ಚೀನಾ ಜತೆಗಿನ ಎಫ್‌ಟಿಎ ರದ್ದು: ಮಾಲ್ಡೀವ್ಸ್‌ನ ನೂತನ ಸರಕಾರ ಘೋಷಣೆ

0
229

ಚೀನಾದ ಜತೆ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ವನ್ನು ಮಾಲ್ಡೀವ್ಸ್‌ನ ನೂತನ ಸರಕಾರ ರದ್ದುಪಡಿಸುವುದಾಗಿ ಪ್ರಕಟಿಸಿದೆ. ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶದ ಜತೆಗೆ ತಮ್ಮ ಪುಟ್ಟ ದೇಶ ಇಂತಹದೊಂದು ಒಪ್ಪಂದ ಮಾಡಿಕೊಂಡಿದ್ದು ಬಹುದೊಡ್ಡ ಪ್ರಮಾದ ಎಂದು ಆಡಳಿತಾರೂಢ ಮೈತ್ರಿಕೂಟ ತಿಳಿಸಿದೆ.

ಮಾಲೆ: ಚೀನಾದ ಜತೆ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ವನ್ನು ಮಾಲ್ಡೀವ್ಸ್‌ನ ನೂತನ ಸರಕಾರ ರದ್ದುಪಡಿಸುವುದಾಗಿ ಪ್ರಕಟಿಸಿದೆ. ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶದ ಜತೆಗೆ ತಮ್ಮ ಪುಟ್ಟ ದೇಶ ಇಂತಹದೊಂದು ಒಪ್ಪಂದ ಮಾಡಿಕೊಂಡಿದ್ದು ಬಹುದೊಡ್ಡ ಪ್ರಮಾದ ಎಂದು ಆಡಳಿತಾರೂಢ ಮೈತ್ರಿಕೂಟ ತಿಳಿಸಿದೆ. 
ಐಷಾರಾಮಿ ರೆಸಾರ್ಟ್‌ಗಳನ್ನು ಹೊಂದಿರುವ ಹವಳ ದ್ವೀಪಗಳ ಸಮೂಹವಾದ ಮಾಲ್ಡೀವ್ಸ್‌ನಲ್ಲಿ ಚೀನಾಗೆ ಹಿನ್ನಡೆಯಾಗುತ್ತಿರುವ ಸಂಕೇತ ಇದಾಗಿದೆ. 

‘ಚೀನಾಮತ್ತು ಮಾಲ್ಡೀವ್ಸ್‌ ನಡಿವಣ ವ್ಯಾಪಾರ ಅಸಮತೋಲನ ಅಗಾಧವಾಗಿದ್ದು, ಅಂತಹ ಸನ್ನಿವೇಶದಲ್ಲಿ ಉಭಯ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದವನ್ನು ಊಹಿಸಲೂ ಆಗದು’ ಎಂದು ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿಯ ಮುಖ್ಯಸ್ಥ ಮೊಹಮ್ಮದ್ ನಶೀದ್‌ ಹೇಳಿದ್ದಾರೆ. 

‘ಚೀನಾ ನಮ್ಮ ದೇಶದಿಂದ ಏನನ್ನೂ ಖರೀದಿಸುತ್ತಿಲ್ಲ. ಈ ಒಪ್ಪಂದ ಸಂಪೂರ್ಣ ಏಕಪಕ್ಷೀಯವಾಗಿದ್ದು ಚೀನಾಗೆ ಮಾತ್ರ ಲಾಭದಾಯಕವಾಗಿದೆ’ ಎಂದು ಅವರು ತಿಳಿಸಿದರು. 

ನೂತನ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್‌ ಶನಿವಾರ ಸ್ವೀಕರಿಸುತ್ತಿದ್ದಂತೆಯೇ, ದೇಶದ್ರೋಹಿಗಳು ದೇಶವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಚೀನೀ ಬ್ಯಾಂಕುಗಳಿಂದ ಮಾಲ್ಡೀವ್ಸ್‌ ಪಡೆದ ಸಾಲದ ಹೊರೆಯೇ ಮಿತಿಮೀರಿದ್ದು, ಇನ್ನು ಹೊರಲಾಗದು ಎಂದು ಎಚ್ಚರಿಸಿದ್ದರು. 

ಸೆಪ್ಟೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಕಳೆದ ಡಿಸೆಂಬರ್‌ನಲ್ಲಿ ಬೀಜಿಂಗ್‌ನಲ್ಲಿ ಚೀನಾದ ಜತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದರು. ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಸಂಸತ್ತಿನಲ್ಲಿ ಒಪ್ಪಂದಕ್ಕೆ ಅನುಮೋದನೆ ಗಿಟ್ಟಿಸಿಕೊಂಡಿದ್ದರು. 1,000ಕ್ಕೂ ಅಧಿಕ ಪುಟಗಳ ಒಪ್ಪಂದದ ದಾಖಲೆ ಪತ್ರಕ್ಕೆ ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ ಯಾವುದೇ ಚರ್ಚೆ ಇಲ್ಲದೆ ಸಂಸತ್ತಿನ ಅಂಗೀಕಾರಮುದ್ರೆ ಹಾಕಿಸಿಕೊಂಡಿದ್ದರು. 

ಮಾಜಿ ಅಧ್ಯಕ್ಷ ನಶೀದ್‌ ಈಗ ನೂತನ ಅಧ್ಯಕ್ಷ ಸೋಲಿಹ್ ಅವರಿಗೆ ಸಲಹೆಗಾರರಾಗಿದ್ದಾರೆ. ಚೀನಾ ಜತೆಗಿನ ಎಫ್‌ಟಿಎ ರದ್ದುಪಡಿಸಲು ಸೂಕ್ತ ಕಾನೂನು ತಿದ್ದುಪಡಿಗಳನ್ನು ಸಂಸತ್ತು ಅಂಗೀಕರಿಸಲಿದೆ ಎಂದು ನಶೀದ್ ತಿಳಿಸಿದರು. 

‘ಅದನ್ನು ಸಂಸತ್ತು ಅನುಮೋದಿಸಿದ್ದರೂ ಹಲವು ಕಾಯ್ದೆಗಳ ಕಟ್ಟುಪಾಡಿಗೆ ಒಳಪಟ್ಟಿರುವುದು ನಮ್ಮ ಅದೃಷ್ಟ. ಈಗ ನಾವು ಆ ಒಪ್ಪಂದವನ್ನು ರದ್ದುಪಡಿಸುತ್ತೇವೆ’ ಎಂದು ರಾಜಧಾನಿ ಮಾಲೆಯಲ್ಲಿ ರಾಯ್ಟರ್ಸ್‌ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ನಶೀದ್ ತಿಳಿಸಿದರು. 

ಚೀನಾ ಮೌನ: 
ವ್ಯಾಪಾರ ಒಪ್ಪಂದ ರದ್ದತಿ ಕುರಿತು ಮಾಲೆಯಲ್ಲಿ ಇರುವ ಚೀನೀ ದೂತಾವಾಸ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.