪೈಸ್‌ಜೆಟ್‌ನ ಬಾಂಬರ್ಡಿಯರ್‌ ಕ್ಯೂ400 ಎಂಬ ಹೆಸರಿನ, 78 ಸೀಟುಗಳ ವಿಮಾನವು ಶೇ.75 ವೈಮಾನಿಕ ಇಂಧನ (ಎಟಿಎಫ್‌) ಹಾಗೂ ಜಾಟ್ರೊಫಾ ಗಿಡದ ಬೀಜಗಳಿಂದ ತಯಾರಿಸಿದ ಶೇ.25 ಇಂಧನವನ್ನು ಮಿಶ್ರಣ ಮಾಡಿಕೊಂಡು ಯಶಸ್ವಿಯಾಗಿ ಸಂಚರಿಸಿತು. ವಿಮಾನಯಾನ ವಲಯದ ನಿಯಂತ್ರಕ ಡಿಜಿಸಿಎ ಅಧಿಕಾರಿಗಳು,
ಸ್ಪೈಸ್‌ಜೆಟ್‌  ಸಿಬ್ಬಂದಿ ಸೇರಿ 20 ಮಂದಿ ವಿಮಾನದಲ್ಲಿದ್ದರು. ದೇಶದಲ್ಲಿ ಇಂಥ ವಿಶಿಷ್ಟ ಪ್ರಯೋಗ ಇದೇ ಮೊದಲು. 

ಇದು ಪ್ರಾಯೋಗಿಕವಾಗಿದ್ದರೂ, ಜೈವಿಕ ಇಂಧನದ ವ್ಯಾಪಕ ಬಳಕೆಗೆ ಭಾರತ ದಾಪುಗಾಲಿಡುತ್ತಿರುವುದನ್ನು ಬಿಂಬಿಸಿದೆ. ಈ ಬಯೊಜೆಟ್‌ ಇಂಧನ ಬಳಕೆಯಿಂದ ಇಂಗಾಲದ ಮಾಲಿನ್ಯವನ್ನು ಶೇ.15ರಷ್ಟು ಇಳಿಕೆ ಮಾಡಬಹುದು. ”ಭವಿಷ್ಯದ ದಿನಗಳಲ್ಲಿ ಸಾಂಪ್ರದಾಯಿಕ ವೈಮಾನಿಕ ಇಂಧನದ ಮೇಲಿನ ಅವಲಂಬನೆಯನ್ನು ಶೇ.50ರಷ್ಟು ಇಳಿಸಲು, ದರವನ್ನು ತಗ್ಗಿಸಲು ಕೂಡ ಇದರಿಂದ ಸಾಧ್ಯ” ಎಂದು ಸ್ಪೈಸ್‌ ಜೆಟ್‌ ಸಿಎಂಡಿ ಅಜಯ್‌ ಸಿಂಗ್‌ ತಿಳಿಸಿದ್ದಾರೆ. 

ಜಾಟ್ರೊಫಾ ಎಣ್ಣೆಯ ಬಳಕೆಯಿಂದ ಇಂಧನ ದಕ್ಷತೆಯನ್ನೂ ಹೆಚ್ಚಿಸುತ್ತದೆ. ಡೆಹರಾಡೂನ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪೆಟ್ರೋಲಿಯಂ (ಐಐಪಿ) ಇದನ್ನು ಅಭಿವೃದ್ಧಿಪಡಿಸಿದೆ. ಅಮೆರಿಕನ್‌ ಸ್ಟ್ಯಾಂಡರ್ಡ್‌ ಟೆಸ್ಟಿಂಗ್‌ ಮೆಥೆಡ್‌ (ಎಎಸ್‌ಟಿಎಂ) ಅಡಿಯಲ್ಲಿ ಈ ಬಯೊಜೆಟ್‌ ಇಂಧನ ಮಾನ್ಯತೆ ಪಡೆದಿದೆ. 

ವಿಶೇಷ ನೀತಿ: ವೈಮಾನಿಕ ವಲಯದಲ್ಲಿ ಜೈವಿಕ ಇಂಧನ ಬಳಕೆ ಹೆಚ್ಚಿಸಲು ಸರಕಾರ ವಿಶೇಷ ನೀತಿ ಸಿದ್ಧಪಡಿಸಲಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಸ್ತಾಪ ಮಂಡಿಸಲಾಗುವುದು. ತೈಲ ಆಮದು ವೆಚ್ಚ ಇಳಿಕೆಗೆ ಇದು ಉಪಯುಕ್ತ ಎಂದರು. ಇದು ಗ್ರಾಹಕ-ಪರಿಸರಸ್ನೇಹಿ ಉಪಕ್ರಮ ಎಂದು ವಿಮಾನಯಾನ ಸಚಿವ ಸುರೇಶ್‌ ಪ್ರಭು ತಿಳಿಸಿದರು. ಇದು ತಂತ್ರಜ್ಞಾನದ ನೈಪುಣ್ಯತೆಯ ಪ್ರದರ್ಶನ ಎಂದು ಸ್ಪೈಸ್‌ಜೆಟ್‌ ಅಧ್ಯಕ್ಷ ಅಜಯ್‌ ಸಿಂಗ್‌ ಶ್ಲಾಘಿಸಿದ್ದಾರೆ. ಭಾರತದಲ್ಲಿ ಏರ್‌ಲೈನ್‌ಗಳಿಗೆ ಶೇ.50ರಷ್ಟು ವೆಚ್ಚ ಇಂಧನದ್ದೇ ಆಗಿದೆ. ಹೀಗಾಗಿ ಇದನ್ನು ತಗ್ಗಿಸಲು ಸಹಕಾರಿ. 

