ಜಗತ್ತಿನ ಗಮನ ಸೆಳೆದ ಪುಟ್ಟ ಚಿಟವ! (ಬೀಳಗಿಯ ಕೃಷ್ಣೆಯ ಹಿನ್ನೀರಿಗೆ ಬಂದ ಆಸ್ಟ್ರೇಲಿಯಾದ ‘ಸೆಪ್’)

0
45

ಬೇಸಿಗೆಯಲ್ಲಿ ಹೆರಿಗೆ, ಬಾಣಂತನಕ್ಕೆಂದು ಇಲ್ಲಿನ ಆಲಮಟ್ಟಿ ಜಲಾಶಯದ ಕೃಷ್ಣೆಯ ಹಿನ್ನೀರಿಗೆ ಪ್ರತಿ ವರ್ಷ ದೇಶ–ವಿದೇಶದ ಸಾವಿರಾರು ಪಕ್ಷಿಗಳು ವಲಸೆ ಬರುತ್ತವೆ. ಆದರೆ ಈ ಬಾರಿ ಆಸ್ಟ್ರೇಲಿಯಾ ಉಪಖಂಡದಿಂದ ಹಾರಿ ಬಂದಿರುವ ‘ಸೆಪ್‌’ ಹೆಸರಿನ ಮೂಡಣದ ಚಿಟವ ಹಕ್ಕಿ (oriental prantincole) ಈಗ ಜಗತ್ತಿನ ಪಕ್ಷಿ ವೀಕ್ಷಕರ ಗಮನ ಸೆಳೆದಿದೆ.

ಬಾಗಲಕೋಟೆ: ಬೇಸಿಗೆಯಲ್ಲಿ ಹೆರಿಗೆ, ಬಾಣಂತನಕ್ಕೆಂದು ಇಲ್ಲಿನ ಆಲಮಟ್ಟಿ ಜಲಾಶಯದ ಕೃಷ್ಣೆಯ ಹಿನ್ನೀರಿಗೆ ಪ್ರತಿ ವರ್ಷ ದೇಶ–ವಿದೇಶದ ಸಾವಿರಾರು ಪಕ್ಷಿಗಳು ವಲಸೆ ಬರುತ್ತವೆ. ಆದರೆ ಈ ಬಾರಿ ಆಸ್ಟ್ರೇಲಿಯಾ ಉಪಖಂಡದಿಂದ ಹಾರಿ ಬಂದಿರುವ ‘ಸೆಪ್‌’ ಹೆಸರಿನ ಮೂಡಣದ ಚಿಟವ ಹಕ್ಕಿ (oriental prantincole) ಈಗ ಜಗತ್ತಿನ ಪಕ್ಷಿ ವೀಕ್ಷಕರ ಗಮನ ಸೆಳೆದಿದೆ.

ಸಾಮಾನ್ಯವಾಗಿ ವಲಸೆ ಹಕ್ಕಿಗಳು ಬೇಸಿಗೆಯಲ್ಲಿ ಉತ್ತರದಿಂದ ದಕ್ಷಿಣ ಧ್ರುವಕ್ಕೆ ಹಾರಿ ಬರುತ್ತವೆ. ಆದರೆ ಓರಿಯೆಂಟಲ್ ಪ್ರೆಂಟಿನ್‌ಕೋಲ್ ದಕ್ಷಿಣಾರ್ಧಗೋಳದಿಂದ ಉತ್ತರಾರ್ಧಗೋಳದಲ್ಲಿರುವ ದಕ್ಷಿಣಾಗ್ನೇಯ ಏಷ್ಯಾದ ರಾಷ್ಟ್ರಗಳತ್ತ ಬರುತ್ತದೆ. ಹಾಗಾಗಿ ಅವುಗಳ ಸಂತಾನೋತ್ಪತ್ತಿ ಪ್ರಕ್ರಿಯೆಯ ವೈಜ್ಞಾನಿಕ ಅಧ್ಯಯನಕ್ಕೆ ಆಸ್ಟ್ರೇಲಿಯಾದ ನದಿ ದಂಡೆಯಲ್ಲಿ ಓಡಾಡುವ ಪಕ್ಷಿಗಳ ಅಧ್ಯಯನಕಾರರ ಗುಂಪು (Australian wader studies Group-AWSG) ಮುಂದಾಗಿದೆ.

ಪಿಟಿಟಿಎಸ್ ಅಳವಡಿಕೆ:ಐದು ಪಕ್ಷಿಗಳನ್ನು ಆಯ್ಕೆ ಮಾಡಿಕೊಂಡು ಅವುಗಳಿಗೆ ಸನ್, ಸೆಪ್, ಷಿ, ಸೆಕ್ ಹಾಗೂ ಲಿಟಲ್ ಕರ್ಲಿ ಎಂದು ಹೆಸರಿಸಿದೆ. ಫೆಬ್ರುವರಿಯಲ್ಲಿ ಅವುಗಳ ಬೆನ್ನಿಗೆ ತಲಾ ಎರಡು ಗ್ರಾಂ ತೂಕದ ಪ್ಲಾಟ್‌ಫಾರ್ಮ್ ಟರ್ಮಿನಲ್ ಟ್ರಾನ್ಸ್‌ಮೀಟರ್‌ (ಪಿಟಿಟಿಎಸ್) ಅಳವಡಿಸಿದೆ. ಉಪಗ್ರಹ ಸಂಪರ್ಕ ಹೊಂದಿರುವ ಈ ಉಪಕರಣ, ಪಕ್ಷಿಯ ಚಲನವಲನದ ಪ್ರತಿ ಕ್ಷಣದ ಮಾಹಿತಿಯನ್ನು ಅಂತರ್ಜಾಲದ ಮೂಲಕ ಅಧ್ಯಯನಕಾರರ ಗುಂಪಿಗೆ ರವಾನಿಸುತ್ತದೆ.

ಐದು ಪಕ್ಷಿಗಳ ಪೈಕಿ ಸನ್ ಆಸ್ಟ್ರೇಲಿಯಾದಿಂದ 4,800 ಕಿ.ಮೀ ಕ್ರಮಿಸಿ ತೈವಾನ್‌ನ ಹುಯ್ಲೆನ್ (hualien) ಪ್ರಾಂತ್ಯದಲ್ಲಿ ನೆಲೆ ನಿಂತಿದೆ. ಷಿ, 4,000 ಕಿ.ಮೀ ಕ್ರಮಿಸಿ ಕಾಂಬೊಡಿಯಾದ ಟೊನ್ಲಿಸ್ಯಾಪ್ ಸರೋವರದಲ್ಲಿ ಬೀಡುಬಿಟ್ಟಿದೆ. ಸೆಕ್ ಕೂಡ 3,840 ಕಿ.ಮೀ ಸಾಗಿದ್ದು, ಕಾಂಬೊಡಿಯಾದಲ್ಲಿಯೇ ಇದೆ. ಆದರೆ ಲಿಟಲ್ ಕರ್ಲಿ ಆಸ್ಟ್ರೇಲಿಯಾದಿಂದ ಹೊರಟ ನಂತರ ಉಪಗ್ರಹ ಸಂಪರ್ಕಕ್ಕೆ ಸಿಕ್ಕಿಲ್ಲ. ಹಾಗಾಗಿ ಅದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಬೀಳಗಿಯತ್ತ ಸೆಪ್:ಉಳಿದ ಪಕ್ಷಿಗಳು ಆಸ್ಟ್ರೇಲಿಯಾದಿಂದ ಪೂರ್ವದತ್ತ ತೆರಳಿದರೆ ಸೆಪ್ ಮಾತ್ರ ಪಶ್ಚಿಮ ದಿಕ್ಕಿನಲ್ಲಿ ಸಾಗಿ ಬಂದಿದೆ. ಮೊದಲಿಗೆ ಇಂಡೊನೇಷ್ಯಾ, ಪೂರ್ವ ಮಲೇಷ್ಯಾ ಹಾಗೂ ಥಾಯ್ಲೆಂಡ್‌ಗೆ ಬಂದ ಸೆಪ್ ಅಲ್ಲಿ ಕೆಲಕಾಲ ತಂಗಿದೆ. ಕಳೆದ ತಿಂಗಳು ಒಡಿಶಾ ಕರಾವಳಿ ಪ್ರದೇಶಕ್ಕೆ ಬಂದು ವಿಶ್ರಮಿಸಿದೆ. ಅಲ್ಲಿಂದ ಒಳನಾಡಿನತ್ತ ಹಾರಿದ್ದು, ಏಪ್ರಿಲ್ 22ರಂದು ಬೀಳಗಿ ತಾಲ್ಲೂಕಿನ ಹೆಗ್ಗೂರು ಗ್ರಾಮದ ಬಳಿಯ ಕೃಷ್ಣೆಯ ಹಿನ್ನೀರಿನಲ್ಲಿ ಗೋಚರಿಸಿದೆ. ನಾಲ್ಕು ಪಕ್ಷಿಗಳ ಪೈಕಿ ಸೆಪ್‌ ಅತಿ ಹೆಚ್ಚು ದೂರ (6,350 ಕಿ.ಮೀ) ಕ್ರಮಿಸಿದೆ.

