ಚೀನಾದಿಂದ ವಿಶ್ವದ ಅತಿ ಉದ್ದದ ಸೇತುವೆ

0
1064

ನಿರ್ಮಾಣ ಕ್ಷೇತ್ರದಲ್ಲಿ ಅತ್ಯುತ್ತಮ ತಂತ್ರಜ್ಞಾನ ಹೊಂದಿರುವ ಚೀನಾ, ಪರ್ಲ್ ರಿವರ್ ಡೆಲ್ಟಾ ಸಮುದ್ರ ಮಾರ್ಗದಲ್ಲಿ ವಿಶ್ವದ ಅತಿ ಉದ್ದದ ಸೇತುವೆ ನಿರ್ವಿುಸಿದೆ. ಹಾಂಕಾಂಗ್-ಝುುಹಾಯ್-ಮಕಾವ್ ನಡುವಿನ ಸೇತುವೆಯನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅ. 24ರಂದು ಉದ್ಘಾಟಿಸಲಿದ್ದಾರೆ. 2009ರ ಡಿಸೆಂಬರ್ 15ರಂದು ಇದರ ನಿರ್ಮಾಣ ಆರಂಭವಾಗಿತ್ತು. 2017ರಲ್ಲೇ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ, ವಿವಿಧ ಕಾರಣಗಳಿಂದಾಗಿ ಉದ್ಘಾಟನೆ ವಿಳಂಬಗೊಂಡಿತ್ತು.

120 ವರ್ಷ ಬಾಳಿಕೆ

ಗಂಟೆಗೆ 360 ಕಿ.ಮೀ. ವೇಗದ ಚಂಡಮಾರುತ ಅಪ್ಪಳಿಸಿದರೂ ಈ ಸೇತುವೆ ಜಗ್ಗುವುದಿಲ್ಲ. ಸೇತುವೆ ನಿರ್ವಹಣಾ ವೆಚ್ಚವೂ ಕಡಿಮೆ ಇರಲಿದೆ. 120 ವರ್ಷ ಬಾಳಿಕೆ ಬರುತ್ತದೆ ಎಂದು ಸೇತುವೆಯ ಮುಖ್ಯ ವಿನ್ಯಾಸಕಾರ ಮೆಂಗ್ ಫ್ಯಾನ್​ಚಾವ್ ತಿಳಿಸಿದ್ದಾರೆ. ಇತ್ತೀಚೆಗೆ ಹಾಂಕಾಂಗ್ ಮತ್ತು ಚೀನಾಕ್ಕೆ ಅಪ್ಪಳಿಸಿದ್ದ ಮ್ಯಾಂಗ್​ಖುಟ್ ಚಂಡಮಾರುತದಿಂದ ಸಾಕಷ್ಟು ಹಾನಿಯಾಗಿತ್ತು. ಆದರೆ ಸೇತುವೆಗೆ ಸ್ವಲ್ಪವೂ ಹಾನಿಯಾಗಿಲ್ಲ ಎನ್ನಲಾಗಿದೆ.

1.1 ಲಕ್ಷ ಕೋಟಿ ರೂ. ವೆಚ್ಚ

ಹಾಂಕಾಂಗ್-ಝುುಹಾಯ್-ಮಕಾವ್ ಸೇತುವೆ 55 ಕಿ.ಮೀ. ಉದ್ದವಿದೆ. 22.9 ಕಿ.ಮೀ. ಉದ್ದದ ಮುಖ್ಯಸೇತುವೆ ಪರ್ಲ್ ರಿವರ್ ಡೆಲ್ಟಾ ಸಮುದ್ರದಲ್ಲಿ ನಿರ್ವಿುಸಲಾಗಿರುವ ಕೃತಕ ದ್ವೀಪಕ್ಕೆ ಸಂಪರ್ಕ ಒದಗಿಸುತ್ತದೆ. ಅಲ್ಲಿಂದ ನದಿ ಕೆಳಭಾಗದಲ್ಲಿ 6.7 ಕಿ.ಮೀ. ಸುರಂಗ ಮಾರ್ಗದ ಮೂಲಕ ಮತ್ತೊಂದು ಕೃತಕ ದ್ವೀಪ ಸೇರುತ್ತದೆ. ಹಾಂಕಾಂಗ್​ನ ಪಶ್ಚಿಮ ತಟದಲ್ಲಿರುವ ಮಕಾವ್ ಮತ್ತು ಚೀನಾದ ಝುುಹಾಯ್ ನಗರದ ನಡುವಿನ 3 ಗಂಟೆಯ ಪ್ರಯಾಣದ ಅವಧಿ ಕೇವಲ 30 ನಿಮಿಷಗಳಿಗೆ ಇಳಿಕೆಯಾಗಲಿದೆ! ಸೇತುವೆ ನಿರ್ವಣಕ್ಕೆ ಒಟ್ಟು 1.1 ಲಕ್ಷ ಕೋಟಿ ರೂ. ವೆಚ್ಚವಾಗಿದೆ. ಅಷ್ಟೂ ವೆಚ್ಚವನ್ನು ಹಾಂಕಾಂಗ್ ಭರಿಸಿದೆ.

