ಚೀನಾದ “ಲಾಸಾ ವಿಮಾನ ನಿಲ್ದಾಣ” ವಾಯುನೆಲೆಯಾಗಿ ಪರಿವರ್ತನೆ

0
638

ಭಾರತದ ರಾಜಧಾನಿ ಹೊಸದಿಲ್ಲಿಯಿಂದ ಕೇವಲ 1,350 ಕಿ.ಮೀ. ದೂರದಲ್ಲಿರುವ ಲಾಸಾ ಗಾಂಗರ್‌ ವಿಮಾನ ನಿಲ್ದಾಣವನ್ನು ಚೀನಾ ಸೇನಾ ನೆಲೆಯಾಗಿ ಪರಿವರ್ತಿಸಿದೆ.

ಬೀಜಿಂಗ್‌: ಭಾರತದ ರಾಜಧಾನಿ ಹೊಸದಿಲ್ಲಿಯಿಂದ ಕೇವಲ 1,350 ಕಿ.ಮೀ. ದೂರದಲ್ಲಿರುವ ಲಾಸಾ ಗಾಂಗರ್‌ ವಿಮಾನ ನಿಲ್ದಾಣವನ್ನು ಚೀನಾ ಸೇನಾ ನೆಲೆಯಾಗಿ ಪರಿವರ್ತಿಸಿದೆ. 

ಟಿಬೆಟ್‌ ಸ್ವಾಯತ್ತ ಪ್ರದೇಶದಲ್ಲಿರುವ ವಿಮಾನ ನಿಲ್ದಾಣದ ಸಮೀಪದಲ್ಲಿಯೇ ಚೀನಾದ ಪೀಪಲ್ಸ್‌ ಲಿಬರೇಶನ್‌ ಆರ್ಮಿಯು ಬಾಂಬ್‌ ನಿರೋಧಕ ತಾಣವನ್ನು ನಿರ್ಮಿಸಿದೆ. ವಿಮಾನ ನಿಲ್ದಾಣದಿಂದ ಅಲ್ಲಿಯವರೆಗೆ ‘ಟ್ಯಾಕ್ಸಿ ಟ್ರ್ಯಾಕ್‌’ ಸಹ ನಿರ್ಮಿಸಿದೆ. ಈ ತಾಣದಲ್ಲಿ ವಾಯುಪಡೆಯ ಮೂರು ತುಕಡಿಗಳ 36 ಯುದ್ಧವಿಮಾನಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ಅವುಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಂಡಳಿ ಸದಸ್ಯ ಎಸ್‌.ಎಲ್‌.ನರಸಿಂಹನ್‌ ಅವರು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ. 

ಅರುಣಾಚಲ ಪ್ರದೇಶದಲ್ಲಿರುವ ಚೀನಾ ಗಡಿ ಸಮೀಪ ಭಾರತವು ತನ್ನ ವಾಯುನೆಲೆಯನ್ನು ಮೇಲ್ದರ್ಜೆಗೆ ಏರಿಸಿದೆ. ಇನ್ನೂ ಮೂರು ಕಡೆ ವಾಯುನೆಲೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದಕ್ಕೆ ಉತ್ತರ ನೀಡಲೆಂದೇ ಚೀನಾ ಸಹ ಲಾಸಾ ವಿಮಾನ ನಿಲ್ದಾಣದಲ್ಲಿ ವಾಯುನೆಲೆ ನಿರ್ಮಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇತ್ತೀಚೆಗೆ ನಡೆದ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ, ಪಾಕಿಸ್ತಾನದ ಉಗ್ರ ಅಜರ್‌ ಮಸೂದ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆ ಮಾಡುವ ಭಾರತದ ಪ್ರಯತ್ನಕ್ಕೆ ಚೀನಾ ತಡೆ ಒಡ್ಡಿತ್ತಲ್ಲದೇ ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತು.