ಚೀನಾ ಸೈಬರ್ ಸೇನೆ ಸಿದ್ಧ : ಭಾರತದ ಕೇಂದ್ರ ಗುಪ್ತಚರ ಸಂಸ್ಥೆಯ ಎಚ್ಚರಿಕೆ

0
399

ಭಾರತೀಯ ಸೇನೆಯ ಮಾಹಿತಿ ಕದಿಯಲು ಚೀನಾ ಸೈಬರ್ ಕುತಂತ್ರಕ್ಕೆ ಮುಂದಾಗಿದ್ದು, ಇದಕ್ಕಾಗಿಯೇ ವಿಶೇಷ ವಿಭಾಗ ಆರಂಭಿಸಿದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆ ಎಚ್ಚರಿಸಿದೆ.

ನವದೆಹಲಿ: ಭಾರತೀಯ ಸೇನೆಯ ಮಾಹಿತಿ ಕದಿಯಲು ಚೀನಾ ಸೈಬರ್ ಕುತಂತ್ರಕ್ಕೆ ಮುಂದಾಗಿದ್ದು, ಇದಕ್ಕಾಗಿಯೇ ವಿಶೇಷ ವಿಭಾಗ ಆರಂಭಿಸಿದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆ ಎಚ್ಚರಿಸಿದೆ.

ಚೀನಾದ ಪೀಪಲ್ಸ್ ಲಿಬರೇಷನ್ ಆರ್ವಿುಯ ಯುನಿಟ್-61398ನ್ನು ಸೈಬರ್ ಯುದ್ಧಕ್ಕಾಗಿ ಮೀಸಲಿಡಲಾಗಿದೆ. ತಾಂತ್ರಿಕ ಹಿನ್ನೆಲೆ ಹೊಂದಿರುವ ಯೋಧರು ಹಾಗೂ ಹ್ಯಾಕರ್​ಗಳು ಈ ತಂಡದಲ್ಲಿದ್ದಾರೆ. ಶತ್ರು ರಾಷ್ಟ್ರಗಳ ಸೇನೆ ಹಾಗೂ ಪ್ರಮುಖ ಸಂಸ್ಥೆಗಳ ಸೂಕ್ಷ್ಮ ಮಾಹಿತಿ ಕದಿಯುವುದು ಈ ಸೈಬರ್ ತಂಡದ ಕಾಯಕವಾಗಿದೆ.

ಗುಪ್ತಚರ ಸಂಸ್ಥೆಯ ವರದಿ ಪ್ರಕಾರ, ಚೀನಾ ಸರ್ಕಾರದ ಕೇಂದ್ರ ಕಚೇರಿ ಇರುವ ಶಾಂಘೈನಲ್ಲಿ ಈ ಸೈಬರ್ ತಂಡದ ಕಚೇರಿಯಿದೆ. ಚೀನಾದ ಭದ್ರತಾ ಇಲಾಖೆ ಹಾಗೂ ಗುಪ್ತಚರ ದಳಕ್ಕೆ ನೇರವಾಗಿ ಈ ತಂಡ ವರದಿ ನೀಡುತ್ತದೆ.

ಐಸ್​ಬಗ್, ಟ್ರೋಜಾನ್, ಲಿನಕ್ಸ್ ಹಾಗೂ ಎಪಿಟಿ ಮಾಲ್​ವೇರ್​ಗಳ ಮೂಲಕ ಮಾಹಿತಿ ಕದಿಯಲಾಗುತ್ತಿದೆ. ಭಾರತ ಸೇರಿ ಇತರ ರಾಷ್ಟ್ರಗಳ ಸೇನೆಯ ಸೂಕ್ಷ್ಮ ಮಾಹಿತಿಗಳ ಜತೆಗೆ ಗುಪ್ತಚರ ಇಲಾಖೆ ವರದಿ, ಕೈಗಾರಿಕೆ ಹಾಗೂ ಭದ್ರತಾ ಸಂಶೋಧನೆಗಳ ಮಾಹಿತಿಗೆ ಕನ್ನ ಹಾಕಲು ಚೀನಾ ಹವಣಿಸುತ್ತಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಅಮೆರಿಕದ ಜೆಟ್ ವಿಮಾನಗಳ ಎಂಜಿನ್ ಸೇರಿ ಇತರ ಸಂಶೋಧನಾ ಮಾಹಿತಿಯನ್ನು ಚೀನಾ ಕದಿಯುತ್ತಿದೆ ಎಂದು ಆರೋಪಿಸಿ ಅಮೆರಿಕ ಈಗಾಗಲೇ ಕಾನೂನು ಹೋರಾಟ ಆರಂಭಿಸಿದೆ.