ಈ ಪಕ್ಷಿಗಳ ಚಲನವಲನದ ನಿರಂತರ ಮೇಲ್ವಿಚಾರಣೆ ನಡೆಸುತ್ತಿರುವ ಅಧ್ಯಯನಕಾರರ ಗುಂಪು ಪೂರ್ವಕ್ಕೆ ತೆರಳಿರುವ ಪಕ್ಷಿಗಳ ಬಗ್ಗೆ ಮಾಹಿತಿಗಾಗಿ ತೈವಾನ್‌ನ ತಜ್ಞರೊಂದಿಗೆ ಸಂಪರ್ಕದಲ್ಲಿದೆ.

ಕರ್ನಾಟಕಕ್ಕೆ ಬಂದಿರುವ ಸೆಪ್‌ ಬಗ್ಗೆ ಇಂಡಿಯನ್ ಬರ್ಡ್ ಕನ್ಸರ್ವೇಟರ್ಸ್ ನೆಟ್‌ವರ್ಕ್‌ (ಐಬಿಸಿಎನ್) ಜೊತೆ ಮಾಹಿತಿ ವಿನಿಮಯ ಮಾಡಿಕೊಂಡಿದೆ. ಐಬಿಸಿಎನ್ ಮನವಿ ಮೇರೆಗೆ ನಾರ್ತ್‌ ಕರ್ನಾಟಕ ಬರ್ಡರರ್ ನೆಟ್‌ವರ್ಕ್ (ಎನ್‌ಕೆಬಿಎನ್) ಕೂಡ ಈಗ ನಿಗಾ ವಹಿಸಿದೆ.

‘ಆಸ್ಟ್ರೇಲಿಯಾದಿಂದ ಪೂರ್ವ ಏಷ್ಯಾದ ವಲಸೆ ಮಹಾಮಾರ್ಗದ ಮೂಲಕ ಪ್ರತಿ ವರ್ಷ ಓರಿಯೆಂಟಲ್ ಪ್ರೆಂಟಿನ್‌ಕೋಲ್ ಭಾರತದತ್ತ ವಲಸೆ ಬರುತ್ತವೆ. ಆದರೂ ಕರ್ನಾಟಕದ ಪಕ್ಷಿಗಳ ಪಟ್ಟಿಯಲ್ಲಿ ಓರಿಯಂಟಲ್ ಸ್ಥಾನ ಪಡೆದಿರಲಿಲ್ಲ. 15 ವರ್ಷಗಳ ಹಿಂದೆ ಹೊಸಪೇಟೆಯ ತುಂಗಭದ್ರಾ ಹಿನ್ನೀರಿನಲ್ಲಿ ಮೊದಲ ಬಾರಿಗೆ ನಾನೇ ಗುರುತಿಸಿದ್ದೆ’ ಎಂದು ಎನ್‌ಕೆಬಿಎನ್ ಅಧ್ಯಕ್ಷ ಸಮದ್ ಕೊಟ್ಟೂರು ಹೇಳುತ್ತಾರೆ.

ಸ್ಥಳೀಯ ಬಾತುಕೋಳಿ ಬೇಟೆಗಾರರಿಂದ ಸೆಪ್‌ಗೆ ತೊಂದರೆ ಎದುರಾಗದಂತೆ ಕಾಳಜಿ ವಹಿಸಲು ಬೀಳಗಿ ವಲಯ ಅರಣ್ಯಾಧಿಕಾರಿಗೆ ಎನ್‌ಕೆಬಿಎನ್ ಪತ್ರ ಬರೆದು ಮನವಿ ಮಾಡಿಕೊಂಡಿದೆ.

ಆಸ್ಟ್ರೇಲಿಯಾದ ತಜ್ಞರು ಪಿಟಿಟಿಎಸ್ ಅಳವಡಿಸಿ ಅಧ್ಯಯನಕ್ಕೆ ಮುಂದಾಗಿರುವುದು ಜಗತ್ತಿನ ಗಮನ ಸೆಳೆದಿದೆ. ಹಾಗಾಗಿ ಸೆಪ್‌ನ ಮಟ್ಟಿಗೆ ಈ ಬಾರಿಯದ್ದು ಸ್ಮರಣೀಯ ಪಯಣ.

ಸಮದ್ ಕೊಟ್ಟೂರು, ಅಧ್ಯಕ್ಷ, ನಾರ್ತ್‌ ಕರ್ನಾಟಕ ಬರ್ಡರರ್ ನೆಟ್‌ವರ್ಕ್