ಚೆನ್ನೈನಲ್ಲಿ ತೀವ್ರಗೊಂಡ ನೀರಿನ ಅಭಾವ: ರಾಜಧಾನಿ ತಲುಪಿದ 25 ಲಕ್ಷ ಲೀ. ನೀರಿನ ಟ್ರೈನ್​

0
30

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನೀರಿನ ಅಭಾವ ತೀವ್ರಗೊಂಡಿದ್ದು, ತಮಿಳುನಾಡು ಸರ್ಕಾರ ಟ್ರೈನ್​ ಮೂಲಕ ನೀರು ಸರಬರಾಜು ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ 25 ಲಕ್ಷ ಲೀ. ನೀರು ಹೊತ್ತ ರೈಲು ಚೆನ್ನೈ ತಲುಪಿದೆ.

ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನೀರಿನ ಅಭಾವ ತೀವ್ರಗೊಂಡಿದ್ದು, ತಮಿಳುನಾಡು ಸರ್ಕಾರ ಟ್ರೈನ್​ ಮೂಲಕ ನೀರು ಸರಬರಾಜು ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ 25 ಲಕ್ಷ ಲೀ. ನೀರು ಹೊತ್ತ ರೈಲು ಚೆನ್ನೈ ತಲುಪಿದೆ.

ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಜೋಲಾರ್​ಪೇಟ್​ನಿಂದ 50 ಟ್ಯಾಂಕರ್​ಗಳಲ್ಲಿ 25 ಲಕ್ಷ ಲೀ. ನೀರನ್ನು ತುಂಬಿಸಿಕೊಂಡು ಜುಲೈ 12 ರ ಶುಕ್ರವಾರ ಮಧ್ಯಾಹ್ನ ಚೆನ್ನೈಗೆ ತರಲಾಗಿದೆ. ಈ ನೀರನ್ನು ಶುದ್ಧೀಕರಿಸಿದ ನಂತರ ನೀರನ್ನು ಲಾರಿಗಳಲ್ಲಿ ತುಂಬಿ ಜನರಿಗೆ ತಲುಪಿಸಲಾಗುವುದು. ಈ ವ್ಯವಸ್ಥೆ ಮುಂದಿನ 6 ತಿಂಗಳವರೆಗೆ ಮುಂದುವರಿಯಲಿದೆ. ಮಳೆ ಬಂದು ಜಲಮೂಲಗಳು ಭರ್ತಿಯಾದ ನಂತರ ರೈಲಿನ ಮೂಲಕ ನೀರು ತರುವುದನ್ನು ನಿಲ್ಲಿಸಲಾಗುವುದು ಎಂದು ಚೆನ್ನೈ ಜಲಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈಗೆ ನೀರು ಸರಬರಾಜು ಮಾಡುವ 4 ಕೆರೆಗಳು ಬತ್ತಿ ಹೋಗಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಚೆನ್ನೈನಲ್ಲಿ ನೀರಿನ ಅಭಾವ ಉಂಟಾಗಿದೆ. ಪ್ರತಿ ದಿನ 20 ಕೋಟಿ ಲೀ. ನೀರಿನ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಟ್ಯಾಂಕರ್​ಗಳ ಮೂಲಕ ನೀರು ಸರಬರಾಜು ಮಾಡುತ್ತಿದೆ.

ಈ ಮೊದಲು 2016 ರಲ್ಲಿ ಮಹಾರಾಷ್ಟ್ರದ ಲಾತೂರ್​ ಜಿಲ್ಲೆಯಲ್ಲಿ ಭೀಕರ ಬರ ಕಾಣಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರ ಮೀರಜ್​ನಿಂದ ಲಾತೂರ್​ಗೆ ರೈಲಿನ ಮೂಲಕ ನೀರು ಸರಬರಾಜು ಮಾಡಿತ್ತು. (ಏಜೆನ್ಸೀಸ್​)