ಏನಿದು ಜಟ್ರೊಫಾ ಗಿಡ? 
ಜೈವಿಕ ಇಂಧನ ತಯಾರಿಕೆ ಎಂಬ ಕನಸು ವಾಸ್ತವಕ್ಕೆ ಕಾಲಿಡುವುದು ನಿಧಾನ ಎಂದು ಭಾವಿಸುತ್ತಿರುವ ದಿನಗಳಲ್ಲೇ, ಭಾರತ ವಿಶಿಷ್ಟ ಪ್ರಯೋಗದ ಮೂಲಕ ಮುಂದಡಿ ಇಟ್ಟಿದೆ. 
ಪೊದೆಯಂತೆ ಬೆಳೆಯುವ ಜಟ್ರೋಫಾ ಸಸ್ಯದ ಒಂದು ಗೊಂಚಲಲ್ಲಿ ಆರರಿಂದ ಎಂಟು ಕಾಯಿಗಳಿರುತ್ತವೆ. ಈ ರೀತಿಯ ಕಾಯಿಗಳನ್ನು ಒಣಗಿಸಿ, ಬೀಜಗಳಿಂದ ಎಣ್ಣೆ ತೆಗೆಯಲಾಗುತ್ತದೆ. 
ಒಣ ಹವೆಯ ಪ್ರದೇಶಗಳಲ್ಲಿ ಜಟ್ರೋಫಾ ಸಮೃದ್ಧ ಬೆಳೆಯುತ್ತದೆ. ಭಾರತದಲ್ಲಿ ಇಂತಹ ವಾತಾವರಣವಿರುವುದರಿಂದ ಈ ಬೆಳೆಗೆ ಹೇಳಿಮಾಡಿಸಿದ ಸ್ಥಳ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇದನ್ನು ಬೆಳೆಯಲಾಗುತ್ತಿದೆ. 

ಜಟ್ರೋಫಾ ಒಂದು ಕುರುಚಲುಗಿಡ. ಹಲವಾರು ಕೊಂಬೆಗಳಿರುತ್ತವೆ. ಇದು ಯುಫೋರ್ಬಿಯೇಸಿ ಸಸ್ಯ ಕುಟುಂಬಕ್ಕೆ ಸೇರಿದ ಗಿಡ. ಇದರ ಸಸ್ಯ ಶಾಸ್ತ್ರೀಯ ಹಸರು ‘ಜಟ್ರೋಫಾ ಕುರ್ಕಸ’. ಇದರಲ್ಲಿ ಹಲವಾರು ಪ್ರಭೇದಗಳಿವೆ. ಜಟ್ರೋಫಾ ಗಿಡದ ಉಗಮಸ್ಥಾನ ದಕ್ಷಿಣ ಅಮೇರಿಕ. ಸಾಗುವಳಿಗೆ ಅನಾನುಕುಲವಾದ ಭೂಮಿ ಇದ್ದರೂ ಇದನ್ನು ಬೆಳೆಯಬಹುದು. ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್‌, ರಾಜಸ್ಥಾನ, ಮಹಾರಾಷ್ಟ್ರದಲ್ಲಿ ಇದರ ಬೆಳೆಗೆ ಪೂರಕ ವಾತಾವರಣ ಇದೆ. 

ವೈಮಾನಿಕ ರಂಗದಲ್ಲಿ ಕ್ರಾಂತಿಕಾರಕ ಹೆಜ್ಜೆ ಇಟ್ಟ ಭಾರತ 
ಶೇ.75 ಎಟಿಎಫ್‌ ಹಾಗೂ ಶೇ.25 ಜಾಟ್ರೋಫಾ ಇಂಧನ ಬಳಸಿದ ಸ್ಪೈಸ್‌ಜೆಟ್‌, 
43 ನಿಮಿಷಗಳ ಕಾಲ ಹಾರಾಡಿದ ವಿಮಾನ, 
ಡೆಹರಾಡೂನ್‌-ದಿಲ್ಲಿ ನಡುವೆ ಹಾರಾಟ, 
ವಿಮಾನಗಳಲ್ಲಿ ಜೈವಿಕ ಇಂಧನ ಬಳಕೆಗೆ ಪ್ರತ್ಯೇಕ ನೀತಿ ರಚನೆ. 

ಪ್ರಯೋಜನವೇನು? 
# ಎಟಿಎಫ್‌ಗಿಂತ ಅಗ್ಗದ ಇಂಧನ, 
# ಎಂಜಿನ್‌ ದಕ್ಷತೆ ಹೆಚ್ಚಳಕ್ಕೂ ಸಹಕಾರಿ, 
# ಪರಿಸರಸ್ನೇಹಿ ಹಾಗೂ ರೈತರಿಗೆ ಆದಾಯ, 
# ಪ್ರತಿ ವಿಮಾನದಲ್ಲೂ ಶೇ.50ರ ತನಕ ಜೈವಿಕ ಇಂಧನ ಬಳಸಬಹುದು, 
# ವಿದೇಶಿ ವಿನಿಮಯದಲ್ಲಿ ಉಳಿತಾಯ, 
# ಪೆಟ್ರೋಲಿಯಂ ಉತ್ಪನ್ನಕ್ಕೆ ಪರ್ಯಾಯ, 
# ವಾಯು ಮಾಲಿನ್ಯ ನಿಯಂತ್ರಣ.