ಛತ್ತೀಸ್ ಗಡಕ್ಕೆ ಭೂಪೇಶ್ ಬಘೇಲ್ ನೂತನ ಮುಖ್ಯಮಂತ್ರಿ

0
782

ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾದ ವಾರದ ಬಳಿಕ ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಭೂಪೇಶ್ ಬಾಗೇಲಾ ಅವರು ಆಯ್ಕೆಯಾಗಿದ್ದಾರೆ.

ರಾಯ್‌ಪುರ: ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾದ ವಾರದ ಬಳಿಕ ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಭೂಪೇಶ್ ಬಾಗೇಲಾ ಅವರು ಆಯ್ಕೆಯಾಗಿದ್ದಾರೆ.

ಡಿಸೆಂಬರ್ 16 ರ ಭಾನುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಾಗೇಲಾ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಲಾಗಿದೆ.

ಮುಖ್ಯಮಂತ್ರಿ ಸ್ಥಾನಕ್ಕೆ ರೇಸ್‌ನಲ್ಲಿದ್ದ ಅಂಬಿಕಾಪುರದ ಶಾಸಕ ಟಿ.ಎಸ್.ಸಿಂಗ್ ದೇವ್, ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಮುಖ್ಯಸ್ಥ ತಾಮ್ರಧ್ವಜ್ ಸಿಂಗ್‌ ಮತ್ತು ಮಾಜಿ ಕೇಂದ್ರ ಸಚಿವ ಚರಣ್​ದಾಸ್ ಮಹಂತ್‌ರನ್ನು ಹಿಂದಿಕ್ಕಿ ಹಿರಿಯ ನಾಯಕ ಭೂಪೇಶ್‌ ಬಾಗೇಲಾ ಅವರಿಗೆ ಪಕ್ಷ ಮಣೆ ಹಾಕಿದೆ.

ಪ್ರಭಾವೀ ಕುರ್ಮಿ ಜನಾಂಗದ (ಇತರ ಹಿಂದುಳಿದ ವರ್ಗ) ನಾಯಕರಾಗಿರುವ ಬಘೇಲ್ (57) ಬಲಿಷ್ಠ ನಾಯಕತ್ವ ಗುಣ ಹೊಂದಿದವರು. ರಾಜ್ಯದಲ್ಲಿ ಸುಮಾರು 2.5 ಕೋಟಿ ಜನಸಂಖ್ಯೆಯ ಸಮುದಾಯದ ನಾಯಕರಾಗಿ ಹೊರಹೊಮ್ಮಿರುವ ಅವರು, ಪಕ್ಷಕ್ಕೆ ಪುನಶ್ಚೇತನ ನೀಡುವುದರೊಂದಿಗೆ ಮುಖ್ಯಮಂತ್ರಿ ಗಾದಿಗೇರಿದ್ದಾರೆ. 

2014ರ ಅಕ್ಟೋಬರ್‌ನಲ್ಲಿ ಪಕ್ಷದ ನಾಯಕತ್ವ ವಹಿಸಿಕೊಂಡ ಅವರು, ಹೊಸದಾಗಿ ಸಂಘಟನೆ ಕಾರ್ಯ ಆರಂಭಿಸಿದರು. 2013ರ ಮೇ ತಿಂಗಳಲ್ಲಿ ನಡೆದ ಭೀಕರ ನಕ್ಸಲ್ ದಾಳಿಯಲ್ಲಿ ಪಕ್ಷದ ಹಿರಿಯ ನಾಯಕರಾಗಿದ್ದ ವಿ.ಸಿ ಶುಕ್ಲ ಮತ್ತು ಪಕ್ಷಾಧ್ಯಕ್ಷ ನಂದಕುಮಾರ್ ಪಟೇಲ್‌ ಸೇರಿದಂತೆ ಹಲವಾರು ಹಿರಿಯ ನಾಯಕರು ಮೃತಪಟ್ಟಿದ್ದರು. ಹೀಗೆ ನಾಯಕರನ್ನೆಲ್ಲ ಕಳೆದುಕೊಂಡು ಸೊರಗಿದ್ದ ರಾಜ್ಯ ಕಾಂಗ್ರೆಸ್ ಅನ್ನು ತಳಮಟ್ಟದಿಂದ ಸಂಘಟಿಸಿ ಪುನಶ್ಚೇತನಗೊಳಿಸಿದವರು ಬಘೇಲ್. 

2000ನೇ ಇಸವಿಯಲ್ಲಿ  ಛತ್ತೀಸ್‌ಗಢ ರಾಜ್ಯ ರಚನೆಯಾದ ಬಳಿಕ ಅಜಿತ್ ಜೋಗಿ ಸರಕಾರದಲ್ಲಿ (2000-2003) ಮೂರು ವರ್ಷ ಕಂದಾಯ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು.