ಜಗತ್ತಿನ ಅತಿ ಎತ್ತರದ ಶಿಖರ “ಮೌಂಟ್​ ಎವರೆಸ್ಟ್”​ನಲ್ಲಿ ಟ್ರಾಫಿಕ್​ ಜಾಮ್​!

0
97

ಜಗತ್ತಿನ ಅತಿ ಎತ್ತರದ ಶಿಖರ ಎಂದೇ ಖ್ಯಾತಿ ಗಳಿಸಿರುವ ಮೌಂಟ್​ ಎವರೆಸ್ಟ್​ ಅನ್ನು ಒಮ್ಮೆಯಾದರೂ ಏರಬೇಕು ಎಂಬುದು ಪ್ರತಿಯೊಬ್ಬ ಪರ್ವತಾರೋಹಿಯ ಕನಸು. ಪ್ರತಿ ವರ್ಷ ನೂರಾರು ಜನರು ಮೌಂಟ್​ ಎವರೆಸ್ಟ್​ ಶಿಖರ ಏರುತ್ತಾರೆ. ಆದರೆ, ಈ ವರ್ಷ ಶಿಖರ ಏರಲು ಆಗಮಿಸಿರುವ ಪರ್ವತಾರೋಹಿಗಳ ಸಂಖ್ಯೆ ಹೆಚ್ಚಿದ್ದು, ಶಿಖರದ ಮೇಲೆ ಟ್ರಾಫಿಕ್​ ಜಾಮ್​ ಉಂಟಾಗಿದೆ.

ಕಾಠ್ಮಂಡು: ಜಗತ್ತಿನ ಅತಿ ಎತ್ತರದ ಶಿಖರ ಎಂದೇ ಖ್ಯಾತಿ ಗಳಿಸಿರುವ ಮೌಂಟ್​ ಎವರೆಸ್ಟ್​ ಅನ್ನು ಒಮ್ಮೆಯಾದರೂ ಏರಬೇಕು ಎಂಬುದು ಪ್ರತಿಯೊಬ್ಬ ಪರ್ವತಾರೋಹಿಯ ಕನಸು. ಪ್ರತಿ ವರ್ಷ ನೂರಾರು ಜನರು ಮೌಂಟ್​ ಎವರೆಸ್ಟ್​ ಶಿಖರ ಏರುತ್ತಾರೆ. ಆದರೆ, ಈ ವರ್ಷ ಶಿಖರ ಏರಲು ಆಗಮಿಸಿರುವ ಪರ್ವತಾರೋಹಿಗಳ ಸಂಖ್ಯೆ ಹೆಚ್ಚಿದ್ದು, ಶಿಖರದ ಮೇಲೆ ಟ್ರಾಫಿಕ್​ ಜಾಮ್​ ಉಂಟಾಗಿದೆ.

ಪರ್ವತಾರೋಹಿ ನಿರ್ಮಲ್​ ಪುರ್ಜಾ ಎಂಬುವವರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಎವರೆಸ್ಟ್​ ಮೇಲೆ ಪರ್ವತಾರೋಹಿಗಳ ಟ್ರಾಫಿಕ್​ ಜಾಮ್​ ಉಂಟಾಗಿರುವ ಫೋಟೋ ಹಂಚಿಕೊಂಡಿದ್ದಾರೆ. ಅದರ ಜತೆಗೆ ನಾನು ಎರವರೆಸ್ಟ್​ ಶಿಖರ ಏರಿದ ಸಂದರ್ಭದಲ್ಲಿ ಅಲ್ಲಿ ಸುಮಾರು 320 ಪರ್ವತಾರೋಹಿಗಳು ಪರ್ವತ ಏರುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

ಎರಡು ದಾರಿ

ಎವರೆಸ್ಟ್‌ ಏರಲು ನೇಪಾಳ ಮತ್ತು ಚೀನಾದ ಕಡೆಯಿಂದ ಅವಕಾಶ ಇದೆ. ಚೀನಾ ಈಗ ಪರವಾನಗಿ ನೀಡಿಕೆಯನ್ನು ಮಿತಗೊಳಿಸಿದೆ. ಜತೆಗೆ, ಈ ಭಾಗದಿಂದ ಎವರೆಸ್ಟ್‌ ಏರುವುದು ಸುಲಭ. ಆದರೆ, ನೇಪಾಳ ಭಾಗದಿಂದ ಶಿಖರ ಏರುವುದು ಕಠಿಣ. ಹಾಗಾಗಿ ಈ ಭಾಗದಲ್ಲಿ ದಟ್ಟಣೆ ಹೆಚ್ಚು

ಶಿಖರದಲ್ಲಿ ಸರತಿ ಸಾಲು

ಈ ವರ್ಷ ಎವರೆಸ್ಟ್‌ ಏರಲು ನೇಪಾಳ ಸರ್ಕಾರವು 381 ಮಂದಿಗೆ ಪರವಾನಗಿ ನೀಡಿದೆ. 1953ರಲ್ಲಿ ತೇನ್‌ಸಿಂಗ್‌ ನೋರ್ಗೆ ಮತ್ತು ಎಡ್ಮಂಡ್‌ ಹಿಲರಿ ಅವರು ಮೊತ್ತ ಮೊದಲಿಗೆ ಶಿಖರ ತಲುಪಿದ ಬಳಿಕ ಎಂದೂ ಇಷ್ಟೊಂದು ಮಂದಿಗೆ ಪರವಾನಗಿ ನೀಡಿರಲಿಲ್ಲ. 44 ತಂಡಗಳು ಈ ಬಾರಿ ಎವರೆಸ್ಟ್‌ ಏರುವ ಯತ್ನ ನಡೆಸಿವೆ. ಈ ತಂಡಗಳ ಜತೆಗೆ ಸಹಾಯಕರಾಗಿ 500ಕ್ಕೂ ಹೆಚ್ಚು ಶೆರ್ಪಾಗಳೂ ಇರುತ್ತಾರೆ. ಕಳೆದ ವರ್ಷ 346 ಮಂದಿಗೆ ಪರವಾನಗಿ ನೀಡಲಾಗಿತ್ತು.

ಮೌಂಟ್​ ಎವರೆಸ್ಟ್​ ಶಿಖರದ ಮೇಲೆ ಪರ್ವತಾರೋಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿರುವುದರಿಂದ ಪರ್ವತ ಏರುವುದು ಸವಾಲಿನ ಕೆಲಸವಾಗಿ ಪರಿಣಮಿಸಿದ್ದು, ಈ ವರ್ಷ ಶಿಖರದಲ್ಲಿ ಸತ್ತವರ ಸಂಖ್ಯೆ 17. ಕಳೆದೊಂದು ದಶಕದಲ್ಲಿಯೇ ಇದು ಗರಿಷ್ಠ ಸಂಖ್ಯೆಯಾಗಿದೆ. ಸತ್ತವರಲ್ಲಿ ನಾಲ್ವರು ಭಾರತೀಯರು ಸೇರಿದ್ದಾರೆ. ಅಮೆರಿಕ, ಐರ್ಲೆಂಡ್‌ ಮತ್ತು ಬ್ರಿಟನ್‌ನ ತಲಾ ಇಬ್ಬರು ಕೂಡ ಮೃತಪಟ್ಟಿದ್ದಾರೆ. ಹೆಚ್ಚಿನವರು ಕಳೆದ ಬುಧವಾರ ಮತ್ತು ಗುರುವಾರ ಮೃತಪಟ್ಟರು. ಈ ಸಂದರ್ಭದಲ್ಲಿ ಭಾರಿ ಜನ ದಟ್ಟಣೆ ಉಂಟಾಗಿತ್ತು

ಆರೋಹಣ ಅವಧಿ

ಆರನೇ ಶಿಬಿರ ತಲುಪಿದ ಬಳಿಕ ಪರ್ವತಾರೋಹಿಗಳು ಶಿಖರದತ್ತ ಏರಲು ಸ್ಥಿರ ಹವಾಮಾನವನ್ನು ಕಾಯಬೇಕು. ಪರ್ವತದ ಶಿಖರ ಪ್ರದೇಶದಲ್ಲಿ ಸದಾ ಸುಳಿಗಾಳಿ ಬೀಸುತ್ತಿರುತ್ತದೆ. ಈ ಗಾಳಿ ಇಲ್ಲದ ಅವಧಿಯನ್ನು ಆರೋಹಣ ಅವಧಿ ಅಥವಾ ‘ವಿಂಡೊ’ ಎಂದು ಪರಿಗಣಿಸಲಾಗುತ್ತದೆ. ಬಂಗಾಳ ಕೊಲ್ಲಿಯಲ್ಲಿ ಮುಂಗಾರು ಮಾರುತವು ಉತ್ತರದತ್ತ ಚಲಿಸಲು ಆರಂಭಿಸಿದಾಗ ಎವರೆಸ್ಟ್‌ನ ಮೇಲ್ತುದಿಯಲ್ಲಿ ಹವಾಮಾನ ಸ್ಥಿರವಾಗಿರುತ್ತದೆ. ಸಾಮಾನ್ಯವಾಗಿ ಮೇ ತಿಂಗಳ ಮೂರು ಅಥವಾ ನಾಲ್ಕನೇ ವಾರದಲ್ಲಿ ಸುಮಾರು ಒಂದು ವಾರ ಇಂತಹ ವಾತಾವರಣ ಸೃಷ್ಟಿಯಾಗುತ್ತದೆ. ಒಂದೊಂದು ಸಲ ವಿಂಡೊ ಅವಧಿ ಎರಡು ಮೂರು ದಿನಗಳಿಗೆ ಸೀಮಿತವಾಗುತ್ತದೆ.  ಏಪ್ರಿಲ್‌ನಿಂದ ಆರಂಭವಾಗುವ ಆರೋಹಣ ಋತು ಮೇ 30ರ ಹೊತ್ತಿಗೆ ಪೂರ್ಣಗೊಳ್ಳುತ್ತದೆ.