5 ಸಾವಿರ ಕಾರುಗಳಿಗೆ ಮಾತ್ರ ಅನುಮತಿ

ಈ ಸೇತುವೆ ಮೇಲಿನ ಸಂಚಾರಕ್ಕೆಂದೇ ನಿಯೋಜಿಸಲಾಗಿರುವ ಬಸ್​ನಲ್ಲಿ ಸಾರ್ವಜನಿಕರು ಪ್ರಯಾಣಿಸಬಹುದು. ಒಮ್ಮುಖ ಪ್ರಯಾಣಕ್ಕೆ 1024 ರೂ. ಶುಲ್ಕ ನಿಗದಿಯಾಗಿದೆ. ಕಾರಿನಲ್ಲೂ ಪ್ರಯಾಣಿಸಬಹು. ಆದರೆ ಒಂದು ದಿನಕ್ಕೆ 5 ಸಾವಿರ ಕಾರುಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಪ್ರತಿ ಕಾರಿನವರು 1,639 ರೂ. ಟೋಲ್ ಪಾವತಿಸಬೇಕಾಗುತ್ತದೆ.

ಭಾರತದ ಉದ್ದದ ಬ್ರಿಜ್

ಅಸ್ಸಾಂನ ಧುಬ್ರಿಯಿಂದ ಮೇಘಾಲಯದ ಫೂಲ್​ಬರಿಗೆ ಸಂಪರ್ಕ ಕಲ್ಪಿಸಲು ಬ್ರಹ್ಮಪುತ್ರ ನದಿಗೆ ನಿರ್ವಿುಸಲಾಗುತ್ತಿರುವ 20 ಕಿ.ಮೀ. ಉದ್ದದ ಸೇತುವೆ ಭಾರತದ ಅತಿ ಉದ್ದದ ಸೇತುವೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. 2026-27ಕ್ಕೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ. ಇದೀಗ ಮೇಘಾಲಯದ ಫೂಲ್​ಬರಿಯಿಂದ ಅಸ್ಸಾಂನ ಧುಬ್ರಿಗೆ ಪ್ರಯಾಣಿಸಲು ವಾಹನಗಳು ನಾರಾ ನಾರಾಯಣ್ ಸೇತುವೆಯನ್ನು ಬಳಸಿ 200 ಕಿ.ಮೀ. ಸುತ್ತಿಕೊಂಡು ಪ್ರಯಾಣಿಸುತ್ತವೆ. ಬ್ರಿಜ್ ನಿರ್ಮಾಣ ಬಳಿಕ ದೂರ 20 ಕಿ.ಮೀ.ಗೆ ಇಳಿಕೆಯಾಗಲಿದೆ. ಈ ಎರಡು ಊರುಗಳ ನಡುವೆ ಚಿಕ್ಕ ದೋಣಿಗಳು ಪ್ರಯಾಣಿಸುತ್ತವೆ. ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಲು ಎರಡೂವರೆ ಗಂಟೆ ಬೇಕಾಗುತ್ತದೆ. ಸೇತುವೆ ನಿರ್ಮಾಣ ಬಳಿಕ ಸಂಚಾರದ ಅವಧಿ 15-20 ನಿಮಿಷಕ್ಕೆ ಇಳಿಕೆಯಾಗಲಿದೆ.