ಚೀನಾದಿಂದ ಪಾಕ್‌ಗೆ ಡ್ರೋನ್‌ ಮಾರಾಟ

0
500

ಪಾಕಿಸ್ತಾನಕ್ಕೆ 48 ಅತ್ಯಾಧುನಿಕ ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಮಾರಾಟ ಮಾಡಲು ಚೀನಾ ಮುಂದಾಗಿದೆ. ಉಭಯ ದೇಶಗಳ ನಡುವೆ ಈವರೆಗೆ ನಡೆದ ಅತ್ಯಂತ ದೊಡ್ಡ ರಕ್ಷಣಾ ವ್ಯವಹಾರ ಇದು ಎಂದು ಸೇನಾ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಬೀಜಿಂಗ್ (ಪಿಟಿಐ): ಪಾಕಿಸ್ತಾನಕ್ಕೆ 48 ಅತ್ಯಾಧುನಿಕ ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಮಾರಾಟ ಮಾಡಲು ಚೀನಾ ಮುಂದಾಗಿದೆ. ಉಭಯ ದೇಶಗಳ ನಡುವೆ ಈವರೆಗೆ ನಡೆದ ಅತ್ಯಂತ ದೊಡ್ಡ ರಕ್ಷಣಾ ವ್ಯವಹಾರ ಇದು ಎಂದು ಸೇನಾ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ವಿಂಗ್ ಲೂಂಗ್– 2 ಹೆಸರಿನ ಈ ಡ್ರೋನ್‌ ಅತ್ಯಾಧುನಿಕವಾಗಿದ್ದು ಸ್ಥಳಾನ್ವೇಷಣೆ, ಬಹುವಿಧದಲ್ಲಿ ಕೆಲಸ ಮಾಡುವ ಮಾನವರಹಿತ ವೈಮಾನಿಕ ವ್ಯವಸ್ಥೆಯಾಗಿದೆ. ಇದು ಹೆಚ್ಚೂಕಡಿಮೆ ಅಮೆರಿಕದ ಎಂಕ್ಯೂ–9 ರೀಪರ್ ಡ್ರೋನ್‌ಗೆ ಸಮನಾಗಿದೆ.

ಜೊತೆಗೆ, ಮುಂದೆ ಈ ಡ್ರೋನ್‌ಗಳನ್ನು ಚೀನಾ ಮತ್ತು ಪಾಕಿಸ್ತಾನ ಜಂಟಿಯಾಗಿ ತಯಾರಿಸಲಿವೆ ಎಂದು ‘ಗ್ಲೋಬಲ್‌ ಟೈಮ್ಸ್‌’ ವರದಿ ಮಾಡಿದೆ.

ಈ ಒಪ್ಪಂದದ ಮೊತ್ತವನ್ನು ಬಹಿರಂಗ ಮಾಡಲಾಗಿಲ್ಲ. ಆದರೆ, ಕಳೆದ ವರ್ಷ ಚೀನಾವು ವಿಂಗ್‌ ಲೂಂಗ್‌– 2 ಡ್ರೋನ್‌ಗಳನ್ನು ಅರಬ್‌ ಸಂಯುಕ್ತ ಒಕ್ಕೂಟ ಮತ್ತು ಈಜಿಪ್ಟ್‌ಗೆ ತಲಾ  7.43 ಕೋಟಿಗೆ ಮಾರಾಟ ಮಾಡಿದ್ದಾಗಿ ವರದಿಯಾಗಿತ್ತು.

ಪಾಕಿಸ್ತಾನದ ಸಾರ್ವಕಾಲಿಕ ಗೆಳೆಯ ಚೀನಾ, ಆ ದೇಶಕ್ಕೆ ಅತಿ ಹೆಚ್ಚು ಶಸ್ತ್ರಾಸ್ತ್ರ ಪೂರೈಸಿದ ರಾಷ್ಟ್ರವಾಗಿದೆ. ಎರಡೂ ದೇಶಗಳು ಜೆಎಫ್‌– ಥಂಡರ್‌ ಹೆಸರಿನ ಏಕೈಕ ಎಂಜಿನ್‌ನ ಯುದ್ಧ ವಿಮಾನವನ್ನು ಜಂಟಿಯಾಗಿ ತಯಾರಿಸುತ್ತಿವೆ.

ರಷ್ಯಾದಿಂದ ಅತ್ಯಾಧುನಿಕ ಎಸ್–400 ಕ್ಷಿಪಣಿಗಳನ್ನು ಖರೀದಿ ಮಾಡಲು ಭಾರತ ಮುಂದಾಗಿರುವುದಕ್ಕೆ ಪ್ರತಿಯಾಗಿ ಚೀನಾ, ಸೇನಾ ಡ್ರೋನ್‌ಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಲು ಆಸಕ್ತಿ ತೋರಿದೆ. ಸಾಗರ ಕಣ್ಗಾವಲಿನ 22 ಡ್ರೋನ್‌ಗಳನ್ನು ಭಾರತಕ್ಕೆ ನೀಡಲು ಅಮೆರಿಕ ಒಪ್ಪಿದೆ. ಹಾಗೆಯೇ 10 ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳನ್ನು ಇಸ್ರೇಲ್‌ನಿಂದ ಭಾರತ ಆಮದು ಮಾಡಿಕೊಂಡಿದೆ.